ಹಾವುಗಳನ್ನೇ ತಿಂದು ಬದುಕುವ ಕಾಳಿಂಗ ಸರ್ಪ!

ಕ್ರಿಕೆಟ್‌ನಲ್ಲಿ ಕಿಂಗ್ ಒಬ್ಬನೇ, ಅದೇ ವಿರಾಟ್ ಕೊಹ್ಲಿ. ಹಾಗೆಯೇ ಹಾವುಗಳಲ್ಲಿಯೂ ಕಿಂಗ್ ಎಂದು ಕರೆಸಿಕೊಳ್ಳುವುದು ಒಂದೇ ಹಾವು, ಅದೇ ಕಿಂಗ್ ಕೊಬ್ರಾ. ಹಾವಿನ ಲೋಕಕ್ಕೆ ಅದೇ ಕಿಂಗ್. ಹಾಗಾದರೆ ಇತರ ಹಾವುಗಳ ಹೆಸರುಗಳು ಕಿಂಗ್ ಎಂದು ಶುರುವಾಗುವುದಿಲ್ಲವೇ? ಇದೊಂದೇನಾ ಕಿಂಗು? ಈತರಹದ ಪ್ರಶ್ನೆಗಳು ನಿಮ್ಮಲ್ಲಿ ಬಂದರೆ ಆಶ್ಚರ್ಯ ವೇನೂ ಇಲ್ಲ. ನಿಜ ಹೇಳಬೇಕೆಂದರೆ ಇನ್ನೂ ಕೆಲವು ಹಾವುಗಳು ’ಕಿಂಗ್ ಎನಿಸಿಕೊಳ್ಳುತ್ತವೆ. ಕಿಂಗ್ ರ‍್ಯಾಟ್ ಸ್ನೇಕ್, ಚೈನೀಸ್ ಫೇಲ್ಸ್ ಕಿಂಗ್ ಕೊಬ್ರಾ, ಕಿಂಗ್ ಕಾರ್ನ್, ಕಿಂಗ್ ಸ್ನೇಕ್, ಕಿಂಗ್ ಬ್ರೌನ್ ಸ್ನೇಕ್ ಹೀಗೆ ಅನೇಕ ಹಾವುಗಳು ಕಿಂಗ್ ಎಂಬ ಶಬ್ದದಿಂದಲೇ ಪ್ರಾರಂಭವಾಗುತ್ತವೆ. ಆದರೆ ಈ ಎಲ್ಲ ಹಾವುಗಳಿಗೆ ಕಿಂಗ್ ಕೊಬ್ರಾನೇ ಕಿಂಗ್ ಅಥವಾ ಕಾಳಿಂಗ ಸರ್ಪ!

ಹಾಗಂತ ಕಾಳಿಂಗ ಸರ್ಪ ಹಾವುಗಳಲ್ಲೇ ಹೆಚ್ಚಿನ ವಿಷ ಇರುತ್ತದೆ. ಇದೇ ಶಕ್ತಿಶಾಲಿ ಎಂದರೆ ಅದು ತಪ್ಪು. ಕಿಂಗ್ ಕೊಬ್ರಾಗಿಂತ ಹೆಚ್ಚು ವಿಷಕಾರಿಯಾದ ಹಾವುಗಳಿವೆ. ಜಗತ್ತಿನಲ್ಲಿಯೇ ಅತ್ಯಂತ ವಿಷಕಾರಿ ಹಾವು ಎಂದರೆ ಇನ್‌ಲ್ಯಾಂಡ್ ತೈಪಾನ್ ಎಂಬ ಹಾವು ಮುಂಚೂಣಿಯಲ್ಲಿದೆ. ಮುಂದಿನ ಲೇಖನಗಳಲ್ಲಿ ವಿಷಕಾರಿ ಹಾಗೂ ನಿರುಪದ್ರವಿ ಹಾವುಗಳ ಬಗ್ಗೆ ವಿವರವಾಗಿ ತಿಳಿಯುವ ಪ್ರಯತ್ನ ಮಾಡೋಣ.

