ಕೊರಳ ಹಿಂಭಾಗದಲ್ಲಿ ಹಲ್ಲಿ ಬಿದ್ದರೆ ಕಲಹ?

’ನಿಮ್ಮ ಮನೇಲಿ ಹಲ್ಲಿ ಇದೆಯಾ?’ ಎಂದು ಯಾರಾದರೂ ಪ್ರಶ್ನೆ ಮಾಡಿದರೆ ಏನನ್ನು ತ್ತೀರಿ? ದವಡೆ ಹಲ್ಲುದುರಿಸುವಷ್ಟು ಸಿಟ್ಟು ಬರುತ್ತದೆಯಲ್ಲವೇ? ನಿಜ, ಹಲ್ಲಿಗಳಿಲ್ಲದ ಮನೆಯೇ ಇಲ್ಲವೆ ನ್ನಬಹುದು. ಎಷ್ಟೇ ಇಲ್ಲವೆಂದರೂ ಅಪರೂಪ ಕ್ಕೊಮ್ಮೆಯಾದರೂ ಹಲ್ಲಿ ಲೊಚಗುಟ್ಟುವುದು ಕೇಳಿ ಬರುತ್ತದೆ. ಮನೆಯಲ್ಲಿ ಹಲ್ಲಿಗಳು ಕಂಡು ಬಂದರೆ ಜೀವ ಬಾಯಿಗೆ ಬಂದಂತಾ ಗುತ್ತದೆಯಲ್ಲವೆ? ನಾವೇಕೆ ಹಲ್ಲಿಗೆ ಅಷ್ಟೊಂದು ಹೆದರಬೇಕು? ನಿಜವಾಗಿಯೂ ಹಲ್ಲಿಗಳು ಅಪಾಯಕಾರಿಯೇ? ತಿಳಿಯೋಣ ಬನ್ನಿ.

ಹಲ್ಲಿಯ ವೈಜ್ಞಾನಿಕ ಹೆಸರು ಲ್ಯಾಸೆರ್ಟಿಲಿಯಾ.

ಹಲ್ಲಿಯ ವೈಜ್ಞಾನಿಕ ಹೆಸರು ಲ್ಯಾಸೆರ್ಟಿಲಿಯಾ. ಹಲ್ಲಿಗಳು ಒಂದು ಸರೀಸೃಪ ಜೀವಿ. ಸುಮಾರು ೨೦೦ ಮಿಲಿಯನ್ ವರ್ಷಗಳ ಹಿಂದೆಯೇ ಹಲ್ಲಿಗಳು ಇದ್ದವೆನ್ನಲಾಗುತ್ತದೆ. ಜಗತ್ತಿನಲ್ಲಿ ಸುಮಾರು ೬೦೦೦ ಜಾತಿಯ ಹಲ್ಲಿಗಳಿವೆ. ಹಲ್ಲಿಗಳು ಹಾವುಗಳನ್ನು ಹೋಲುತ್ತವೆಯಾದರೂ ಕೆಲವೊಂದು ವ್ಯತ್ಯಾಸಗಳಿವೆ. ಹಲ್ಲಿಗಳು ಒಣ ಚರ್ಮ ಹೊಂದಿದ್ದರೂ ದೇಹ ಮಾತ್ರ ತುಂಬ ಮೃದುವಾಗಿರುತ್ತದೆ. ಕೆಲವೊಂದು ಪ್ರಭೇದದ ಹಲ್ಲಿಗಳ ಮೈಮೇಲೆ ಚಿಪ್ಪುಗಳಿದ್ದು ದೇಹವೆಲ್ಲ ಒರಟಾಗಿಯೂ ಇರುತ್ತದೆ. ಆದರೆ ನಮ್ಮಲ್ಲಿ ಕಂಡು ಬರುವ ಹಲ್ಲಿಗಳ ದೇಹ ಮುಟ್ಟಿದರೆ ಮೆತ್ತನೆಯ ಅನುಭವ ಕೊಡುತ್ತದೆ. ಈ ಕಾರಣದಿಂದಾಗಿಯೇ ಹಲ್ಲಿ ಮೈಮೇಲೆ ಬಿದ್ದರೆ ಹೇಸಿಗೆ ಮತ್ತು ಭಯದಿಂದಾಗಿ ಚೀರಿ ಕೊಳ್ಳಬೇಕು ಅನಿಸುವುದು. ಹಲ್ಲಿಗಳ ಬಗೆಗಿನ ಈ ಭಯಕ್ಕೆ ಹರ್ಪಿಟೋಫೋಬಿಯಾ ಎನ್ನುತ್ತಾರೆ.

