ಗಿಳಿಗಳು ಮಾತನಾಡುತ್ತವೆಯೇ? ಎಂಬ ಪ್ರಶ್ನೆಯನ್ನು ನಿಮಗೆ ಯಾರಾದರೂ ಕೇಳಿದರೆ ಏನನ್ನುತ್ತೀರಿ? ಹೌದು, ಹಲವು ಸಿನೆಮಾಗಳಲ್ಲಿ ಗಿಳಿಗಳು ಮಾತನಾಡಿರುವುದನ್ನು ನೋಡಿದ್ದೇವೆ. ಅಲ್ಲದೆ ಸಾಕಿದ ಗಿಳಿಗಳು ನಮ್ಮಂತೆ ಮಾತನಾಡುತ್ತವೆ ಎನ್ನುತ್ತೀರಲ್ಲವೇ?
ಹೌದು, ಕೆಲವು ಸಿನೆಮಾಗಳಲ್ಲಿ ಗಿಳಿಗಳು ಮನುಷ್ಯರಂತೆ ಮಾತನಾಡುವುದನ್ನು ನೋಡಿರುತ್ತೇವೆ. ಅಲ್ಲದೇ ನಮ್ಮ ಪರಿಚಿತರ ಮನೆಗಳಲ್ಲಿ ಸಾಕಿದ ಗಿಳಿಗಳು ನಮ್ಮನ್ನು ನೋಡಿ ’ಹಲೋ’ ಅಂದರಂತು ಖುಷಿಯಿಂದ ಕುಣಿಯುತ್ತೇವೆ, ಅಲ್ಲವೇ?
ಆದರೆ ನಿಜವಾಗಿಯೂ ಮಾತನಾಡುತ್ತವೆಯೇ? ಎಂಬ ಪ್ರಶ್ನೆಗೆ ಉತ್ತರ, ಇಲ್ಲ. ಯಾವುದೇ ಪ್ರಾಣಿ ಅಥವಾ ಪಕ್ಷಿಗಳು ಮನುಷ್ಯರಂತೆ ಮಾತನಾಡಲು ಸಾಧ್ಯವೇ ಇಲ್ಲ. ಅವು ನಮ್ಮ ಧ್ವನಿಯನ್ನು ಅನುಕರಿಸುತ್ತವೆ ಅಷ್ಟೇ. ಅದೂ ಸಾಕಿದ ಅಥವಾ ಪಂಜರದಲ್ಲಿ ಬಂಧಿಸಲ್ಪಟ್ಟ ಗಿಳಿಗಳು ಮಾತ್ರ ಎಂಬುದು ಇಲ್ಲಿ ನೆನಪಿಟ್ಟುಕೊಳ್ಳಬೇಕು. ಹೀಗೆ ಪಂಜರದಲ್ಲಿ ಬಂಧಿಸಿಟ್ಟಿರುವ ಗಿಳಿಗಳ ಮೇಲೆ ನಡೆಸಲಾದ ಕೆಲ ಅಧ್ಯಯನಗಳು ಹಲವು ಕೌತುಕಕಾರಿ ಸಂಗತಿಗಳನ್ನು ಹೊರಗೆಡವಿವೆ.

ಸಾಮಾನ್ಯವಾಗಿ ಗಿಳಿಯು ಮಾನವನ ದ್ವನಿಯನ್ನು ಅನುಕರಿಸುತ್ತವೆ ಹೊರತು ಅರ್ಥ ಮಾಡಿ ಕೊಳ್ಳುವುದಿಲ್ಲ. ಕೆಲವು ಪದವನ್ನು ಜೋಡಿಸಿ ಸರಳ ವಾಕ್ಯ ರಚಿಸಬಹುದು. ಸಾಕಿದ ಗಿಳಿಯು ಚಿಕ್ಕಂದಿನಿಂದಲೇ ಮಾನವನ ನಡವಳಿಕೆಗಳನ್ನು ಅನುಸರಿಸುತ್ತವೆ, ಕಲಿಯುವ ಪ್ರಯತ್ನ ಮಾಡುತ್ತವೆ. ಮನುಷ್ಯನ ಜೊತೆ ಆಟವಾಡುತ್ತವೆ. ಅಲ್ಲದೆ ಗಿಳಿಗಳು ಬುದ್ಧಿವಂತಿಕೆಯಲ್ಲೂ ಇತರ ಪ್ರಾಣಿಗಳಿಗಿಂತ ಮುಂದಿವೆ ಎಂದೇ ಹೇಳ ಬಹುದು. ಈ ಕಾರಣದಿಂದಾಗಿಯೇ ಮನುಷ್ಯನ ಧ್ವನಿಯನ್ನು ಅನುಕರಣ ಮಾಡುವ ಸಾಮರ್ಥ್ಯ ಪಡೆಯುತ್ತವೆ.