ವೈಜ್ಞಾನಿಕ ಹೆಸರು ಒಫಿಯೋಫಾಗಸ್ ಹನ್ನಾ…

ಈಗ ನಮ್ಮ ಹೀರೋ ಕಿಂಗ್ ಕೊಬ್ರಾ ವಿಷಯಕ್ಕೆ ಬರೋಣ. ಇದರ ವೈಜ್ಞಾನಿಕ ಹೆಸರು ಒಫಿಯೋಫಾಗಸ್ ಹನ್ನಾ (Ophiophagus hannah). ಯಾಕೆ ಇದನ್ನು ಒಫಿಯೋ ಫಾಗಸ್ ಹನ್ನಾ ಎನ್ನುತ್ತಾರೆ? ಒಂದು ಪ್ರಬೇಧ ಅಥವಾ ಪ್ರಾಣಿಗೆ ಹೆಸರಿಡುವಾಗ ಏನಾದರೂ ಅರ್ಥವಿರಲೇಬೇಕಲ್ಲವೇ? ಹೌದು. ಒಫಿಯೋಫಾಗಸ್ ಎಂಬ ಶಬ್ದ ಗ್ರಿಕ್ ಭಾಷೆಯಿಂದ ಬಂದದ್ದು. ಗ್ರೀಕ್‌ನಲ್ಲಿ ಒಫಿಸ್ (Ophis) ಎಂದರೆ ಹಾವು ಮತ್ತು ಫೇಜಿನ್ (phagein) ಎಂದರೆ ತಿನ್ನುವುದು ಎಂದರ್ಥ ಕೊಡುತ್ತದೆ. ಅಂದರೆ ಒಫಿಯೋಫಾಗಸ್ ಇದನ್ನು ಸರಳ ಭಾಷೆಯಲ್ಲಿ ಹೇಳುವುದಾದರೆ ಹಾವುಗಳನ್ನು ತಿನ್ನುವುದು. ಅಂದರೆ ಈ ಕಿಂಗ್ ಕೊಬ್ರಾ ತನ್ನ ಆಹಾರವಾಗಿ ಇತರ ಹಾವುಗಳನ್ನು ತಿನ್ನುತ್ತದೆಯೆಂದಾಯಿತು. ಮತ್ತೆ ಹನ್ನಾ ಎಂದರೇನು ಎಂದು ತಲೆ ಕೆರೆದುಕೊಳ್ಳಬೇಡಿ. ಇದಕ್ಕೂ ವಿಜ್ಞಾನದಲ್ಲಿ ಎರಡು ಆಸಕ್ತಿದಾಯಕ ಹಿನ್ನೆಲೆಯಿದೆ.

ಗ್ರೀಕ್ ಪುರಾಣದ ಪ್ರಕಾರ ಕಾಡಿನಲ್ಲಿ ಮರಗಳನ್ನು ರಕ್ಷಿಸುವ ದೇವತೆಗಳನ್ನು ’ಹಮಾದ್ರಿಯಾದ್ಸ್’ (Hamadryas) ಎಂದು ಕರೆಯಲಾಗುತ್ತಿತ್ತು. ಕಾಳಿಂಗ ಸರ್ಪ ಕೂಡ ಹೆಚ್ಚಾಗಿ ದಟ್ಟವಾದ ಕಾಡುಗಳಲ್ಲಿ ಮತ್ತು ಮರಗಳ ಮೇಲೆ ಕಂಡುಬರುವುದರಿಂದ, ಡ್ಯಾನಿಶ್ ಸಸ್ಯಶಾಸ್ತ್ರಜ್ಞ ಥಿಯೋಡರ್ ಕ್ಯಾಂಟರ್ ಈ ಹಾವಿನ ಪ್ರಬೇಧಕ್ಕೆ ಹಮಾದ್ರಿಯಾಸ್ ಹನ್ನಾ (Hamadryas hannah) ಎಂದು ಹೆಸರಿಟ್ಟರು. ಮುಂದೆ ಇದು ಒಫಿಯೋಫಾಗಸ್ ಹನ್ನಾ ಆಗಿ ಉಳಿದುಕೊಂಡಿತು. ಇನ್ನೊಂದು ಥಿಯರಿ ಪ್ರಕಾರ ಥಿಯೋಡರ್ ಕ್ಯಾಂಟರ್ ಭಾರತದಲ್ಲಿದ್ದಾಗ ಅವರಿಗೆ ಆಶ್ರಯ ನೀಡಿದ್ದ ಇನ್ನೊಬ್ಬ ಪ್ರಸಿದ್ದ ಸಸ್ಯಶಾಸ್ತ್ರಜ್ಞ ನ್ಯಾಥಾನಿಯಲ್ ವಲಿಸ್ ಅವರ ಮಗಳು ’ಹನ್ನಾ ಸಾರಾ ವಾಲಿಸ್’ ನೆನಪಿಗಾಗಿ ಈ ಹೆಸರನ್ನು ಇಟ್ಟಿರಬಹುದು ಎಂದೂ ಹೇಳಲಾಗುತ್ತದೆ.