ಹಲ್ಲಿ

ಹಲ್ಲಿಗಳ ದೇಹ ರಚನೆ ದುಂಡಗಾಗಿರುತ್ತವೆ!

ಹಲ್ಲಿಗಳ ದೇಹ ರಚನೆ ಸಾಮಾನ್ಯವಾಗಿ ದುಂಡಗಾಗಿರುತ್ತವೆ. ಹಲ್ಲಿ ನಾಲ್ಕು ಕಾಲುಗಳ ಜೊತೆಗೆ ಉದ್ದನೆಯ ಬಾಲವನ್ನು ಹೊಂದಿರುತ್ತದೆ. ಎಲ್ಲ ಕಡೆಯೂ ಹಲ್ಲಿಗಳು ಕಂಡು ಬರುವ ಕಾರಣ ಅದರ ದೇಹ ರಚನೆಯ ಬಗ್ಗೆ ಹೆಚ್ಚಿಗೆ ಏನನ್ನು ಹೇಳಬೇಕಿಲ್ಲ. ಆದರೆ ಹಲ್ಲಿಗಳ ಕಣ್ಣು ವಿಶೇಷ ವಾಗಿವೆಯೆನ್ನಬಹುದು. ಹಲ್ಲಿಗಳ ಕಣ್ಣುಗಳು ವಿವಿಧ ಬಣ್ಣಗಳನ್ನು ಗುರುತಿಸುವ ಶಕ್ತಿಯನ್ನು ಹೊಂದಿವೆ. ಈ ಕಾರಣಕ್ಕಾಗಿ ಇತರ ಸರಿಸೃಪಗಳು ಮತ್ತು ಇತರ ಕೆಲವು ಪ್ರಾಣಿಗಳಿಗಿಂತ ಹೆಚ್ಚಿನ ಬಣ್ಣಗಳನ್ನು ಗ್ರಹಿಸಲು ಅನುವು ಮಾಡಿಕೊಡುತ್ತದೆ. ಅಲ್ಲದೇ ಹಲ್ಲಿಗಳು ತಮ್ಮ ಎರಡು ಕಣ್ಣುಗಳನ್ನು ವಿರುದ್ಧವಾದ ದಿಕ್ಕಿನಲ್ಲಿ ತಿರುಗಿಸಬಲ್ಲವು. ಇದರಿಂದ ತಮ್ಮ ಸುತ್ತಮುತ್ತಲಿನ ಚಲನವಲನವನ್ನು ಸೂಕ್ಷ್ಮವಾಗಿ ಗಮನಿಸಿ, ಬೇಟೆಯಾಡಬಲ್ಲವು. ಅಲ್ಲದೆ ಕೆಲವು ಸಲ ತಮ್ಮ ಬಾಲವನ್ನು ಕಳಚಿಕೊಂಡು ತಮ್ಮ ಜೀವ ಉಳಿಸಿಕೊಳ್ಳಬಲ್ಲವು. ಕ್ರಮೇಣ ಬಾಲ ತನ್ನಿಂತಾನೆ ಬೆಳೆಯುತ್ತವೆ.

ಹಲ್ಲಿಗಳ ಆಹಾರವೇನು ಎಂಬ ಕುತೂಹಲವೇ?

