ನಿಸರ್ಗದಲ್ಲಿ ಅನೇಕ ವೈವಿಧ್ಯಮಯವಾದ ಜೀವರಾಶಿಗಳಿವೆ. ಪ್ರಾಣಿ, ಪಕ್ಷಿ ಹೀಗೆ ಸಾಕಷ್ಟು ವಿಧದ ಜೀವ ಸಂಕುಲಗಳನ್ನು ನಾವು ಕಾಣಬಹುದು. ಅವುಗಳನ್ನು ಒಂದೊಂದಾಗಿ ಅಭ್ಯಸಿಸುತ್ತಾ ಹೋದರೆ ಕೆಲವು ಕುತೂಹಲಕಾರಿಯಾದ ಸಂಗತಿಗಳು ನಮ್ಮ ಮುಂದೆ ಹರಡಿಕೊಳ್ಳುತ್ತವೆ.
ಇರಲಿ, ಈ ವಾರ ಪಕ್ಷಿಗಳಲ್ಲೇ ಅತ್ಯಂತ ಶ್ರಮ ಜೀವಿಯಾದ ಮರಕುಟಿಗದ ಬಗ್ಗೆ ತಿಳಿಯುವ ಪ್ರಯತ್ನ ಮಾಡೋಣ.
ಮರಕುಟಿಗ ಒಂದು ರೀತಿಯಲ್ಲಿ ವೃಕ್ಷವಾಸಿ ಎಂದೇ ಹೇಳಬಹುದು. ಪ್ರಪಂಚದಾದ್ಯಂತ ಸುಮಾರು ಇನ್ನೂರು ಜಾತಿಯ ಮರಕುಟಿಗಗಳು ಕಂಡು ಬರುತ್ತವೆ. ಆದರೆ ಇವು ಆಸ್ಟ್ರೇಲಿಯಾ, ನ್ಯೂಗಿನಿ, ನ್ಯೂಜಿಲ್ಯಾಂಡ್ ಹಾಗೂ ಮಡಗಾಸ್ಕರ್‌ಗಳಲ್ಲಿ ಕಂಡು ಬರುವುದಿಲ್ಲ. ಭಾರತದಲ್ಲಿ ಸುಮಾರು ಮೂವತ್ತೆರಡು ಜಾತಿಯ ಮರಕುಟಿಗಗಳು ಕಂಡು ಬರುತ್ತವೆ. ಇವುಗಳು ಪಿಸಿಡೇ ಕುಟುಂಬಕ್ಕೆ ಸೇರಿದ್ದು, ವೈಜ್ಞಾನಿಕ ಹೆಸರು ವುಡ್ ಪೆಕ್ಕರ್.
ಇವುಗಳನ್ನು ಶ್ರಮಜೀವಿಗಳೆಂದು ಏಕೆ ಕರೆ ಯುತ್ತಾರೆ ಗೊತ್ತಾ? ಎಂಥದ್ದೇ ಗಟ್ಟಿಯಾದ ಮರಗಳಾದರೂ ಸಹ ತಮ್ಮ ಕೊಕ್ಕಿನಿಂದ ಕುಕ್ಕಿಕುಕ್ಕಿ ಅವುಗಳಲ್ಲಿ ರಂಧ್ರ ಕೊರೆಯಬಲ್ಲವು. ಅಲ್ಲದೇ ಮರಕುಟಿಗಗಳು ನಿಮಿಷಕ್ಕೆ ಸುಮಾರು ೧೨೦ ಬಾರಿ ಮರವನ್ನು ಕುಟ್ಟಬಲ್ಲವು ಎಂದರೆ ನೀವೇ ಊಹಿಸಿ! ಅವುಗಳ ಕೊಕ್ಕು ಎಷ್ಟು ಗಟ್ಟಿಯಾಗಿರಬಹುದು.