ಕಾಳಿಂಗ ಸರ್ಪಗಳು ನೀರಿನಲ್ಲಿ ಚೆನ್ನಾಗಿ ಈಜಬಲ್ಲವು!

ಕಿಂಗ್ ಕೊಬ್ರಾದ ನಾಮಕರಣ ಮುಗಿಸಿಯಾಯಿತು. ಆಲ್ ರೈಟ್, ಮುಂದಕ್ಕೊಗೋಣ. ಇದರ ಮೂಲ ಯಾವುದೇ ಒಂದು ದೇಶಕ್ಕೆ ಸೀಮಿತವಾಗಿಲ್ಲ. ಆದರೆ ಇದು ಹೆಚ್ಚಾಗಿ ದಕ್ಷಿಣ ಮತ್ತು ಆಗ್ನೇಯ ಏಷ್ಯಾದಲ್ಲಿ ಹೆಚ್ಚಾಗಿ ಕಂಡು ಬರುತ್ತವೆ. ಭಾರತ, ಬಾಂಗ್ಲಾದೇಶ, ಭೂತಾನ್, ನೇಪಾಳ, ಮ್ಯಾನ್ಮಾರ್, ಥೈಲ್ಯಾಂಡ್, ಕಾಂಬೋಡಿಯಾ, ಲಾವೋಸ್, ವಿಯೆಟ್ನಾಂ, ದಕ್ಷಿಣ ಚೀನಾ, ಮಲೇಷ್ಯಾ, ಸಿಂಗಾಪುರ, ಇಂಡೋನೇಷ್ಯಾ ಮತ್ತು ಫಿಲಿಫೈನ್ಸ್‌ಗಳ ದಟ್ಟ ಕಾಡುಗಳಲ್ಲಿ ನೋಡಬಹುದು. ಕಿಂಗ್ ಹೆಚ್ಚಾಗಿ ಉಷ್ಣವಲಯದ ದಟ್ಟವಾದ ಕಾಡುಗಳಲ್ಲಿ ವಾಸಿಸಲು ಇಷ್ಟಪಡುತ್ತದೆ. ಅಲ್ಲದೆ ಅತಿ ಹೆಚ್ಚು ತೇವಾಂಶವಿರುವ, ನಿತ್ಯ ಹರಿದ್ವರ್ಣ ಕಾಡುಗಳೂ ಸಹ ಇವುಗಳ ನೆಚ್ಚಿನ ಆವಾಸಸ್ಥಾನ ಎನ್ನಬಹುದು. ಭಾರತದ ಪಶ್ಚಿಮ ಘಟ್ಟಗಳ ಕಾಡುಗಳನ್ನು ಉದಾಹರಣೆಯಾಗಿ ತೆಗೆದುಕೊಳ್ಳಬಹುದು. ಹಾಗೆಯೇ ನದಿಗಳು, ತೊರೆಗಳು, ಹಳ್ಳಗಳು ಅಥವಾ ಸರೋವರಗಳ ಹತ್ತಿರವಿರುವ ಜಾಗಗಳಲ್ಲಿ ಹೆಚ್ಚಾಗಿ ಸಂಚರಿಸುತ್ತವೆ. ಅವುಗಳ ಆಹಾರವಾದ ಇತರ ಹಾವುಗಳು ಇಂತಹ ನೀರಿರುವ ಜಾಗಗಳಲ್ಲಿ ಸಿಗುವುದು ಇದಕ್ಕೆ ಕಾರಣ. ಇದರ ಇನ್ನೊಂದು ವಿಶೇಷ ಗುಣ ಎಂದರೆ, ಈಜು. ಕಾಳಿಂಗ ಸರ್ಪಗಳು ಎಂತಹುದೇ ಸೆಳೆತ ಇರುವ ನೀರಿನಲ್ಲಿ ಚೆನ್ನಾಗಿ ಈಜಬಲ್ಲವು. ಅಲ್ಲದೆ ಇವು ಹೆಚ್ಚಾಗಿ ನೆಲದ ಮೇಲೆ ಬಿದ್ದಿರುವ ಒಣಗಿದ ಎಲೆಗಳ ರಾಶಿ, ಮುರಿದು ಬಿದ್ದಿರುವ ಮರದ ದಿಮ್ಮಿಗಳು, ಕಲ್ಲುಗಳ ಸಂದಿಗಳು ಅಥವಾ ಹುತ್ತಗಳಲ್ಲಿ ಅಡಗಿಕೊಳ್ಳುತ್ತವೆ. ಹೀಗಾಗಿ ಇಂತಹ ಜಾಗಗಳಲ್ಲಿ ಸಂಚರಿಸುವಾಗ ನಾವು ಹೆಚ್ಚು ಜಾಗರೂಕ ರಾಗಿರಬೇಕು. ಇಲ್ಲದಿದ್ದರೆ ಖೇಲ್ ಖತಂ! ಹಾಂ, ಇತ್ತೀಚೆಗೆ ಕಾಫಿ ತೋಟಗಳು, ಅಡಿಕೆ ತೋಟಗಳು ಹಾಗೂ ರಬ್ಬರ್ ತೋಟಗಳಿಗೂ ಇವು ಆಹಾರ ಹುಡುಕಿಕೊಂಡು ಬರುತ್ತಿವೆ.