ಇಷ್ಟೆಲ್ಲ ಹೇಳಿದ ಮೇಲೆ ಹಲ್ಲಿಗಳ ಆಹಾರವೇನು ಎಂಬ ಕುತೂಹಲ ಮೂಡಿರಬೇಕಲ್ಲವೇ? ಹಲ್ಲಿಗಳು ಮಾಂಸಾಹಾರಿಗಳು. ಅವು ಹೆಚ್ಚಾಗಿ ತೆವಳುವ ಕೀಟಗಳು, ಹಾರುವ ಕೀಟಗಳನ್ನು ಬೇಟೆಯಾಡಿ ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತವೆ. ಕೆಲವೊಮ್ಮೆ ನೆಲದಲ್ಲಿ ಬಿದ್ದ ಆಹಾರವನ್ನೂ ತಿಂದು ಬದುಕಬಲ್ಲವು. ಹಲ್ಲಿಗಳು ಹೆಚ್ಚಾಗಿ ರಾತ್ರಿಯ ವೇಳೆ ತಮ್ಮ ಆಹಾರವನ್ನು ಹುಡುಕಿಕೊಂಡು ಬರುತ್ತವೆ. ಹಗಲಿನಲ್ಲಿ ಜನರ ಕಣ್ಣಿಗೆ ಬೀಳುವುದು ಕಡಿಮೆಯೇ ಎನ್ನಬಹುದು. ಇದಕ್ಕೆ ಕಾರಣ ಹಲ್ಲಿಗಳು ಸಾಮಾನ್ಯವಾಗಿ ನಾಚಿಕೆ ಮತ್ತು ರಹಸ್ಯ ಪ್ರಾಣಿಗಳು. ಸಾಮಾನ್ಯವಾಗಿ ಮನುಷ್ಯರು ಮತ್ತು ಇತರ ಪ್ರಾಣಿಗಳೊಂದಿಗೆ ಸಂಪರ್ಕದಲ್ಲಿರಲು ಬಯಸುವುದಿಲ್ಲ. ಕೆಲವೊಮ್ಮೆ ಮಾವನ ಅಥವಾ ಇತರ ಪ್ರಾಣಿಗಳಿಂದ ಬೆದರಿಕೆಯುಂಟಾದಾಗ ಹಲ್ಲಿಗಳು ತಮ್ಮ ದೇಹವನ್ನು ದೊಡ್ಡದಾಗಿ ಕಾಣುವಂತೆ ಉಬ್ಬಿಸಿಕೊಳ್ಳುತ್ತವೆ. ಅಲ್ಲದೆ ಕಣ್ಣು ಮಿಟುಕಿಸುವಷ್ಟರಲ್ಲಿ ಓಡಿ ಮಾಯವಾಗುತ್ತವೆ. ಇನ್ನೊಂದು ವಿಶೇಷವೆಂದರೆ ಹಲ್ಲಿಗಳಿಗೆ ಸಾಮಾನ್ಯವಾಗಿ ಯಾವುದೇ ರೋಗ ಬರಲಾರದು. ಅವು ತಮ್ಮ ದೇಹವನ್ನು ಆರೋಗ್ಯವಾಗಿ ಟ್ಟುಕೊಳ್ಳುವಲ್ಲಿ ಹೆಚ್ಚಿನ ಆಸ್ತೆ ವಹಿಸುತ್ತವೇನೋ?
ಹಲ್ಲಿಗಳು ಎಕ್ಟೋಥರ್ಮಿಕ್ ಅಂದರೆ ಅವುಗಳ ದೇಹದ ಉಷ್ಣತೆಯು ಪರಿಸರದಿಂದ ನಿಯಂತ್ರಿಸಲ್ಪಡುತ್ತದೆ. ಇದು ವಿವಿಧ ಹವಾ ಮಾನಗಳಿಗೆ ಹೊಂದಿಕೊಳ್ಳುವಂತೆ ಮಾಡು ತ್ತದೆ. ಹಲ್ಲಿಗಳ ಬಗೆಗಿನ ಇನ್ನೊಂದು ಕುತೂಹಲ ಕರವಾದ ವಿಷಯವೆಂದರೆ ಅವುಗಳ ಬಣ್ಣವನ್ನು ಬದಲಾಯಿಸುವ ಸಾಮರ್ಥ್ಯ. ಕೆಲವು ಹಲ್ಲಿಗಳು ತಮ್ಮ ಚರ್ಮದ ಬಣ್ಣವನ್ನು ತಮ್ಮ ಸುತ್ತಮುತ್ತಲಿನ ಪರಿಸರಕ್ಕೆ ಅಥವಾ ಬಣ್ಣಕ್ಕೆ ಹೊಂದಿಸಿಕೊಳ್ಳ ಬಲ್ಲವು. ಇದರಿಂದ ಇತರ ಪ್ರಾಣಿಗಳಿಗೆ ಆಹಾರ ವಾಗುವುದರಿಂದ ತಪ್ಪಿಸಿಕೊಳ್ಳಬಲ್ಲವು.