ಉದ್ದನೆಯ ಗಟ್ಟಿಮುಟ್ಟಾದ ಅವುಗಳ ಕೊಕ್ಕು ಗಡಸು ಹಾಗೂ ಚೂಪಾಗಿದ್ದು, ನಾವು ಬಳಸುವ ಉಳಿಗಿಂತಲೂ ಹೆಚ್ಚು ಬಲವಾದವು. ಅವುಗಳ ಕಾಲುಗಳು ಮೋಟಾಗಿದ್ದು ಬೆರಳು ಉದ್ದವಾಗಿವೆ. ಕಾಲಿನಲ್ಲಿ ನಾಲ್ಕು ಬೆರಳುಗಳಿದ್ದು, ಎರಡು ಹಿಂಭಾಗಕ್ಕೆ ಚಾಚಿದರೆ ಉಳಿದೆರಡು ಮುಂಭಾಗಕ್ಕೆ ಚಾಚಿಕೊಂಡಿರುತ್ತವೆ. ಉಗುರುಗಳು ಮೊನಚಾಗಿದ್ದು, ಮರವನ್ನು ಗಟ್ಟಿಯಾಗಿ ಹಿಡಿಯಲು ಸಹಾಯ ಮಾಡುತ್ತವೆ. ಕುತ್ತಿಗೆಯ ಬಲವಾದ ಸ್ನಾಯುಗಳು ಕತ್ತಿನ ಚಲನೆಗೆ ವೇಗ ತಂದರೆ, ತಲೆ ಬುರುಡೆಯ ರಚನೆ ಮರವನ್ನು ಜೋರಾಗಿ ಕುಕ್ಕುವಾಗ ಉಂಟಾಗುವ ಅನಾಹುತವನ್ನು ತಡೆಯುತ್ತವೆ. ಮರ ಕುಟಿಗದ ನಾಲಿಗೆಯು ಉದ್ದವಾಗಿದ್ದು, ತಲೆಬುರುಡೆಯ ವಿಶೇಷ ಕುಳಿಯಲ್ಲಿ ಸುರುಳಿ ಸುತ್ತಿಕೊಂಡಿರುತ್ತದೆ. ನಾಲಿಗೆಯ ತುದಿಯಲ್ಲಿ ಹಿಂದಕ್ಕೆ ಬಾಗಿರುವ ಕೊಕ್ಕೆಯಂತಹ ರಚನೆಯಿದ್ದು ಇದು ಒಂದು ರೀತಿಯ ಅಂಟು ದ್ರವ ಈ ಕೊಕ್ಕಿನಲ್ಲಿರುತ್ತದೆ. ಇದರಿಂದಾಗಿ ಮರಗಳಲ್ಲಿರುವ ಸಣ್ಣ ಕೀಟಗಳನ್ನು ತಪ್ಪಿಸಿಕೊಳ್ಳದಂತೆ ಹಿಡಿಯಲು ಅನುಕೂಲವಾಗಿದೆ.


ಇವು ಮರದ ಕಾಂಡ, ರೆಂಬೆಗಳಲ್ಲಿರುವ ಕ್ರೀಮಿ-ಕೀಟಗಳನ್ನು ಹಿಡಿದು ತಿನ್ನುತ್ತವೆ. ಅಲ್ಲದೆ ಕೆಲವೊಮ್ಮೆ ಕಾಡುಗಳಲ್ಲಿ ಸಿಗುವ ಹಣ್ಣುಗಳನ್ನೂ ಭಕ್ಷಿಸಬಲ್ಲವು. ಇವು ಮರಗಳನ್ನು ಕುಟ್ಟಿಕುಟ್ಟಿ ರಂಧ್ರ ಕೊರೆಯುವುದರ ಹಿಂದೆ ಒಂದು ರಹಸ್ಯವೂ ಇದೆ. ಒಂದು ಮರದಲ್ಲಿ ಕೊರೆದ ಸಾವಿರಾರು ರಂಧ್ರಗಳಲ್ಲಿ ಸಿಕ್ಕಸಿಕ್ಕ ಹಣ್ಣುಗಳನ್ನು ತಂದು ಸಮಯಕ್ಕಾಗಲಿ ಎಂದು ಶೇಖರಿಸಿಟ್ಟುಕೊಳ್ಳುತ್ತವೆ. ಅಲ್ಲದೆ ಇವು ಗೂಡು ಕಟ್ಟುವುದು ಕಡಿಮೆ. ತಾವೇ ಕೊರೆದ ರಂಧ್ರಗಳಲ್ಲಿ ಮೊಟ್ಟೆಗಳನ್ನಿಟ್ಟು, ಕಾವು ಕೊಡುತ್ತವೆ. ಆಗತಾನೆ ಮೊಟ್ಟೆಯಿಂದ ಹೊರ ಬಂದ ಮರಿಗಳು ಕೂಡ ಕೆಲವು ದಿನಗಳ ಮಟ್ಟಿಗೆ ಇದೇ ರಂಧ್ರಗಳಲ್ಲಿ ಇರುತ್ತವೆ.