ಅತಿ ಉದ್ದದ ವಿಷಕಾರಿ ಹಾವು ಎಂದರೆ ಅದು ಕಾಳಿಂಗ ಸರ್ಪ!

ಇನ್ನು ಕಾಳಿಂಗ ಸರ್ಪದ ದೇಹರಚನೆ ಹೇಗಿದೆ ಎಂದು ನೋಡೋಣ. ಇದು ಸಾಮಾನ್ಯವಾಗಿ ೧೦ರಿಂದ ೧೩ ಅಡಿ ಉದ್ದವಿರುತ್ತವೆ. ಕೆಲವೊಮ್ಮೆ ೧೮ ಅಡಿಗಳಷ್ಟು ಉದ್ದದ ಕಿಂಗ್ ಕೊಬ್ರಾ ಕಾಣಸಿಗುವುದುಂಟು. ಈ ಕಾರಣದಿಂದ ಜಗತ್ತಿನಲ್ಲಿಯೇ ಅತಿ ಉದ್ದದ ವಿಷಕಾರಿ ಹಾವು ಎಂದರೆ ಅದು ಕಾಳಿಂಗ ಸರ್ಪ. ಸುಮಾರು ೬ರಿಂದ ೯ ಕೆಜಿಯಷ್ಟು ತೂಕವಿರುತ್ತವೆ. ಅಲ್ಲದೆ ಇದರ ಮೈಬಣ್ಣ ಅಂದರೆ ಚರ್ಮದ ಬಣ್ಣ ಅದು ವಾಸಿಸುವ ಪರಿಸರಕ್ಕನುಗುಣವಾಗಿ ವಿವಿಧ ಬಣ್ಣಗಳಲ್ಲಿ ಕಂಡು ಬರಬಹುದು. ಹೆಚ್ಚಾಗಿ ಕಂಡು ಬರುವ ಕಾಳಿಂಗ ಸರ್ಪಗಳು ಹಳದಿ, ಹಸಿರು, ಕಂದು ಅಥವಾ ಕಪ್ಪು ಬಣ್ಣದಲ್ಲಿರುತ್ತವೆ. ಮೈಮೇಲೆಲ್ಲ ಬಿಳಿ ಅಥವಾ ಹಳದಿ ಬಣ್ಣದ ಅಡ್ಡ ಪಟ್ಟಿಗಳು ಅಥವಾ ಗಿ ಆಕಾರದ ಚಿಹ್ನೆಗಳಿರುವಂತೆ ಕಾಣುತ್ತದೆ. ಸಾಮಾನ್ಯವಾಗಿ ಹೊಟ್ಟೆಯ ಭಾಗ ಒಂದೇ ಬಣ್ಣದಲ್ಲಿರುತ್ತದೆ. ಇನ್ನು ಶತ್ರುಗಳು ಕಂಡು ಬಂದರೆ ತನ್ನ ಹೆಡೆಯನ್ನು ಅಗಲವಾಗಿಸಿ, ತಲೆಯನ್ನು ನೇರವಾಗಿ ಮೇಲಕ್ಕೆತ್ತಿ, ಮೈ ಉಬ್ಬಿಸಿ ಬುಸುಗುಡುತ್ತದೆ. ಅಲ್ಲದೆ ತನ್ನ ದೇಹದ ಮೂರನೇ ಒಂದು ಭಾಗವನ್ನು ಮೇಲಕ್ಕೆತ್ತಿ ನೇರವಾಗಿ ನಿಲ್ಲಬಲ್ಲವು.

ಪುಂಗಿಯ ನಾದಕ್ಕೆ ಏಕೆ ನೃತ್ಯ ಮಾಡುತ್ತವೆ?