ಹಿಂದೂ ಧರ್ಮದಲ್ಲಿ ಹಲ್ಲಿಯ ಪ್ರಾಮುಖ್ಯತೆ!

ಇರಲಿ, ಹಿಂದೂ ಧರ್ಮದಲ್ಲಿ ಹಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಹಲ್ಲಿಯನ್ನು ಲಕ್ಷ್ಮಿ ದೇವಿಯ ರೂಪವೆಂದು ಪರಿಗಣಿಸಲಾಗಿದೆ. ಅದನ್ನು ನೋಡುವುದು ಅನೇಕ ಸಂದರ್ಭಗಳಲ್ಲಿ ಮಂಗಳಕರ ಎಂದು ನಂಬುತ್ತಾರೆ. ನಮ್ಮಲ್ಲಿ ಹಲ್ಲಿಯ ಬಗೆಗಿನ ಕೆಲವೊಂದು ನಂಬಿಕೆಗಳು ತಲತಲಾಂತರದಿಂದಲೂ ಪ್ರಚಲಿತದಲ್ಲಿವೆ. ಹಲ್ಲಿ ನೆಲದ ಮೇಲೆ ಬೀಳುವುದು ಅಥವಾ ವ್ಯಕ್ತಿಯ ಮೇಲೆ ಬೀಳುವುದು ಕೆಲವು ಸೂಚನೆಗಳನ್ನು ನೀಡುತ್ತದೆ ಎಂದು ಹಿಂದಿನ ಕಾಲದಿಂದಲೂ ಬಂದಿರುವ ನಂಬಿಕೆ. ಹಲ್ಲಿಗಳ ಬಗೆಗಿನ ನಂಬಿಕೆಯನ್ನು ’ಗೌಳಿ ಶಾಸ್ತ್ರ ತಿಳಿಸುತ್ತದೆ. ದೇಹದ ಯಾವ ಭಾಗದಲ್ಲಿ ಹಲ್ಲಿ ಬಿದ್ದರೆ ಒಳ್ಳೆ ಶಕುನ ಹಾಗೂ ಯಾವ ಭಾಗದಲ್ಲಿ ಬಿದ್ದರೆ ಕೆಟ್ಟ ಶಕುನ ಎಂಬ ವಿವರಗಳನ್ನು ಗೌಳಿ ಶಾಸ್ತ್ರದಲ್ಲಿ ಹೇಳಲಾಗಿದೆ. ಹಾಗಾದರೆ ಈ ’ಗೌಳಿ’ ಎಂದರೇನು ಅನ್ನುತ್ತೀರೇನೋ? ಕರ್ನಾಟಕದ ಕೆಲ ಭಾಗಗಳಲ್ಲಿ ಹಲ್ಲಿಗಳಿಗೆ ಗೌಳಿ ಅಂತಲೂ ಹೇಳುತ್ತಾರೆ.

