ಬಟ್ಟಲು ತುಂಬಾ ತುಂಬಿದ ತುಂಬೆ ಹೂವು ಶಿವನಿಗೆ ತುಂಬ ಇಷ್ಟ. ಏನಿದು ತುಂಬ, ತುಂಬಾ, ತುಂಬೆ? ಹೌದು ಇದು ತುಂಬಾ ಇಂಟರೆಸ್ಟಿಂಗ್ ವಿಚಾರ. ಅರ್ಥವಾಯ್ತು ಬಿಡಿ ಅಂತಿರಾ? ಆಗಲಿ ಬಿಡಿ. ಆದರೂ ಹೇಳ್ತಿನಿ ತುಂಬಾ ಮುಖ್ಯ ವಿಷಯ.
ಹೌದು, ಈವಾರ ಹೇಳ ಹೊರಟಿರುವುದು ತುಂಬೆ ಹೂವಿನ ವಿಚಾರ. ಸಾಮಾನ್ಯವಾಗಿ ಗದ್ದೆ ಮತ್ತು ರಸ್ತೆ ಬದಿಯಲ್ಲಿ, ಉದ್ಯಾನವನ, ಅಷ್ಟೇಕೆ ನಮ್ಮ ಮನೆಯ ಟೆರೇಸಿನ ಮೇಲೆ ಬೆಳೆಯುವ ಚಿಕ್ಕ ಗಿಡವೇ ತುಂಬೆ ಗಿಡ. ಇದು ಎಲ್ಲಾ ಜಾಗಗಳಲ್ಲೂ, ಎಲ್ಲ ಬಗೆಯ ಮಣ್ಣು-ಹವಾಮಾನದಲ್ಲೂ ಬೆಳೆಯಬಲ್ಲ ಗಿಡ. ಅಲ್ಲದೆ ವರ್ಷವಿಡೀ ಹೂವು ಬಿಡುವ ಸಸ್ಯವೆಂದರೂ ತಪ್ಪಾಗಲಾರದು.
ಇದು ಹೆಚ್ಚಾಗಿ ಭಾರತ, ಜಾವಾ, ಮಾರಿಷಸ್, ಶ್ರೀಲಂಕಾಗಳಲ್ಲಿ ಕಂಡು ಬಂದರೂ ಜಗತ್ತಿನಾದ್ಯಂತ ಕಾಣಸಿಗುತ್ತದೆ. ಸಂಸ್ಕೃತದಲ್ಲಿ ದ್ರೋಣ ಪುಷ್ಪ, ತಮಿಳಿನಲ್ಲಿ ತುಂಬೈ ಚೇಡಿ, ತೆಲುಗುವಿನಲ್ಲಿ ತುಮ್ಮಚೆಟ್ಟು, ಮಲಯಾಳನಲ್ಲಿ ತುಂಪಾ ಎಂದು ಕರೆಯಲ್ಪಡುವ ತುಂಬೆ ಹೂವಿನ ವೈಜ್ಞಾನಿಕ ಹೆಸರು ಲೂಕಾಸ್ ಅಸ್ಪೆರಾ. ಇದನ್ನು ರುದ್ರ ಪುಷ್ಪ, ಅಂತಲೂ ಕರೆಯುತ್ತಾರೆ.

ತುಂಬೆ ಗಿಡ ನೆಲದಿಂದ ಸುಮಾರು ಹದಿನೈದರಿಂದ ಅರವತ್ತು ಸೆಂಟಿಮೀಟರ್ ಎತ್ತರಕ್ಕೆ ಬೆಳೆಯುತ್ತದೆ. ಚಿಕ್ಕ ತೊಟ್ಟಿರುವ ನೀಳಾಕಾರದ ಎಲೆ ಸುಮಾರು ಎಂಟು ಸೆಂಟಿಮೀಟರ್ ಉದ್ದವಾಗಿರುತ್ತದೆ. ಎಲೆಗಳು ಕಾಂಡದ ಮೇಲೆ ಅಭಿಮುಖವಾಗಿ ಅಂದರೆ ಒಂದಕ್ಕೊಂದು ವಿರುದ್ಧ ದಿಕ್ಕಿನಲ್ಲಿ ಬಿಡುತ್ತವೆ. ಎಲೆಗಳ ಜೊತೆಜೊತೆಗೇ ಮೊಗ್ಗುಗಳು ಬೆಳೆಯುತ್ತವೆ. ಹೂವು ಬಿಳಿಯ ಬಣ್ಣದ್ದಾಗಿದ್ದು ತುಂಬ ಚಿಕ್ಕವಾಗಿರುತ್ತವೆ. ಅಲ್ಲದೆ ತುಂಬ ಸೂಕ್ಷ್ಮವೂ ಹೌದು. ಪೂರ್ತಿ ಗಿಡ ಒಂದು ತರಹದ ಅಂಟಿನಿಂದ ಕೂಡಿದ್ದು, ರುಚಿಯಲ್ಲಿ ಸ್ವಲ್ಪ ಕಹಿಯಾಗಿರುತ್ತವೆ. ಆದರೆ ಹೂವು ಮಾತ್ರ ತನ್ನಲ್ಲಿ ಸ್ವಲ್ಪ ಮಟ್ಟಿಗಿನ ಸಿಹಿಯನ್ನು ನೀಡುತ್ತದೆ. ನಾವು ಹೆಚ್ಚಿನ ಸಂದರ್ಭದಲ್ಲಿ ಇದೊಂದು ಕಳೆ ಗಿಡವೆಂದು ನಿರ್ಲಕ್ಷ್ಯ ಮಾಡುತ್ತೇವೆ. ಆದರೆ ಇದು ತನ್ನೊಡಲಲ್ಲಿ ಎಷ್ಟೋ ರೋಗಗಳನ್ನು ಗುಣಪಡಿಸಬಲ್ಲ ಸಾಮರ್ಥ್ಯವನ್ನು ತುಂಬಿಕೊಂಡ ಔಷಧದ ಕಣಜ ಎಂದರೂ ತಪ್ಪಾಗಲಾರದು.
