ಪ್ರೇಮವಿದೆ ಮನದೆ ನಗುತ ನಲಿವಾ ಹೂವಾಗಿ
ಬಂದೆ ಇಲ್ಲಿಗೆ… ನಾ ಸಂಜೆ ಮಲ್ಲಿಗೆ… ನಾ ಸಂಜೆ ಮಲ್ಲಿಗೆ…
ಈ ಹಾಡು ಇಲ್ಲಿ ಯಾಕೆ ಬಂತು ಅಂತೀರಾ? ನಿಜ, ಅದಕ್ಕೂ ಈ ಹೂವಿಗೂ ಸಂಬಂಧವಿದೆ. ಹೌದು, ಈ ಸಲ ಹೇಳ ಹೊರಟಿರುವುದು ಸಂಜೆ ಮಲ್ಲಿಗೆ ಹೂವಿನ ಬಗ್ಗೆ. ದುಂಡು ಮಲ್ಲಿಗೆ, ಜಾಜಿ ಮಲ್ಲಿಗೆ, ಸೂಜಿ ಮಲ್ಲಿಗೆ ಮುಂತಾದ ಹೂವಿನ ರೀತಿಯಲ್ಲಿಯೇ ಇದರ ಹೆಸರು ಸಂಜೆ ಮಲ್ಲಿಗೆ ಅಂತಿದ್ದರೂ, ಇದು ಎಲ್ಲಕ್ಕಿಂತ ಭಿನ್ನ. ಸಾಮಾನ್ಯವಾಗಿ ಎಲ್ಲ ಹೂವುಗಳು ಬೆಳಗ್ಗೆ ಅರಳಿದರೂ ಈ ಸಂಜೆ ಮಲ್ಲಿಗೆ ಮಾತ್ರ ಅರಳುವುದು ಸಾಯಂಕಾಲ ನಾಲ್ಕು ಗಂಟೆಗೆ. ಅದಕ್ಕಾಗಿಯೇ ಈ ಹೂವಿಗೆ ನಾಲ್ಕು ಗಂಟೆ ಹೂವು, ಸಂಜೆ ಮಲ್ಲಿಗೆ ಎಂಬ ಹೆಸರು ಬಂದಿದೆ. ಅದರ ಜೀವಿತಾವಧಿ ಕೂಡ ಕಡಿಮೆಯೇ. ಸೂರ್ಯೋದಯದ ವೇಳೆಗೆ ಹೂವು ಮುದುಡಿ, ಉದುರುತ್ತದೆ.
ಸಂಜೆ ಮಲ್ಲಿಗೆ ಗಿಡಗಳು ಹೆಚ್ಚಾಗಿ ಮಳೆಗಾಲದಲ್ಲಿ ಕಾಣಸಿಗುತ್ತವೆ. ಬೀಜ ಮೊಳಕೆಯೊಡೆದು ಒಂದೆರಡು ತಿಂಗಳಲ್ಲಿ ಸೊಂಪಾಗಿ ಬೆಳೆದ ಗಿಡಗಳು ಹೂವು ಬಿಡಲು ಪ್ರಾರಂಭಿಸುತ್ತವೆ. ಸಂಜೆ ಮಲ್ಲಿಗೆಯ ಕುತೂಹಲಕರ ಅಂಶವೆಂದರೆ ವಿವಿಧ ಬಣ್ಣಗಳ ಹೂವುಗಳು. ಒಂದೇ ಗಿಡದಲ್ಲಿ ಏಕಕಾಲದಲ್ಲಿ ನಾಲ್ಕಾರು ಬಣ್ಣಗಳಲ್ಲಿ ಕಂಡು ಬರುತ್ತವೆ. ಅಲ್ಲದೆ ಒಂದೇ ಹೂವು ಬೇರೆ ಬೇರೆ ರೀತಿಯ ಬಣ್ಣಗಳಿಂದ ಕೂಡಿರುತ್ತದೆ. ಈ ಹೂವುಗಳು ಬಿಳಿ, ಹಳದಿ, ಕೆಂಪು, ಗುಲಾಬಿ, ನಸು ಗುಲಾಬಿ, ಪಿಂಕ್, ಗಾಢ ಹಳದಿ, ಬಿಳಿ-ಕೆಂಪಿನ ಮಿಶ್ರಣ ಹೀಗೆ ಹಲವು ಬಣ್ಣಗಳಲ್ಲಿ ಅರಳುತ್ತವೆ.