ಅಲ್ಲದೆ ಗಿಳಿಗಳು ಮಾನವನಂತೆ ಮಾತನಾ ಡಲು ಧ್ವನಿಪೆಟ್ಟಿಗೆಯನ್ನು ಹೊಂದಿಲ್ಲ. ಅವು ಹೊರಡಿಸುವ ಶಬ್ದ ಕೇವಲ ಶಿಳ್ಳೆಗಳು. ಆದರೆ ಗಿಳಿಗಳು ಬುದ್ಧಿವಂತಿಕೆ ಮತ್ತು ಸ್ಮರಣ ಶಕ್ತಿ ಯಲ್ಲಿ ಇತರ ಪ್ರಾಣಿಗಳಿಗಿಂತ ಒಂದು ಹೆಜ್ಜೆ ಮುಂದಿವೆ ಎಂಬುದನ್ನು ನಿಸ್ಸಂದೇಹವಾಗಿ ಒಪ್ಪಿಕೊಳ್ಳಲೇಬೇಕು.
ಗಿಳಿಗಳಂತೆಯೇ ನಮ್ಮ ಶಬ್ಧವನ್ನು ಅನುಕರಣೆ ಮಾಡುವ ಇನ್ನೂ ಅನೇಕ ಪಕ್ಷಿಗಳಿವೆ. ಅದರಲ್ಲಿ ಮೈನಾ ಹಕ್ಕಿ ಪ್ರಮುಖವಾದುದು. ಇದು ಒಂದು ಚಿಕ್ಕ ಪಕ್ಷಿಯಾಗಿದ್ದು ಮಾನವನ ಧ್ವನಿ ಮತ್ತು ಇತರ ಶಬ್ಧಗಳನ್ನು ಅನುಕರಿಸಬಲ್ಲದು. ಹಾಗೆಯೇ ಕಾಗೆ ಕೂಡ ಶಬ್ದ ಅನುಕರಣೆ ಮಾಡುವ ಸಾಮರ್ಥ್ಯ ಹೊಂದಿವೆ. ಆದರೆ ಕಾಗೆಗಳನ್ನು ಸಾಕುವುದು ಹಾಗೂ ಅವುಗಳಿಗೆ ತರಬೇತಿ ಕೊಡುವವರಿರಬೇಕಷ್ಟೇ. ಹಾಗೆಯೇ ಅಮೆಜಾನ್ ಗ್ರೇ ಪ್ಯಾರಟ್, ಆಫ್ರಿಕನ್ ಗ್ರೇ ಪ್ಯಾರಟ್, ಕಾಕಟೂಗಳೂ ಸಹ ನಮ್ಮ ಧ್ವನಿಯನ್ನು ಸ್ಪಷ್ಟವಾಗಿ ಅನುಕರಿಸಬಲ್ಲವು.
ಮನುಷ್ಯನ ಧ್ವನಿಯನ್ನು ಅನುಕರಿಸುವ ಈ ಪಕ್ಷಿಗಳ ಗುಣ ವಿಜ್ಞಾನಿಗಳಿಗೆ ಇಂದಿಗೂ ಕೌತುಕದ ವಿಷಯವಾಗಿಯೇ ಇದೆ. ಕಾಲಕಾಲಕ್ಕೆ ವಿಜ್ಞಾನಿಗಳು ಈ ವಿಷಯದ ಬಗ್ಗೆ ಸಂಶೋಧನೆ ನಡೆಸುತ್ತಲೇ ಇದ್ದಾರೆ. ಇದಕ್ಕೊಂದು ಸ್ಪಷ್ಟ ಉತ್ತರ ಸಂಶೋಧನೆಯಿಂದಷ್ಟೇ ತಿಳಿಯಬೇಕಿದೆ.