ಮೊದಲಿಗೆ ಒಂದು ಸಣ್ಣ ಕಥೆಯನ್ನು ಹೇಳುತ್ತೇನೆ. ಒಮ್ಮೆ ’ತಮ್ಮಿಬ್ಬರಲ್ಲಿ ಯಾರು ಶ್ರೇಷ್ಠ’ ಎಂಬ ವಿಷಯವಾಗಿ ಬ್ರಹ್ಮ ಮತ್ತು ವಿಷ್ಣುವಿನ ಮಧ್ಯೆ ಸಣ್ಣದಾಗಿ ವಾಗ್ವಾದ ಆರಂಭವಾಯಿತು. ಸಮಯ ಕಳೆದಂತೆ ಅದು ವಿಕೋಪಕ್ಕೆ ತಿರುಗಿ, ಒಬ್ಬರ ಮೇಲೊಬ್ಬರು ಯುದ್ಧ ಸಾರಿದರು. ಪರಸ್ಪರರ ಮೇಲೆ ಆಯುಧಗಳ ಪ್ರಯೋಗಗಳನ್ನೂ ಶುರು ಮಾಡಿದರು. ಇದರಿಂದ ಹಾನಿಗೊಳಗಾದದ್ದು ಮೂರು ಲೋಕಗಳು. ದೇವಾನುದೇವತೆಗಳೂ ಭಯಭೀತರಾದರು. ಯುದ್ಧ ನಿಲ್ಲುವ ಸುಚನೆ ಕಾಣದಾದಾಗ ಅವರು ಶಿವನ ಮೊರೆ ಹೋದರು. ಆಗ ಶಿವ ಲಿಂಗರೂಪ ಧರಿಸಿ ಬ್ರಹ್ಮ ಮತ್ತು ವಿಷ್ಣುವಿನ ಮಧ್ಯೆ ಕಾಣಿಸಿ ಕೊಂಡ. ಇದ್ದಕ್ಕಿದ್ದಂತೆ ಕಾಣಿಸಿಕೊಂಡ ಲಿಂಗರೂಪವನ್ನು ನೋಡಿ ಅಚ್ಚರಿಗೊಳಗಾದ ಬ್ರಹ್ಮ ಲಿಂಗದ ಮೇಲ್ಭಾಗವನ್ನೂ, ವಿಷ್ಣುವು ಕೆಳ ಭಾಗವನ್ನೂ ಅನ್ವೇಷಿಸಲು ಹೊರಟರು. ಇಬ್ಬರಿಗೂ ಲಿಂಗದ ಆದಿ-ಅಂತ್ಯ ಕಾಣಲಿಲ್ಲ. ಮೇಲ್ಭಾಗ ಹುಡುಕಲು ಹೊರಟ ಬ್ರಹ್ಮನಿಗೆ ಹೂವೊಂದು ಬೀಳುತ್ತಿರುವುದು ಕಾಣಿಸಿತು. ಆಗ ಬ್ರಹ್ಮನು, ಲಿಂಗದ ಅಂತ್ಯವನ್ನು ತಾನು ಕಂಡಿದ್ದಾಗಿ ಹೇಳಲು ಹೂವನ್ನು ಕೇಳಿಕೊಂಡ. ಇದಕ್ಕೊಪ್ಪಿದ ಹೂವು ವಿಷ್ಣುವಿನ ಬಳಿ ಬಂದು, ಬ್ರಹ್ಮನು ಲಿಂಗದ ಅಂತ್ಯವನ್ನು ಕಂಡಿದ್ದಾಗಿ ಸುಳ್ಳು ಹೇಳಿತು. ಆಗ ವಿಷ್ಣುವು ಬ್ರಹ್ಮನೇ ಶ್ರೇಷ್ಠ ಎಂದು ಸೋಲೊಪ್ಪಿಕೊಂಡ.