ಹಾವುಗಳಿಗೆ ಬಾಹ್ಯ ಕಿವಿ ಇರುವುದಿಲ್ಲ. ಆದರೆ ತಲೆಯ ಒಳಗಡೆ ಶಬ್ದ ಗ್ರಹಿಸಲು ಸಹಾಯವಾಗುವಂತಹ ಒಳಗಿವಿಯ ರಚನೆ ಇರುತ್ತದೆ. ಇದು ಅವುಗಳ ದವಡೆಯ ಮೂಳೆಗೆ ಸಂಪರ್ಕ ಹೊಂದಿರುತ್ತದೆ. ಆದ್ದರಿಂದ ಕಾಳಿಂಗ ಸರ್ಪ ಅಥವಾ ಇತರೆ ಹಾವುಗಳು ಗಾಳಿಯಲ್ಲಿ ತೇಲಿಬರುವ ಶಬ್ದಗಳನ್ನು ಗ್ರಹಿಸಲಾರವು. ಆದರೆ ನೆಲದ ಮೇಲಾಗುವ ಕಂಪನಗಳನ್ನು ಗ್ರಹಿಸಿ, ದವಡೆಯ ಮೂಲಕ ಒಳಕಿವಿಗೆ ತಲುಪುತ್ತವೆ. ಹೀಗೆ ಶತ್ರುಗಳು ಹತ್ತಿರದಲ್ಲಿರುವುದರ ಇರುವನ್ನು ಗ್ರಹಿಸಿ, ದಾಳಿಗೆ ಅಥವಾ ಪಲಾಯನ ಮಾಡಲು ಮುಂದಾಗುತ್ತದೆ. ಹಾಗಾದರೆ ಹಾವಾಡಿಗನ ಪುಂಗಿಯ ನಾದಕ್ಕೆ ಏಕೆ ನೃತ್ಯ ಮಾಡುತ್ತವೆ ಎಂದು ನೀವು ಕೇಳಬಹುದು. ನಿಜಕ್ಕಾದರೆ ಪುಂಗಿಯ ನಾದ ಹಾವಿಗೆ ಕೇಳುವುದೇ ಇಲ್ಲ. ಬದಲಿಗೆ ಹಾವಾಡಿಗನ ಕೈ ಅಥವಾ ಪುಂಗಿಯ ಚಲನೆಯನ್ನು ನೋಡಿ ಅದು ತಲೆಯಾಡಿಸುತ್ತದೆ.

ಇನ್ನು ಮೊದಲೇ ಹೇಳಿದಂತೆ ಇವುಗಳ ಕಾಳಿಂಗದ ಆಹಾರ ಇತರ ಹಾವುಗಳೇ ಆಗಿವೆ. ಕೆಲವೊಮ್ಮೆ ಹಸಿವಾದಾಗ ಹಾವುಗಳು ಸಿಗದಿದ್ದರೆ ಅನಿವಾರ್ಯವಾಗಿ ಸಣ್ಣ ಪಕ್ಷಿಗಳು ಮತ್ತು ಹಲ್ಲಿಯಂತಹ ಪ್ರಾಣಿಗಳನ್ನು ತಿನ್ನುತ್ತವೆ. ಹಾವುಗಳನ್ನೇ ತಿನ್ನುವುದಕ್ಕೂ ಒಂದು ಕಾರಣವಿದೆ. ಇತರ ಹಾವುಗಳಂತೆ ಇವು ದೊಡ್ಡದೊಡ್ಡ ಪ್ರಾಣಿಗಳನ್ನು ತಿಂದು ಜೀರ್ಣಿಸಿಕೊಳ್ಳಲಾರವು. ಹೆಬ್ಬಾವಿನಂತೆ ಇತರ ಪ್ರಾಣಿಗಳ ಎಲುಬು ಹಾಗು ಚರ್ಮಗಳನ್ನು ಜೀರ್ಣಿಸಿಕೊಳ್ಳುವ ಶಕ್ತಿ ಇದರ ಜೀರ್ಣಾಂಗಕ್ಕಿಲ್ಲ. ಹಾಗಾಗಿ ತುಂಬ ಸುಲಭವಾಗಿ ಜೀರ್ಣವಾಗುವ ಹಾವುಗಳೇ ಇದಕ್ಕೆ ಉತ್ತಮ ಆಹಾರವಾಗುತ್ತವೆ.

ಕಾಳಿಂಗ ಸರ್ಪ ಮಾತ್ರ ಗೂಡುಗಳನ್ನು ಕಟ್ಟುತ್ತವೆ!