ಕನ್ನಡದಲ್ಲಿ ಗುಳಮಾಜಿ, ಮದ್ದೆಮಲ್ಲಿಗೆ, ವಿಭೂತಿ ಗಿಡ, ಭೂ ರುದ್ರಾಕ್ಷಿ ಎಂದೆಲ್ಲಾ ಕರೆಸಿಕೊಳ್ಳುವ ಸಂಜೆ ಮಲ್ಲಿಗೆಯ ಮೂಲ ದಕ್ಷಿಣ ಅಮೆರಿಕಾ. ಆದರೆ ಈ ಸಂಜೆ ಮಲ್ಲಿಗೆ ಜಗತ್ತಿನ ನಾನಾ ದೇಶಗಳಲ್ಲಿ ಅರಳುತ್ತದೆ. ಪಾಕಿಸ್ತಾನದಲ್ಲಿ ಇದನ್ನು ಹಂಡ್ರಿರಿಕಾ ಎನ್ನುತ್ತಾರೆ. ಬುಲೇರಿಯಾದಲ್ಲಿ ನಶ್ಟನ ಕ್ರಾಶ್ರಾವಿಕಾ ಎಂಬ ಹೆಸರಿನಿಂದ ಗುರುತಿಸಿಕೊಳ್ಳುತ್ತದೆ. ಮೆಕ್ಸಿಕೊದಲ್ಲಿ ಮರವಲ್ಲ ಎಂದು ಕರೆಸಿಕೊಳ್ಳುವ ಸಂಜೆ ಮಲ್ಲಿಗೆ ಬಾಂಗ್ಲಾದೇಶದಲ್ಲಿ ಸಂಧ್ಯಮಲತಿ ಎಂಬ ಹೆಸರು ಹೊಂದಿದೆ. ತಮಿಳುನಾಡಿನಲ್ಲಿ ಅಂದಿ ಮಂದಾರೈ, ಆಂಧ್ರಪ್ರದೇಶದಲ್ಲಿ ಚಂದ್ರಕಾಂತ, ಇಂದ್ರಗಾಂತಿ, ಕೇರಳದಲ್ಲಿ ನಾಲುಮನಿ ಮಾವು, ಮಹಾರಾಷ್ಟ್ರದಲ್ಲಿ ಗುಲಾಬಕ್ಷೀ, ಅಸ್ಸಾಮಿನಲ್ಲಿ ಗೋದುಲಿ ಗೋಪಾಲ್, ಒರಿಯಾದಲ್ಲಿ ರಂಗಾನಿ, ಸಂಸ್ಕೃತದಲ್ಲಿ ಕೃಷ್ಣಕೇಳಿ, ಎಂದೆಲ್ಲ ಕರೆಸಿಕೊಳ್ಳುವ ಸಂಜೆ ಮಲ್ಲಿಗೆ ಉಷ್ಣವಲಯದ ಬೆಚ್ಚಗಿನ ಹವಾಮಾನದಲ್ಲಿ ಹೆಚ್ಚಾಗಿ ಬೆಳೆಯುತ್ತದೆ. ಈ ಸಸ್ಯದ ಮೇಲೆ ಸೂರ್ಯನ ಬೆಳಕು ಬಿದ್ದಾಗ ಹಸಿರಾಗಿ ನಳನಳಿಸಲಾರಂಭಿಸುತ್ತದೆ.


ನೈಕ್ಟಾಗಿನೇಶಿಯ ಕುಟುಂಬಕ್ಕೆ ಸೇರಿದ ಸಂಜೆ ಮಲ್ಲಿಗೆ ಗಿಡದ ವೈಜ್ಞಾನಿಕ ಹೆಸರು ಮಿರಾಬಿಲಿಸ್ ಜಲಪ. ಮಿರಾಬಿಲಿಸ್ ಎಂದರೆ ಅದ್ಭುತ ಎಂದರ್ಥ. ಉತ್ತರ ಅಮೇರಿಕಾದಲ್ಲಿ ’ಜಲಪ’ ಎಂಬ ಊರಿನ ಹೆಸರಿದೆ. ಇವೆರಡು ಸೇರಿ ಈ ಹೂವಿಗೆ ಮಿರಾಬಿಲಿಸ್ ಜಲಪ ಎಂಬ ಹೆಸರು ಬಂದಿರಬಹುದು. ಪಾಳು ಭೂಮಿ, ರಸ್ತೆ ಬದಿಯಲ್ಲಿ ಹೆಚ್ಚಾಗಿ ಕಂಡು ಬರುವ ಸಂಜೆ ಮಲ್ಲಿಗೆ ಗಿಡ ಸುಮಾರು ಒಂದು ಮೀಟರ್ ಬೆಳೆಯಬಲ್ಲ ಸಸ್ಯವಾಗಿದ್ದು ಹಲವಾರು ಕವಲುಗಳನ್ನು ಹೊಂದಿದ್ದು, ಪೊದೆಗಳಂತೆ ಕಂಡು ಬರುತ್ತವೆ. ಸುಮಾರು ಹತ್ತು ಸೆಂಟಿಮೀಟರ್ ಉದ್ದ ಹಾಗೂ ಆರರಿಂದ ಏಳು ಸೆಂಟಿಮೀಟರ್‌ಗಳಷ್ಟು ಅಗಲದ, ಹೃದಯಾಕಾರದ ಕಡು