Tag: Bougainvillea

  • ನಮಗೆ ತಿಳಿಯದ ಬೌಗೆನ್ವಿಲ್ಲಾ ಹೂವಿನ ರಹಸ್ಯ!

    ನಮಗೆ ತಿಳಿಯದ ಬೌಗೆನ್ವಿಲ್ಲಾ ಹೂವಿನ ರಹಸ್ಯ!

    ಹಲ್ಲೋ ಗೆಳೆಯರೇ, ಇವತ್ತು ಮೊದಲಿಗೆ ಒಂದು ಟೀ ಕುಡಿಯೋಣವೇ? ಟೀ ಅಂದ್ರೆ ಮಾಮೂಲಿ ಅಲ್ಲಾ, ಆರೋಗ್ಯಕರವಾದ ಟೀ. ಬೌಗೆನ್ವಿಲ್ಲಾ ಟೀ.

    ಬೌಗೆನ್ವಿಲ್ಲಾ

    ಮೊದಲಿಗೆ ಎರಡು ಕಪ್ ನೀರನ್ನು ಒಂದು ಪಾತ್ರೆಗೆ ಹಾಕಿ ಕುದಿಸಿ. ಹತ್ತರಿಂದ ಹದಿನೈದು ಕೆಂಪು ಬೌಗೆನ್ವಿಲ್ಲಾ ಹೂವುಗಳನ್ನು ಚೆನ್ನಾಗಿ ತೊಳೆದು ಕುದಿಯುವ ನೀರಿಗೆ ಹಾಕಿ. ಜೊತೆಗೆ ಒಂದು ಚೂರು ದಾಲ್ಚಿನ್ನಿ ಚಕ್ಕೆಯನ್ನು ಸಹಾ ಕುದಿಯುವ ನೀರಿಗೆ ಹಾಕಿ. ಸುಮಾರು ಐದು ನಿಮಿಷಗಳ ನಂತರ ಪಾತ್ರೆಯನ್ನು ಇಳಿಸಿ ಚಹಾವನ್ನು ಸೋಸಿ ಒಂದು ಕಪ್‌ಗೆ ಹಾಕಿ. ಅದಕ್ಕೆ ರುಚಿಗೆ ತಕ್ಕಷ್ಟು ಅಂದರೆ ಸುಮಾರು ಎರಡು ಚಮಚದಷ್ಟು ಜೇನುತುಪ್ಪವನ್ನು ಸೇರಿಸಿ. ಈಗ ಕೆಂಪು ಬಣ್ಣದ ಬೌಗೆನ್ವಿಲ್ಲಾ ಚಹ ಸವಿಯಲು ರೆಡಿ.

    ಇಷ್ಟಕ್ಕೂ ಚಹಾದ ವಿಷಯ ಈ ಕಾಲಂನಲ್ಲೇಕೆ ಬಂತು ಅಂತೀರಾ? ಇದು ಅಂತಿಂಥ ಚಹಾ ಅಲ್ಲ, ಈ ಚಹದಲ್ಲಿ ಅನೇಕ ಔಷಧಿಯುಕ್ತ ಗುಣಗಳಿವೆ. ಇದರ ಔಷಧೀಯ ಗುಣಗಳ ಬಗ್ಗೆ ಕೊನೆಯಲ್ಲಿ ಚರ್ಚಿಸೋಣ. ಮೊದಲಿಗೆ ಬೌಗೆನ್ವಿಲ್ಲಾ ಗಿಡ, ಹೂವುಗಳ ಬಗ್ಗೆ ತಿಳಿಯೋಣ.

    ಬೌಗೆನ್ವಿಲ್ಲಾ

    ಬೌಗೆನ್ವಿಲ್ಲಾ ಮೂಲ ದಕ್ಷಿಣ ಅಮೇರಿಕಾ!

    ಬೌಗೆನ್ವಿಲ್ಲಾ ಹೂವು ದಕ್ಷಿಣ ಅಮೇರಿಕಾ ಮೂಲದ್ದು. ಇದು ದಕ್ಷಿಣ ಅಮೆರಿಕಾ, ಏಷ್ಯಾ, ಆಫ್ರಿಕಾ ಮತ್ತು ಉಷ್ಣವಲಯದ ಮತ್ತು ಬೆಚ್ಚನೆಯ ಹವಾಮಾನದಲ್ಲಿ ಹೆಚ್ಚಾಗಿ ಬೆಳೆಯುತ್ತದೆ. ಹೂವಿನ ದಳಗಳು ತೆಳ್ಳನೆಯ ಪೇಪರಿನ ಹಾಗೆ ಇರುವುದರಿಂದ ಇದನ್ನು ಕಾಗದದ ಹೂವು ಅಥವಾ ಪೇಪರ್ ಫ್ಲವರ್ ಎಂದೂ ಕರೆಯುತ್ತಾರೆ.