ಈಗ ಹಲ್ಲಿಗಳ ಬಗೆಗಿನ ನಂಬಿಕೆ, ಮೂಢನಂಬಿಕೆ, ಹಲ್ಲಿಗಳ ಕಡಿತ ಹೀಗೆ ಮತ್ತಷ್ಟು ವಿವರವಾಗಿ ಚರ್ಚಿಸೋಣ.ಕೊರಳ ಹಿಂಭಾಗದಲ್ಲಿ ಹಲ್ಲಿಯು ಬಿದ್ದರೆ ಕಲಹಕ್ಕೆ ಮುನ್ನುಡಿ ಮನೆ ಎಂದ ಮೇಲೆ ಹಲ್ಲಿಗಳಿರುವುದು ಸಹಜ. ಕೆಲವೊಮ್ಮೆ ಅಚಾನಕ್ಕಾಗಿ ಹಲ್ಲಿಗಳು ಮನುಷ್ಯರ ಮೇಲೆ ಬೀಳುವುದುಂಟು. ಹೀಗೆ ಹಲ್ಲಿಗಳು ನಮ್ಮ ಮೇಲೆ ಬಿದ್ದರೆ ಶುಭ ಹಾಗೂ ಅಶುಭ ಎಂದು ಹೇಳಲಾಗುತ್ತದೆ. ದೇಹದ ಯಾವ ಭಾಗದ ಮೇಲೆ ಹಲ್ಲಿ ಬಿತ್ತು ಎಂಬುದರ ಮೇಲೆ ಶುಭವೇ, ಅಶುಭವೇ ಎಂಬುದನ್ನು ತಿಳಿಯಬಹುದು. ಹಲ್ಲಿಗಳು ದೇಹದ ಯಾವ ಭಾಗದ ಮೇಲೆ ಬಿದ್ದರೆ ಏನೇನು ಆಗುತ್ತದೆ ಎಂಬುದನ್ನು ನೋಡೋಣ ಬನ್ನಿ.

ಹಣೆ ಮತ್ತು ಜುಟ್ಟಿನ ಮೇಲೆ ಹಲ್ಲಿ ಬಿದ್ದರೆ ಸ್ತ್ರೀಯರಿಗೆ ಧನಾಗಮ, ಪುರುಷರಿಗೆ ಸುಖಪ್ರಾಪ್ತಿ. ಕೂದಲು, ಕೂದಲಿನ ಗಂಟಿನ ಮೇಲೆ ಬಿದ್ದರೆ ಸ್ತ್ರೀ-ಪುರುಷ ಇಬ್ಬರಿಗೂ ರೋಗ ಬಾಧಿಸುವ ಸಂಭವ. ಹಾಗೆಯೇ ಕೂದಲು ಅಥವಾ ತಲೆಯ ಮಧ್ಯಭಾಗದಲ್ಲಿ ಬಿದ್ದಾಗ ಕೆಟ್ಟ ಸುದ್ದಿಯನ್ನು ಕೇಳಲು ತಯಾರಾಗಿರಬೇಕು. ಹುಬ್ಬುಗಳ ಮೇಲೆ ಧನಲಾಭ. ಬಲಗಣ್ಣಿನ ಮೇಲೆ ಬಿದ್ದಾಗ ಪುರುಷರಿಗೆ ಸುಖವಾದರೆ ಸ್ತ್ರೀಯರಿಗೆ ದುಃಖ. ಎಡಗಣ್ಣಿನ ಮೇಲೆ ಬಿದ್ದರೆ ಪುರುಷರಿಗೆ ಕೆಟ್ಟ ಸುದ್ದಿ ಕೇಳುವ ಸಂಭವ. ಮುಖದ ಮೇಲೆ ಬಿದ್ದರೆ ಇಬ್ಬರಿಗೂ ಯಾರದಾದರೂ ಮನೆಯಲ್ಲಿ ಸುಖ ಭೋಜನ ಪ್ರಾಪ್ತಿ ಅಂದರೆ ಒಳ್ಳೆ ಊಟ ಸಿಗುತ್ತದೆಯೆನ್ನಬಹುದು. ಹಾಗೆಯೇ ಮೂಗಿನ ಮೇಲೆ ಬಿದ್ದರೆ ಸ್ತ್ರೀ-ಪುರುಷರಿಬ್ಬರಿಗೂ ಭಾಗ್ಯದ ಬಾಗಿಲು ತೆರೆದಂತೆಯೇ. ಅದೇ ಮೂಗಿನ ತುದಿಯ ಮೇಲೆ ಬಿದ್ದರೆ ದುಃಖ ಕಟ್ಟಿಟ್ಟ ಬುತ್ತಿ. ಬಲಗಿವಿಯ ಮೇಲೆ ಬಿದ್ದರೆ ಗಂಡಸರಿಗೆ ಲಾಭವಾದರೆ ಎಡಗಿವಿಯ ಮೇಲೆ ಬಿದ್ದಾಗ ದುಃಖದ ಸಂದರ್ಭ ಎದುರಾಗುತ್ತದೆ. ಅದೇ ಹೆಂಗಸರಿಗೆ ಎಡಗಿವಿಯ ಮೇಲೆ ಬಿದ್ದಾಗ ಆಯಸ್ಸು ವೃದ್ಧಿಯಾಗುವುದು. ಬಲಗಿವಿ ಲಾಭ ತಂದುಕೊಡಲಿದೆ.