Thank you for reading this post, don't forget to subscribe!ಹೂವಿನ ಸುಳ್ಳಿನಿಂದ ಕೋಪೋದ್ರಿಕ್ತನಾದ ಲಿಂಗರೂಪದ ಶಿವನು, ತನ್ನ ಪೂಜೆಯಲ್ಲಿ ಯಾರೂ ಈ ಹೂವನ್ನು ಬಳಸಬಾರದೆಂದು ಹೂವಿಗೆ ಶಾಪವಿತ್ತ. ಹೀಗೆ ಶಿವನಿಂದ ಶಾಪ ಪಡೆದ ಹೂವೆ ಕೇದಗೆ ಹೂವು. ಹೀಗೆ ಶಿವನಿಂದ ಶಾಪ ಪಡೆದ ಕೇದಗೆ ಹೂವನ್ನು ಅಂದಿನಿಂದ ಶಿವಪೂಜೆಯಲ್ಲಿ ಬಳಸುವುದಿಲ್ಲ. ಆದರೆ ವಿಚಿತ್ರ ನೋಡಿ, ಶಿವನ ತಲೆಯಲ್ಲಿರುವ ನಾಗ ದೇವರಿಗೆ ಕೇದಗೆ ಅಂದರೆ ಪಂಚ ಪ್ರಾಣ. ಹೌದು, ನಾಗರ ಪಂಚಮಿ ಎಂದರೆ ಕೇದಗೆ ಹೂವಿನ ಬಳಕೆ ಇರಲೇ ಬೇಕು. ಅದಕ್ಕಾಗಿಯೇ ಏನೋ, ಕೇದಗೆ ಹೂವು ಸಾಧಾರಣವಾಗಿ ನಾಗರ ಪಂಚಮಿಯ ಸಮದಲ್ಲಿ ಅಂದರೆ ಜುಲೈ ತಿಂಗಳಿನಿಂದ ಪ್ರಾರಂಭವಾಗಿ ಅಕ್ಟೋಬರ್ ತನಕ ಅರಳಿ ಎಲ್ಲೆಡೆಯೂ ಘಮಘಮಿಸುತ್ತದೆ.

ಕೇದಗೆಯ ವೈಜ್ಞಾನಿಕ ಹೆಸರು ಪ್ಯಾಂಡಾನಸ್ ಓಡರೇಟಿಸಿಮಸ್. ಇದು ಪ್ಯಾಂಡನೇಸೀ ಕುಟುಂಬಕ್ಕೆ ಸೇರಿದ ಒಂದು ಸಸ್ಯ. ಇದಕ್ಕೆ ತಾಳೆಗಿಡ ಎಂಬ ಹೆಸರೂ ಇದೆ. ಸಂಸ್ಕೃತದಲ್ಲಿ ಕೇಥಕಿ, ಹಿಂದಿಯಲ್ಲಿ ಕೇವುಡ, ಮಲಯಾಳಂನಲ್ಲಿ ಕೈಥಾ, ಗುಜರಾತಿಯಲ್ಲಿ ಕೇಟಕಿ, ತೆಲುಗುವಿನಲ್ಲಿ ಮೊಗಿಲ್ ಮತ್ತು ತಮಿಳಿನಲ್ಲಿ ಥಾಜಾಯ್ ಎಂಬೆಲ್ಲ ಹೆಸರಿನಿಂದ ಕರೆಸಿಕೊಳ್ಳುವ ಕೇದಗೆ ಹೂವಿಗೆ ಸ್ಕ್ರೂ ಪೈನ್ ಎಂಬ ಹೆಸರೂ ಇದೆ.