    ಬಂಗಾಳಿಯಲ್ಲಿ ಬಗಾನ್ ಬಿಲಾಶ್, ಚೀನಾದಲ್ಲಿ ಮಾವೋ ಬಾವೊ ಜಿನ್, ಜಿಯು ಚೊಂಗ್ ಜಿ, ಸ್ಯಾನ್ ಜಿಯಾವೊ ಹುವಾ, ಹಿಂದಿಯಲ್ಲಿ ಬೂಗನ್ಬೆಲ್, ಇಂಡೋನೆಷಿಯಾದಲ್ಲಿ ಬುಗಾನ್ವಿಲ್, ಬುಂಗಾ ಕೆಟಾರ್ಸ್, ಜಪಾನ್‌ನಲ್ಲಿ ಪೆಲಿಲಾ, ಥೈಲ್ಯಾಂಡ್‌ನಲ್ಲಿ ಫುವಾಂಗ್ ಫಾಹ್ ಮತ್ತು ಹೋವಾ ಗಿಯೆ, ವಿಯೆಟ್ನಾಮ್‌ನಲ್ಲಿ ಬಾಂಗ್ ಗಿಯೆ ಎಂದೂ, ಕೊಂಕಣಿಯಲ್ಲಿ ಬೌಗೆನ್ವಿಲ್ಲಾ, ಮಣಿಪುರಿ ಭಾಷೆಯಲ್ಲಿ ಚೆರೆ ಮತ್ತು ತೆಲುಗಿನಲ್ಲಿ ಕಗಿತಾಲ ಪುವ್ವು ಎಂದು ಕರೆಸಿಕೊಳ್ಳುವ ಬೌಗೆನ್ವಿಲ್ಲ ಸುಮಾರು ಹದಿನೆಂಟು ವಿವಿಧ ತಳಿಗಳಲ್ಲಿ ಕಂಡು ಬರುತ್ತವೆ. ಇದನ್ನು ನಮ್ಮ ಭಾರತದಲ್ಲಿ ಅಲಂಕಾರಿಕ ಹೂವಾಗಿ ಬೆಳೆಸುತ್ತಾರೆ.

    ಬೌಗೆನ್ವಿಲ್ಲಾ ಬಣ್ಣವು ನೇರಳೆ ಅಥವಾ ಕೆನ್ನೇರಳೆ ಬಣ್ಣವಾಗಿದೆ,

    ಅತ್ಯಂತ ಸಾಮಾನ್ಯವಾದ ಬೌಗೆನ್ವಿಲ್ಲಾ ಬಣ್ಣವು ನೇರಳೆ ಅಥವಾ ಕೆನ್ನೇರಳೆ ಬಣ್ಣವಾಗಿದೆ, ಉಳಿದವುಗಳು ಗುಲಾಬಿ, ಕೆಂಪು, ಕಿತ್ತಳೆ, ಬಿಳಿ ಅಥವಾ ಹಳದಿ ಬಣ್ಣಗಳಲ್ಲಿ ಕಂಡು ಬರುತ್ತವೆ. ಒಮ್ಮೊಮ್ಮೆ ಇದು ಎರಡು ಬಣ್ಣಗಳಲ್ಲಿಯೂ ಅರಳುತ್ತವೆ. ಬೌಗೆನ್ವಿಲ್ಲಾ ಗಿಡ, ಬಳ್ಳಿ ಅಥವಾ ಮರಗಳಾಗಿಯೂ ಬೆಳೆಯುತ್ತವೆ. ಬಳ್ಳಿ ಪ್ರಭೇದಗಳು ಇತರ ಸಸ್ಯಗಳನ್ನು ತಮ್ಮ ಮೊನಚಾದ ಮುಳ್ಳುಗಳಿಂದ ಹಿಡಿದು, ಸುಮಾರು ಒಂದರಿಂದ ಹನ್ನೆರಡು ಮೀಟರ್ ಉದ್ದ ಬೆಳೆಯುತ್ತವೆ. ಎಲೆಗಳು ಸುಮಾರು ನಾಲ್ಕರಿಂದ ಹದಿಮೂರು ಸೆಂ.ಮೀ ಉದ್ದ ಮತ್ತು ೨ರಿಂದ ೬ ಸೆಂ.ಮೀ ಅಗಲವಿರುತ್ತವೆ.