ಕಾಳಿಂಗ ಸರ್ಪದ ಬಗ್ಗೆ ಇನ್ನೊಂದು ಕುತೂಹಲಕಾರಿಯಾದ ವಿಷಯವಿದೆ. ಸಾಮಾನ್ಯವಾಗಿ ಹಾವುಗಳು ಗೂಡು ಕಟ್ಟಲಾರವು. ಆದರೆ ಕಾಳಿಂಗ ಸರ್ಪ ಮಾತ್ರ ತಮ್ಮ ಸಂತಾನೋತ್ಪತ್ತಿ ಸಮಯದಲ್ಲಿ ಅಂದರೆ ಮಾರ್ಚ್‌ನಿಂದ ಮೇ ಅಂತ್ಯದ ಸಮಯದಲ್ಲಿ ಸುತ್ತಮುತ್ತ ಸಿಗುವ ಒಣ ಎಲೆಗಳು ಹಾಗೂ ಕಸಗಳನ್ನು ಗೂಡುಗಳನ್ನು ಕಟ್ಟುತ್ತವೆ. ಇನ್ನು ಇವುಗಳ ಮಿಲನಕ್ರಿಯೆಯೂ ಸಹ ವಿಶೇಷವಾಗಿಯೇ ಇರುತ್ತದೆ. ಇವುಗಳ ಸಂತಾನೋತ್ಪತ್ತಿ ಪ್ರಕ್ರಿಯೆಯು ಜನವರಿಯಿಂದ ಏಪ್ರಿಲ್ ತಿಂಗಳಿನಲ್ಲಿ ನಡೆಯುತ್ತದೆ. ಈ ಸಮಯದಲ್ಲಿ ಹೆಣ್ಣು ಕಾಳಿಂಗವು ತನ್ನ ಚರ್ಮದಿಂದ ಒಂದು ರೀತಿಯ ವಿಶೇಷ ರಾಸಾಯನಿಕವನ್ನು ಬಿಡುಗಡೆ ಮಾಡುತ್ತ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಚಲಿಸುತ್ತದೆ. ಸಂಗಾತಿಯನ್ನು ಅರಸುತ್ತಿರುವ ಗಂಡು ಕಾಳಿಂಗವು ಈ ವಾಸನೆಯನ್ನು ಗೃಹಿಸಿ ಹೆಣ್ಣು ಕಾಳಿಂಗ ಎಲ್ಲಿದೆ ಎಂದು ಪತ್ತೆ ಹಚ್ಚಿ ಅದನ್ನು ಹಿಂಬಾಲಿಸುತ್ತದೆ.
ಆದರೆ ಇಲ್ಲಿ ಗಂಡು ಕಾಳಿಂಗಕ್ಕೆ ತನ್ನ ಪ್ರೇಯಸಿಯನ್ನು ಒಲಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಅದಕ್ಕಾಗಿ ದೊಡ್ಡ ಯುದ್ಧವನ್ನೇ ಮಾಡಬೇಕಾಗುತ್ತದೆ. ಹೆಣ್ಣು ಕಾಳಿಂಗ ಬಿಡುಗಡೆ ಮಾಡುವ ರಾಸಾಯನಿಕದ ವಾಸನೆಯನ್ನು ಆಘ್ರಾ ಣಿಸಿ, ಒಂದಕ್ಕಿಂತ ಹೆಚ್ಚು ಗಂಡು ಕಾಳಿಂಗಗಳು ಒಂದೆಡೆ ಸೇರುತ್ತವೆ. ಆಗ ಇವುಗಳ ನಡುವೆ ಹೆಣ್ಣು ಕಾಳಿಂಗಕ್ಕಾಗಿ ಪೈಪೋಟಿ ನಡೆಯುತ್ತದೆ. ಎರಡು ಗಂಡು ಕಾಳಿಂಗಗಳು ತಮ್ಮ ದೇಹವನ್ನು ಗಾಳಿಯಲ್ಲಿ ಎತ್ತಿ, ಪರಸ್ಪರ ಒಂದಕ್ಕೊಂದು ಸುತ್ತಿಕೊಳ್ಳುತ್ತವೆ. ಒಬ್ಬರನ್ನೊಬ್ಬರು ನೆಲಕ್ಕೆ ತಳ್ಳಲು ಪ್ರಯತ್ನಿಸುತ್ತವೆ. ಆದರೆ ಈ ಹೋರಾಟದಲ್ಲಿ ಅವು ಪರಸ್ಪರ ಕಚ್ಚುವುದಿಲ್ಲ. ಹಾಗೆಯೇ ವಿರೋಧಿ ಎಷ್ಟೇ ಬಲಿಷ್ಠವಾಗಿದ್ದರೂ ತಮ್ಮಲ್ಲಿರುವ ವಿಷದ ಪ್ರಯೋಗವನ್ನೂ ಸಹ ಮಾಡುವುದಿಲ್ಲ. ಬದಲಿಗೆ ತಮ್ಮ ಬಲದಿಂದಲೆ ಶತೃವನ್ನು ಸೋಲಿಸಿ, ಹೆಣ್ಣು ಹಾವಿನೊಂದಿಗೆ ಮಿಲನ ನಡೆಸುವ ಹಕ್ಕನ್ನು ಪಡೆಯುತ್ತವೆ. ಸೋತ ಗಂಡು ಕಾಳಿಂಗ ಎದುರಾಡದೆ ಅಲ್ಲಿಂದ ಹೊರಟು ಹೋಗುತ್ತದೆ.