ಹಸಿರು ಬಣ್ಣದ ಎಲೆಗಳು ಒಂದಕ್ಕೊಂದು ವಿರುದ್ಧ ದಿಕ್ಕಿನಲ್ಲಿ ಇರುತ್ತವೆ. ಕಾಂಡದ ಕೊನೆಯಲ್ಲಿ ಅರಳುವ ದುಂಡಗಿನ ಹೂವುಗಳು ಸಾಮಾನ್ಯವಾಗಿ ಐದು ದಳಗಳನ್ನು ಹೊಂದಿರುತ್ತವೆ. ಹೂವುಗಳು ಉದುರಿದ ಜಾಗದಲ್ಲಿ ಹಸಿರು ಬಣ್ಣದ ಮೊಗ್ಗಿನಾಕಾರದ ಬೀಜಗಳು ಅಡಗಿರುತ್ತವೆ. ದಿನಕಳೆದಂತೆ ಬೀಜಗಳು ಕಪ್ಪು ಬಣ್ಣಕ್ಕೆ ತಿರುಗಿ ಉದುರಿ ಹೋಗುತ್ತವೆ. ನೋಡಲು ಕಾಳು ಮೆಣಸಿನಂತೆ ಕಾಣುವ ಬೀಜಗಳು ಮತ್ತೆ ಮಳೆಗಾಲ ಪ್ರಾರಂಭವಾದಾಗ ಮೊಳಕೆಯೊಡೆಯುತ್ತವೆ.
ಈ ಸಂಜೆ ಮಲ್ಲಿಗೆ ಗಿಡದ ಬೇರು, ಎಲೆ, ಹೂವು ಎಲ್ಲವೂ ಯಥೇಚ್ಚವಾಗಿ ಔಷಧೀಯ ಗುಣಗಳನ್ನು ಹೊಂದಿದೆ. ಹಸಿರು ಎಲೆಗಳನ್ನು ಅರೆದು ಗಾಯಗಳ ಮೇಲೆ ಹಚ್ಚುವುದರಿಂದ ಗಾಯಗಳಿಂದ ಗುಣಮುಖರಾಗಬಹುದು. ಅಲ್ಲದೆ ಈ ಪೇಸ್ಟ್ ಹಚ್ಚುವುದರಿಂದ ತುರಿಕೆ, ನವೆ ಮುಂತಾದ ಚರ್ಮರೋಗಗಳು ಗುಣವಾಗುತ್ತವೆ. ಉಗುರು ಸುತ್ತಿನ ಸಮಸ್ಯೆಯಿರುವವರು ಎಲೆ ಅಥವಾ ಬೇರನ್ನು ಅರೆದು, ಎಳ್ಳೆಣ್ಣೆಯಲ್ಲಿ ಬಿಸಿ ಮಾಡಿ ಕೆಲ ದಿನಗಳವರೆಗೆ ಹಚ್ಚುವುದರಿಂದ ಉಗುರು ಸುತ್ತು ಕಡಿಮೆಯಾಗುತ್ತದೆ. ಹೂವುಗಳನ್ನು ಆಹಾರಕ್ಕೆ ಬಣ್ಣ ಬರಲು ಬಳಸುತ್ತಾರೆ. ಕೇಕ್ ಮತ್ತು ಜೆಲ್ಲಿಗಳಿಗೆ ಬರುವ ಕಡುಗೆಂಪು ಬಣ್ಣವನ್ನು ಸಂಜೆ ಮಲ್ಲಿಗೆ ಹೂವುಗಳಿಂದಲೆ ಪಡೆಯಲಾಗುತ್ತದೆ. ಕೆಲವು ಪ್ರಭೇದಗಳ ಬೀಜವನ್ನು ಸೌಂದರ್ಯವರ್ಧಕ ಮತ್ತು ಬಣ್ಣವಾಗಿ ಬಳಸಲಾಗುತ್ತದೆ. ಸಸ್ಯದ ಕಷಾಯವನ್ನು ಭೇದಿ, ಸೋಂಕಿತ ಗಾಯಗಳು ಮತ್ತು ಜೇನುನೊಣ ಮತ್ತು ಚೇಳು ಕಚ್ಚಿದಾಗ ಬಳಸಲಾಗುತ್ತದೆ. ಹೂವುಗಳ ರಸವನ್ನು ಕಿವಿನೋವು, ಅತಿಸಾರ, ಭೇದಿ, ಸಿಫಿಲಿಸ್ ಮತ್ತು ಪಿತ್ತಜನಕಾಂಗದ ಸೋಂಕುಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಇಷ್ಟೆಲ್ಲ ಉಪಯೋಗಗಳಿರುವ ಈ ಹೂವಿನ ಗಿಡಗಳನ್ನು ಕಳೆಗಿಡದಂತೆ ಕಾಣುವುದು ಮಾತ್ರ ವಿಷಾಧನೀಯ.