ಉಸುಕು ಮತ್ತು ತೇವವುಳ್ಳ ಪ್ರದೇಶ, ನದಿ, ಹಳ್ಳ ಹಾಗೂ ಸಮುದ್ರಗಳ ದಂಡೆಗಳಲ್ಲಿ ಬೆಳೆಯುತ್ತದೆ. ಕೆಲವೊಮ್ಮೆ ಹೊಲಗದ್ದೆಗಳ ಇಕ್ಕೆಲಗಳಲ್ಲೂ ಕಂಡುಬರುವುದುಂಟು. ಕೇದಗೆಯಲ್ಲಿ ಹಲವಾರು ವಿಭಿನ್ನ ಬಗೆಗಳಿದ್ದು ಕೆಲವು ಪೊದೆಸಸ್ಯಗಳಾಗಿಯೂ ಇನ್ನು ಕೆಲವು ಚಿಕ್ಕ ಮರಗಳಾಗಿಯೊ ಬೆಳೆಯುತ್ತವೆ. ಗಿಡಗಳು ದಪ್ಪವಾದ ಕಾಂಡವನ್ನು ಹೊಂದಿದ್ದು ಗುಂಪು ಗುಂಪಾಗಿ ಬೆಳೆಯುತ್ತವೆ. ಸುಮಾರು ೧೦ ಮೀಟರ್ ಎತ್ತರಕ್ಕೆ ಬೆಳೆಯುವ ಗಿಡಗಳು, ಒಂದರಿಂದ ಎರಡು ಮೀಟರ್ ಉದ್ದದ ಎಲೆಗಳನ್ನು ಹೊಂದಿರುತ್ತವೆ. ಎಲೆಗಳು ಒರಟಾಗಿದ್ದು, ನೋಡಲು ಉದ್ದವಾದ ಖಡ್ಗದಂತೆ ಭಾಸವಾಗುತ್ತದೆ. ಎಲೆಗಳ ಅಂಚಿನಲ್ಲಿ ಅನೇಕ ಚಿಕ್ಕ ಮುಳ್ಳುಗಳನ್ನು ಹೊಂದಿರುತ್ತವೆ.


ಹೂಗಳು ಏಕಲಿಂಗಿಗಳು. ಗಂಡು ಮತ್ತು ಹೆಣ್ಣು ಹೂವುಗಳು ಬೇರೆಬೇರೆಯಾಗಿ ಅರಳುತ್ತವೆ. ಗಂಡು ಹೂವಿನ ತೆನೆ ಉದ್ದವಾಗಿದ್ದು, ಸುವಾಸನೆಯುಳ್ಳ 1 ಮೀಟರ್ ಉದ್ದದ ಹಳದಿ, ಆಕರ್ಷಕ ದಳಗಳು ಅಥವಾ ಪುಷ್ಪ ಪತ್ರಕಗಳು ಇರುತ್ತವೆ. ಹೆಣ್ಣು ಹೂವುಗಳು ಸುಮಾರು ಹತ್ತು ದಳಗಳನ್ನು ಹೊಂದಿರುತ್ತದೆ. ನಂತರದಲ್ಲಿ ಅನಾನಸ್ಸಿನಂತಹ ಮುಳ್ಳುಗಳನ್ನು ಹೊಂದಿರುವ ಕಾಯಿಗಳನ್ನು ಬಿಡುತ್ತವೆ. ಕಾಯಿಗಳ ತುದಿ ದುಂಡಾಗಿದ್ದು, ಬಲಿತಾಗ ಹಳದಿ ಅಥವಾ ಕೆಂಪಾಗಿರುತ್ತವೆ.
ಕೇದಗೆಯ ಸಸ್ಯ ಸ್ವಾಭಾವಿಕ ಸಂತಾನಾಭಿವೃದ್ಧಿ ಬೀಜ ಪುನರುತ್ಪತ್ತಿ ಕ್ರಮದಿಂದ ನಡೆಯುವುದೇ ಹೆಚ್ಚು. ಗಿಡದ ರೆಂಬೆಗಳು ಬೆಳೆಯುತ್ತ ಹೋದಂತೆ ಅಲ್ಲಲ್ಲೆ ಬೇರುಗಳು ಹುಟ್ಟಿಕೊಂಡು, ರೆಂಬೆಗಳು ಮೂಲಸಸ್ಯದಿಂದ ಬೇರ್ಪಟ್ಟು ಹೊಸ ಸಸ್ಯಗಳಾಗುತ್ತವೆ. ಕಾಂಡವನ್ನು ಅನೇಕ ತುಂಡುಗಳನ್ನಾಗಿ ಕತ್ತರಿಸಿ ನೆಟ್ಟು ಹೊಸಗಿಡಗಳನ್ನು ಉತ್ಪಾದಿಸಬಹುದು.
ಸೂಚನೆ: ಕೇದಗೆ ಹೂವು ಮತ್ತು ಬೇರಿನಲ್ಲಿ ಔಷಧೀಯ ಗುಣಗಳು ಇರುವುದು ಹೌದಾದರೂ, ಉಪಯೋಗಿಸುವ ಮೊದಲು ತಿಳಿದವರಿಂದ ಸಲಲಹೆ ತೆಗೆದುಕೊಳ್ಳುವುದು ಒಳಿತು.