ಡಿವೈನ್ ಮದರ್!

ಗೆದ್ದ ಗಂಡು ಹಾವು ಹೆಣ್ಣು ಹಾವಿನೊಂದಿಗೆ ತಳುಕು ಹಾಕಿಕೊಂಡು ಹೆಣ್ಣಿನ ಒಪ್ಪಿಗೆ ಕೇಳುತ್ತದೆ. ಹೆಣ್ಣು ಹಾವಿನ ಒಪ್ಪಿಗೆ ಸಿಕ್ಕ ತಕ್ಷಣ ಎರಡೂ ಹಾವುಗಳ ಪರಸ್ಪರ ತಮ್ಮ ದೇಹವನ್ನು ತಳುಕು ಹಾಕಿಕೊಳ್ಳುತ್ತವೆ. ಇವುಗಳಿಗೆ ’ಹೆಮಿಪೆನಿಸ್ ಎಂಬ ಎರಡು ಜನನಾಂಗಗಳಿರುತ್ತವೆ. ಮಿಲನದ ಸಮಯದಲ್ಲಿ ಅದರಲ್ಲಿ ಒಂದನ್ನು ಹೆಣ್ಣು ಜನನಾಂಗದ ಒಳಗೆ ಸೇರಿಸುತ್ತದೆ. ಹೀಗೆ ಇವುಗಳ ಮಿಲನ ಕ್ರಿಯೆಯು ಕೆಲವು ಗಂಟೆಗಳಿಂದ ಹಿಡಿದು ಇಡೀ ದಿನ ಮುಂದುವರಿಯಬಹುದು. ಮಿಲನದ ನಂತರ ಗಂಡು ಹಾವು ಹೊರಟು ಹೋಗುತ್ತದೆ. ಆದರೆ ಹೆಣ್ಣು ಕಾಳಿಂಗ ಮಾತ್ರ ಮೊಟ್ಟೆಯಿಡಲು ಗೂಡು ಕಟ್ಟುತ್ತದೆ. ಈ ಗೂಡಿನಲ್ಲಿ ೨೦ರಿಂದ ೪೦ ಮೊಟ್ಟೆಗಳನ್ನು ಇಡುತ್ತದೆ. ಮೊಟ್ಟೆಗಳು ಒಡೆದು ಮರಿಯಾಗಲು ಸುಮಾರು ೬೦ರಿಂದ ೯೦ ದಿನಗಳು ಬೇಕು. ಅಲ್ಲಿಯವರೆಗೆ ಹೆಣ್ಣು ಹಾವು ಆಹಾರವನ್ನೂ ಸೇವಿಸದೆ ಮೊಟ್ಟೆಗಳಿಗೆ ಕಾವಲಾಗಿರುತ್ತದೆ. ಅಷ್ಟೇ ಅಲ್ಲದೆ, ಮೊಟ್ಟೆಯೊಡೆದು ಮರಿಗಳು ಹೊರ ಬರುವ ಮುನ್ನವೇ ಹೆಣ್ಣು ಅಲ್ಲಿಂದ ಹೊರಟು ಹೋಗುತ್ತದೆ. ಕಾವಲು ಕಾಯುವ ಸಮಯದಲ್ಲಿ ಆಹಾರ ತೆಗೆದುಕೊಳ್ಳದ ಕಾರಣ ಹೆಣ್ಣು ಹಾವಿಗೆ ಹಸಿವು ಕಾಡುತ್ತದೆ. ಮೊಟ್ಟೆಯೊಡೆದು ಮರಿ ಹಾವುಗಳು ಹೊರ ಬಂದ ತಕ್ಷಣ ತಿನ್ನಬಾರದಲ್ಲವೇ? ಅದಕ್ಕಾಗಿ ಮರಿ ಹೊರ ಬರುವ ಮುನ್ನವೇ ಹೆಣ್ಣು ಕಾಳಿಂಗ ಅಲ್ಲಿಂದ ಹೊರಟು ಹೋಗುತ್ತದೆ. ಈ ಕಾರಣಕ್ಕಾಗಿ ಇಗ್ಲೀಷಿನಲ್ಲಿ ಹೆಣ್ಣು ಕಾಳಿಂಗಕ್ಕೆ ಡಿವೈನ್ ಮದರ್ ಎನ್ನುತ್ತಾರೆ.