ಅಂದಹಾಗೆ ತುಂಬೆ ಹೂ ಹಾಗೂ ಗಿಡಕ್ಕೆ ಆಯುರ್ವೇದಲ್ಲಿ ಬೇಡಿಕೆ ಹೆಚ್ಚು. ತುಂಬೆ ಗಿಡದ ಹೂವು, ಕಾಂಡ, ಬೇರುಗಳು ಅನೇಕ ಔಷಧೀಯ ಗುಣಗಳನ್ನು ಹೊಂದಿವೆ. ನೋವು ನಿವಾರಕ, ಚರ್ಮರೋಗಗಳು, ತುರಿಕೆ, ಸೋರಿಯಾಸಿಸ್ ಮುಂತಾದ ಸಮಸ್ಯೆಗಳಿಗೆ ಈ ತುಂಬೆ ದಿವ್ಯೌಷಧ.
ತುಂಬೆ ಹೂವಿನ ರಸಕ್ಕೆ ಶುದ್ಧ ಜೇನುತುಪ್ಪ ಬೆರೆಸಿ, ನಿತ್ಯ ಸೇವಸು ವುದರಿಂದ ಕಫ ಕಡಿಮೆಯಾಗಿ, ಉಸಿರಾಟ ಸರಾಗವಾಗುತ್ತದೆ. ತುಂಬೆ ಗಿಡದಿಂದ ತಯಾರಿಸಿದ ಕಷಾಯ ಸೇವಿಸುವುದರಿಂದ ಅಜೀರ್ಣ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ತುಂಬೆ ಗಿಡದ ರಸದಿಂದ ಮುಖ ತೊಳೆಯುವುರಿಂದ ಕಣ್ಣಿನ ಸುತ್ತಲ ಕಪ್ಪು ಮಾಯವಾಗಿ, ಕಣ್ಣಿನ ಹೊಳಪು ಇಮ್ಮಡಿಸುತ್ತದೆ.

ತುಂಬೆ ಎಲೆಯ ಪೇಸ್ಟ್ ತಯಾರಿಸಿ ಅದಕ್ಕೆ ಸ್ವಲ್ಪ ನಿಂಬೆರಸ ಮತ್ತು ಎಳ್ಳೆಣ್ಣೆ ಬೆರೆಸಿ ದಿನವೂ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಮಹಿಳೆಯರಲ್ಲಿ ಋತುಚಕ್ರದ ಸಮಯದಲ್ಲಿ ಉಂಟಾಗುವ ರಕ್ತಸ್ರಾವ ಕಡಿಮೆ ಯಾಗುತ್ತದೆ. ತುಂಬೆ ಗಿಡ ಒಣಗಿಸಿ ಕಷಾಯ ಮಾಡಿ ಕುಡಿಯುವುದರಿಂದ ರಕ್ತ ಶುದ್ಧಿಯಾಗುತ್ತದೆ. ತುಂಬೆ ಎಲೆ ಕಷಾಯಕ್ಕೆ ಸ್ವಲ್ಪ ಕಾಳು ಮೆಣಸಿನ ಪುಡಿ ಹಾಗೂ ಸೈಂಧವ ಲವಣ ಬೆರೆಸಿ ಕುಡಿಯುವುದರಿಂದ ಪದೇಪದೇ ಕಾಡುವ ಜ್ವರದಿಂದ ಮುಕ್ತಿ ಪಡೆಯಬಹುದು.
ಹಾವು ಕಚ್ಚಿದರೆ ತುಂಬೆ ಎಲೆ ಹಾಗೂ ಹೂವಿನ ರಸ ಹಚ್ಚಿದರೆ ವಿಷದ ಪ್ರಭಾವ ಕಡಿಮೆ ಎನ್ನುತ್ತಾರೆ ಹಿರಿಯರು. ತುಂಬೆ ಗಿಡದ ಹೊಗೆಯು ಸೊಳ್ಳೆಯನ್ನು ದೂರ ಓಡಿಸುವಲ್ಲಿ ಸಹಾಯಕ. ಅಲ್ಲದೆ ತುಂಬೆಯ ಬೇರನ್ನು ಜಜ್ಜಿ ಮಜ್ಜಿಗೆಯೊಂದಿಗೆ ಸೇವನೆ-ಜಂತುಹುಳ ಬಾಧೆ ಕಡಿಮೆಯಾಗುತ್ತದೆ.