    ಬೌಗೆನ್ವಿಲ್ಲಾ

    ನಾವೆಲ್ಲಾ ನೋಡಿದಂತೆ ಹೂವು ಬೇರೆ ಬೇರೆ ಬಣ್ಣಗಳಲ್ಲಿ ಕಂಡು ಬಂದು, ಮೂರು ದಳಗಳನ್ನು ಹೊಂದಿರತ್ತವೆ. ಒಮ್ಮೆ ಹೂವು ಬಿಟ್ಟರೆ ಎಂಟರಿಂದ ಹತ್ತು ದಿನಗಳ ವರಗೆ ಬಾಡದೇ ತಮ್ಮ ತಾಜಾತನವನ್ನು ಉಳಿಸಿಕೊಳ್ಳಬಲ್ಲವು. ಆದರೆ ಇವು ಪೇಪರ್ ಫ್ಲವರ್ ಹೂವುಗಳಲ್ಲ. ಗಮನಿಸಿ ನೋಡಿದರೆ, ಮೂರು ದಳಗಳ ಮಧ್ಯದಲ್ಲಿ ಚಿಕ್ಕ ಬಿಳಿಯ ಬಣ್ಣದಲ್ಲಿ ನಿಜವಾದ ಹೂವು ಇರುತ್ತವೆ.

    ಇನ್ನು ಬೌಗೆನ್ವಿಲ್ಲಾ ಗಿಡವು ಶುಷ್ಕ ಮಣ್ಣಿನಲ್ಲಿ, ಸೂರ್ಯನ ಕಿರಣಗಳು ಬೀಳುವ ಜಾಗದಲ್ಲಿ ಸೊಗಸಾಗಿ ಬೆಳೆಯುತ್ತವೆ. ಒಮ್ಮೆ ಬೆಳೆದ ಗಿಡಗಳಿಗೆ ಹೆಚ್ಚಿನ ನೀರಿನ ಅವಶ್ಯತೆಯಿರುವುದಿಲ್ಲ. ಹೆಚ್ಚು ನೀರಿರುವ ಜಾಗದಲ್ಲಿ ಅವು ಬೆಳೆಯುವುದೂ ಇಲ್ಲ. ಗಿಡಗಳು ಬೆಳೆದಂತೆ ನಮಗೆ ಬೇಕಾದ ಹಾಗೆ ಅವುಗಳ ತುದಿ ಕತ್ತರಿಸಬಹುದು. ಇನ್ನೊಂದು ವಿಶೇಷವೆಂದರೆ ಬೌಗೆನ್ವಿಲ್ಲಾ ಗಿಡಕ್ಕೆ ಕೀಟಗಳು ತೊಂದರೆ ಕೊಡಲಾರವು. ಕೀಟಮುಕ್ತ ಗಿಡವೆಂದೇ ಹೇಳಬಹುದು. ಆದರೆ ಅಪರೂಪಕ್ಕೆಂಬಂತೆ ಬಸವನ ಹುಳ, ಪತಂಗಗಳು ಅವು ಗಳನ್ನು ತಮ್ಮ ಆಹಾರಕ್ಕಾಗಿ ತಿನ್ನುವುದುಂಟು.

    ಅವುಗಳ ಔಷಧೀಯ ಉಪಯೋಗಗಳನ್ನು ನೋಡುತ್ತ ಹೋದರೆ ಆಶ್ಚರ್ಯವಾಗುತ್ತದೆ. ನಮ್ಮ ದೇಹ ನಿರ್ಜಲೀ ಕರಣಗೊಳ್ಳುವುದನ್ನು ಕಾಗದದ ಹೂವು ತಡೆಯುತ್ತದೆ. ನೆರಳೆ ಬೌಗೆನ್ವಿಲ್ಲಾ ಹೂವುಗಳ ಚಹಾವನ್ನು ಸೇವಿಸುವುದರಿಂದ ನಮ್ಮ ದೇಹದಲ್ಲಿರುವ ಕೆಲವು ವಿಷಕಾರಿ ಅಂಶಗಳನ್ನು ಹೊರ ಹಾಕುತ್ತವೆ. ಅಲ್ಲದೆ ಮಧುಮೇಹ, ಕೆಮ್ಮು, ಗಂಟಲು ನೋವು, ಉಸಿರಾಟದ ತೊಂದರೆ, ಪದೇಪದೇ ಕಾಡುತ್ತಿರುವ ಜ್ವರ, ಹೊಟ್ಟೆ ನೋವು, ಕೀಲು ನೋವುಗಳನ್ನು ಗುಣಪಡಿಸುವಲ್ಲಿ ಇದರ ಕಷಾಯ ಮತ್ತು ಚಹಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ. ಆದರೆ ಇದರ ಚಹಾ ಅಥವಾ ಕಷಾಯವನ್ನು ಸೇವಿಸುವ ಮುನ್ನ ನೀವು ನಿಮ್ಮ ವೈದ್ಯರ ಸಲಹೆ ತೆಗೆದುಕೊಳ್ಳುವುದು ಉತ್ತಮ.

    ವಿಶ್ವದ ತುಂಬೆಲ್ಲಾ ಹರಡಿದೆ ನಮ್ಮ ಕೇಪುಳ!