ಕಾಳಿಂಗ ಸರ್ಪದ ವಿಷ ಮಾರಣಾಂತಿಕ!

ಕಾಳಿಂಗ ಸರ್ಪದ ವಿಷ ಮಾರಣಾಂತಿಕವೇ? ಖಂಡಿತ ಹೌದು. ಕಾಳಿಂಗ ಸರ್ಪ ಕಚ್ಚಿದಾಗ ಅದು ಹೊರ ಹಾಕುವ ವಿಷವು ನೇರವಾಗಿ ನಮ್ಮ ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ. ವಿಷವು ರಕ್ತದ ಮೂಲಕ ಮೆದುಳು ಮತ್ತು ನರಗಳ ತಲುಪುತ್ತಿದ್ದಂತೆ ದೃಷ್ಟಿ ಮಂಜಾಗುವುದು, ತಲೆ ಸುತ್ತುವುದು ಹಾಗೂ ನಡುಕ ಶುರುವಾಗುತ್ತದೆ. ಮಾತು ತೊದಲುತ್ತದೆ. ಕೆಲವೇ ನಿಮಿಷದಲ್ಲಿ ಪಾರ್ಶ್ವವಾಯುವಿಗೂ ತುತ್ತಾಗಬಹುದು. ಕಚ್ಚಿದ ನಂತರ ಉಸಿರಾಟದ ಸ್ನಾಯುಗಳು ನಿಷ್ಕ್ರೀಯಗೊಳ್ಳುತ್ತವೆ. ಇದರಿಂದಾಗಿ ಉಸಿರುಗಟ್ಟಿ ಸಾವು ಬರುತ್ತದೆ. ಸಾಮಾನ್ಯವಾಗಿ ಕಾಳಿಂಗ ಸರ್ಪ ಕಚ್ಚಿದ ೨೦ ನಿಮಿಷದಿಂದ ೨ ಗಂಟೆಯೊಳಗೆ ಸರಿಯಾದ ಚಿಕಿತ್ಸೆ ಸಿಗದಿದ್ದಲ್ಲಿ ಸಾಯುವುದು ಶತಃಸಿದ್ಧ.

ಹಾಗಾದರೆ ಹಾವುಗಳ ಕಡಿತಕ್ಕೆ ಔಷಧಿಯೇ ಇಲ್ಲವೇ? ಖಂಡಿತವಾಗಿಯೂ ಇದೆ. ಇದಕ್ಕೆ ಇರುವ ಏಕೈಕ ಔಷಧಿಯೆಂದರೆ ’ಆಂಟಿ ವೇನಮ್. ಆದರೆ ಸಾಮಾನ್ಯವಾಗಿ ಕಾಳಿಂಗ ಸರ್ಪ ಕಡಿತಕ್ಕೆ ಈ ’ಆಂಟಿ ವೇನಮ್ ಕೆಲಸ ಮಾಡುವುದಿಲ್ಲ. ಇದಕ್ಕಂತಲೇ ವಿಶೇಷ ’ಮೊನೊವೇಲೆಂಟ್ ಕಿಂಗ್ ಕೋಬ್ರಾ ಆಂಟಿ-ವೆನಮ್ ಎಂಬ ಪ್ರತ್ಯೇಕ ಔಷಧಿಯನ್ನು ನೀಡಬೇಕಾಗುತ್ತದೆ. ಇದು ಎಲ್ಲ ಆಸ್ಪತ್ರೆಗಳಲ್ಲಿ ಸಿಗುವುದು ಕಷ್ಟ. ಕಾಳಿಂಗ ಸರ್ಪಗಳು ಕಂಡು ಬರುವ ಪ್ರದೇಶಗಳ ಜಿಲ್ಲಾಸ್ಪತ್ರೆಗಳಲ್ಲಿ ಸಿಗುವ ವ್ಯವಸ್ಥೆ ಇರುತ್ತದೆ.

Leave a Reply

Your email address will not be published. Required fields are marked *

error: Content is protected !!