ಬಲಕೆನ್ನೆ ಗಂಡಸರಿಗೆ ಹಿಡಿದ ಕೆಲಸ ಕೈಗೂಡಿದರೆ, ಹೆಂಗಸರಿಗೆ ತೊಂದರೆಯನ್ನುಂಟು ಮಾಡುತ್ತದೆ. ಎಡಕೆನ್ನೆಯ ಮೇಲೆ ಬಿದ್ದಾಗ ಗಂಡಸರಿಗೆ ಮಿತ್ರರು ಸಿಗುತ್ತಾರಲ್ಲದೆ, ಹೆಂಗಸರಿಗೂ ಶುಭ ಸೂಚಕವೆನಿಸಿಕೊಳ್ಳುತ್ತದೆ. ಇಬ್ಬರಿಗೂ ಕೆಳತುಟಿ ಮೇಲೆ ಬಿದ್ದಾಗ ಸಂಪತ್ತನ್ನು ತಂದುಕೊಟ್ಟರೆ, ಮೇಲ್ತುಟಿ ಜಗಳ ಉಂಟು ಮಾಡುತ್ತದೆ. ಕೊರಳ ಹಿಂಭಾಗದಲ್ಲಿ ಹಲ್ಲಿಯು ಬಿದ್ದರೆ ಕಲಹಕ್ಕೆ ಮುನ್ನುಡಿ ಬರೆದಂತೆ. ಅದೇ ಬಲ ಭುಜದ ಮೇಲೆ ಬಿದ್ದರೆ ಜಯ ಹಾಗೂ ಸುಖಕ್ಕೆ ಹಾದಿಯಾದರೆ ಎಡ ಭುಜ ಬರೀ ಸೋಲನ್ನು ಸೂಚಿಸುತ್ತದೆ. ಬಲಗೈ ಮೇಲೆ ಬಿದ್ದಾಗ ಇಬ್ಬರಿಗೂ ಧನಹಾನಿಯುಂಟಾದರೆ, ಎಡಗೈ ಸ್ತ್ರೀಯರಿಗೆ ಲಾಭವನ್ನುಂಟು ಮಾಡುತ್ತದೆ. ಎಡಗೈ ಕಿರುಬೆರಳ ಮೇಲೆ ಬಿದ್ದರೆ ನೀವು ಜಮೀನು ಕೊಂಡುಕೊಳ್ಳುವುದು ಖಚಿತ. ಅದೇ ಬಲಗೈ ಉಗುರಿನ ಮೇಲೆ ಹಲ್ಲಿ ಸವಾರಿ ಮಾಡಿದರೆ ತೊಂದರೆ ಕಟ್ಟಿಟ್ಟ ಬುತ್ತಿ.

ಸ್ತ್ರೀಯರ ತೊಡೆಯ ಮೇಲೆ ಹಲ್ಲಿ ಬಿದ್ದರೆ ಸಂತಾನ ಲಾಭ?