ಅಲ್ಲದೆ ಮರವನ್ನು ಕೊಟ ಕೊಟ ಕೊಟ ಎಂದು ಕುಕ್ಕುವುದರ ಹಿಂದೆ ಇನ್ನೊಂದು ಆಶ್ಚರ್ಯಕರ ಸಂಗತಿಯೂ ಇದೆ. ಮನುಷ್ಯರಂತೆಯೇ ಈ ಮರಕುಟಿಕಗಳೂ ಕೂಡ ತಮ್ಮ ಸಂಗಾತಿಯೋಂದಿಗೆ ಪ್ರೇಮ ನಿವೇದನೆ ಮಾಡಿಕೊಳ್ಳುತ್ತವೆ. ತಮ್ಮ ಪ್ರೇಮವನ್ನು ವ್ಯಕ್ತ ಪಡಿಸಲು ಕೂಡ ಈ ಮರ ಕುಟಿಕಗಳು ಮರವನ್ನು ಕುಟ್ಟುತ್ತವೆ. ಪದೇ ಪದೆ ಮರ ಕುಟ್ಟುತ್ತ ಸಂಗಾತಿಯನ್ನು ತಮ್ಮೆಡೆಗೆ ಆಕರ್ಷಿಸುತ್ತವೆ. ಇದಕ್ಕೆ ಡ್ರಮ್ಮಿಂಗ್ ಅನ್ನುತ್ತಾರೆ. ಬಹುಶಃ ಇವು ಮರಕುಟಿಕಗಳ ಭಾಷೆಯೂ ಇರಬಹುದೇನೋ?
ಮರ ಕುಟಿಕಗಳು ಹಲವಾರು ಬಣ್ಣಗಳಲ್ಲಿ ಕಂಡು ಬರುತ್ತವೆ. ಕಪ್ಪು, ಬಿಳಿ, ಕೆಂಪು ಹೀಗೆ ನಾನಾ ಬಣ್ಣಗಳಲ್ಲಿ ಕಂಡು ಬರುತ್ತವೆ. ಕನ್ನಡದಲ್ಲಿ ಮರಕುಟಿಗ, ಬೆಂಗಾಲಿಯಲ್ಲಿ ಕಾಠೋಕರಾ, ಗುಜರಾತಿಯಲ್ಲಿ ಲಕ್ಕಡಖೋಡ, ಹಿಂದಿಯಲ್ಲಿ ಕಠಫೋಡವಾ, ಮಲಯಾಳಂನಲ್ಲಿ ಮರಪ್ಪಟ್ಟಿ, ಮರಾಠಿಯಲ್ಲಿ ಲಾಕೂಡ್‌ಪೇಕರ್, ಪಂಜಾಬಿ ಯಲ್ಲಿ ಲಕರ್‌ಹರಿ, ಸಿಂಹಳ ಭಾಷೆಯಲ್ಲಿ ಲಿ ಕುಟ್ಟಿಯಾ, ತಮಿಳಿನಲ್ಲಿ ಮರಂಕೊಟ್ಟಿ ಹೀಗೆ ಹಲವಾರು ಹೆಸರುಗಳಿಂದ ಕರೆಸಿಕೊಳ್ಳುವ ಮರಕುಟಿಗ ಒಂದು ಸುಂದರ ಪಕ್ಷಿಯಂತೂ ಹೌದು. ಇತ್ತೀಚಿನ ದಿನಗಳಲ್ಲಿ ಮರಕುಟಿಗಗಳನ್ನು ಕಾಣುವುದು ಅಪರೂಪವಾಗಿದೆ.