ಇಬ್ಬರಿಗೂ ಎದೆ ಅಥವಾ ಹೊಟ್ಟೆಯ ಮೇಲೇನಾದರೂ ಹಲ್ಲಿ ಬಿದ್ದಲ್ಲಿ ಜೀವನವೆಲ್ಲಾ ಸುಖವೇ ಸುಖ. ಯಾವ ಸುಖ ಅಂತ ಕೇಳಬೇಡಿ. ಅನುಭವಿಸಿ ನೋಡಿ. ಬಲ ತೋಳು ಹೆಂಗಸರೂ ಹಾಗೂ ಗಂಡಸರಿಬ್ಬರಿಗೂ ಕೀರ್ತಿಯನ್ನು ತಂದುಕೊಡುತ್ತದೆ. ಅದೇ ಎಡತೋಳು ಗಂಡಸರಿಗೆ ದುಃಖಕ್ಕೆ ಕಾರಣವಾದರೆ ಹೆಂಗಸರಿಗೆ ಆಭರಣ ಕೊಳ್ಳುವ ಸಮಯ ಬಂತೆಂದು ತಿಳಿದುಕೊಳ್ಳಬೇಕು. ಸ್ತ್ರೀಯರ ತೊಡೆಯ ಮೇಲೆ ಹಲ್ಲಿ ಬಿದ್ದರೆ ಸಂತಾನ ಲಾಭ ಉಂಟೆಂದು ಶಾಸ್ತ್ರ ಹೇಳುತ್ತದೆ. ಸ್ವಲ್ಪ ಕೆಳಗೆ ಅಂದರೆ ಮೊಣಕಾಲ ಮೇಲೆ ಬಿದ್ದರೆ ಎಲ್ಲ ಕೆಲಸಗಳಲ್ಲೂ ಜಯ ಸಿಗಲಾರದು. ಕಾಲುಗಳ ಮೇಲೇನಾದರೂ ಬಿದ್ದಲ್ಲಿ ಪ್ರಯಾಣ ಆರಂಭಿಸಬೇಕು. ಕಾಲ ಬೆರಳ ಮೇಲೆ ಹಲ್ಲಿ ಬಿದ್ದರೆ ಗಂಡಸರಿಗೆ ತೊಂದರೆ ಉಂಟಾದರೆ ಹೆಂಗಸರಿಗೆ ಧನಲಾಭದ ಸಂಕೇತವೆನ್ನಬಹುದು.

ಹಲ್ಲಿ

ಅದೇನೇ ಇರಲಿ, ಹಲ್ಲಿ ಒಂದು ಸರಿಸೃಪ ಅಷ್ಟೇ. ಹಲ್ಲಿ ಬಿದ್ದೊಡನೆ ಇಷ್ಟೆಲ್ಲಾ ಲಾಭವಿದೆಯೆಂದು ನಿಮಗನಿಸುತ್ತದೆಯೇ? ಗೋಡೆಯ ಮೇಲೆ ಚಲಿಸುವಾಗ ಕಾಲುಗಳು ಜಾರಿ ಬಿದ್ದ ಹಲ್ಲಿ ನಿಮ್ಮ ಜೀವನದ ಮುನ್ನಡಿ ಬರೆಯಬಲ್ಲವೆಂಬುದು ಸ್ವಲ್ಪ ಹಾಸ್ಯಾಸ್ಪದ ಅನಿಸದೇ ಇರದು. ಅವರವರ ನಂಬುಗೆ ಅವರವರದು. ನಮಗೇಕೆ ಇಲ್ಲದ ಉಸಾಬರಿ, ಅಲ್ಲವೇ? ಶುಭವುಂಟಾಗುತ್ತದೆ ಎಂಬ ಕಾರಣಕ್ಕೆ ಹಲ್ಲಿಯ ಕೆಳಗೆ ಹೋಗಿ ನಿಲ್ಲಬೇಡಿ. ಹಲ್ಲಿಯೊಂದೇ ಅಲ್ಲ, ಯಾವುದೇ ಪ್ರಾಣಿ ಎಲ್ಲೇ ಬಿದ್ದರೂ ನಮ್ಮ ಜೀವನ ನಮಗೆ. ನಮ್ಮ ಜೀವನ ರೂಪಿಸಿಕೊಳ್ಳಬೇಕಾದವರು ನಾವೇ ಹೊರತು, ಇನ್ಯಾರೋ ಅಲ್ಲವೆಂಬುದು ನಮ್ಮ ನೆನಪಿನಲ್ಲಿದ್ದರೆ ಅಷ್ಟೇ ಸಾಕು. ಎಲ್ಲರಿಗೂ ಶುಭವಾಗಲಿ.

Leave a Reply

Your email address will not be published. Required fields are marked *

error: Content is protected !!