ಯಮಧರ್ಮನಿಂದ ವರ ಪಡೆದ ಕಾಗೆ ಆಶುಭವೇಕೆ?

ನಮಗೆಲ್ಲ ತಿಳಿದಂತೆ ರಾವಣನಿಲ್ಲದಿದ್ದರೆ ರಾಮಾಯಣ ನಡೆಯುತ್ತಿರಲೇ ಇಲ್ಲ. ರಾವಣನಿಗೆ ಮಾನವರಿಂದಲ್ಲದೆ, ಬೇರೆ ಯಾವ ಜೀವಿಗಳಿಂದಲೂ ಮರಣವಿಲ್ಲ ಎಂಬ ವರವನ್ನು ಸೃಷ್ಟಿಕರ್ತ ಬ್ರಹ್ಮ ಕರುಣಿಸಿದ್ದ. ಈ ಕಾರಣಕ್ಕಾಗಿ ದೇವಾನು ದೇವತೆಗಳೆಲ್ಲ ರಾವಣನಿಗೆ ಹೆದರುತ್ತಿದ್ದರು. ಇಂತಿಪ್ಪ ಸಮಯದಲ್ಲಿ ಸೂರ್ಯ ವಂಶದ ಮರುತ ಎಂಬ ರಾಜ ಯಜ್ಞವೊಂ ದನ್ನು ಹಮ್ಮಿಕೊಂಡಿದ್ದ. ಹೋಮಕ್ಕೆ ಸಮರ್ಪಿಸಿದ್ದ ಹವಿಸ್ಸನ್ನು ಸ್ವೀಕರಿಸಲು ಎಲ್ಲ ದೇವಾನು ದೇವತೆಗಳು ಆಗಮಿಸಿದ್ದರು. ಅದೇ ಸಮಯದಲ್ಲಿ ಲಂಕಾಧಿಪತಿ ರಾವಣನ ಆಗಮನವೂ ಆಗುತ್ತದೆ. ರಾವಣನನ್ನು ಕಂಡ ದೇವಾನುದೇವತೆಗಳೆಲ್ಲ ತಮ್ಮ ನಿಜರೂಪ ತಿಳಿಯದಿರಲೆಂದು ಪ್ರಾಣಿ-ಪಕ್ಷಿಗಳ ರೂಪ ಧಾರಣೆ ಮಾಡುತ್ತಾರೆ. ಯಮಧರ್ಮ ಕಾಗೆಯ ರೂಪ ಧರಿಸಿ ರಾವಣನ ದೃಷ್ಟಿಯಿಂದ ತಪ್ಪಿಸಿಕೊಳ್ಳುತ್ತಾನೆ. ಈ ಕಾರಣ ಕ್ಕಾಗಿ ಕಾಗೆಗೆ ವರವೊಂದನ್ನು ನೀಡುತ್ತಾನೆ. ಭೂಲೋಕದಲ್ಲಿ ಯಾರಾದರೂ ಹಾಕಿದ ಅನ್ನ ವನ್ನು ತಿಂದರೆ, ಯಮಲೋಕದಲ್ಲಿರುವ ಆತನ ಪಿತೃಗಳಿಗೆ ತೃಪ್ತಿಯುಂಟಾಗುತ್ತದೆ ಎಂಬುದು ಕಾಗೆಗೆ ಸಿಕ್ಕ ವರ. ಅಂದಿನಿಂದ ಪಿತೃಕಾರ್ಯದಲ್ಲಿ ಕಾಗೆಗೆ ಪಿಂಡ ಪ್ರಧಾನ ಮಾಡುವ ಪರಿಪಾಠ ಪ್ರಾರಂಭವಾಯಿತು.

ಅದಲಿರಲಿ, ನಾವು ನೋಡುವ ಕಾಗೆಯ ಬಣ್ಣ ಕಪ್ಪು. ಕನ್ನಡದಲ್ಲಿ ಕಪ್ಪು ಬಣ್ಣಕ್ಕೆ ಕಾಗೆಯ ಉದಾಹರಣೆ ಕೊಡುವುದು ಸಾಮಾನ್ಯ. ಆದರೆ ಕಾಗೆಗಳು ಕರಿ-ಬಿಳಿ, ನೀಲಿ-ಹಸಿರು, ಅಥವಾ ಕಂದು ಬಣ್ಣಗಳಲ್ಲಿಯೂ ಕಂಡು ಬರುತ್ತವೆ. ಕಾಗೆಗಳಲ್ಲಿ ಸುಮಾರು ನೂರಮೂವತ್ತೊಂದು ವಿವಿಧ ಪ್ರಭೇದಗಳಿವೆ. ಪ್ರಾಣಿ ಮತ್ತು ಪಕ್ಷಿಗಳಲ್ಲಿ ಕಾಗೆ ಅತಿ ಬುದ್ಧಿವಂತ ಎನ್ನಬಹುದು. ಉದಾಹರಣೆಗೆ ಮ್ಯಾಗ್ ಪೈ ಕಾಗೆ ಕನ್ನಡಿಯನ್ನು ನೋಡಿ ಅಲ್ಲಿರುವುದು ಮತ್ತೊಂದು ಕಾಗೆಯಲ್ಲ, ತನ್ನದೇ ಪ್ರತಿಬಿಂಬ ಎಂದು ಗುರುತಿಸಬಲ್ಲದು. ಬಹುತೇಕ ಕಾಗೆಗಳು ಜನವಸತಿಗೆ ಸಮೀಪವಾಗಿ ವಾಸ ಮಾಡುತ್ತವೆ. ಕೆಲವು ಪ್ರಭೇದಗಳು ಕಾಡಿನಲ್ಲಿ ವಾಸಿಸುತ್ತವೆ. ಇವು ಸಾಧಾರಣವಾಗಿ ಇದ್ದಲ್ಲೇ ಇರುವ ಹಕ್ಕಿಗಳಾದರೂ, ಬೇಸಿಗೆ ಮತ್ತು ಚಳಿಗಾಲಗಳಲ್ಲಿ ವಲಸೆ ಹೋಗುತ್ತವೆ.ಇವುಗಳಲ್ಲಿ ಕೆಲವು ಪ್ರಭೇದಗಳು ಕಡ್ಡಿ, ಟೊಂಗೆಗಳಿಂದ ಗೂಡು ಕಟ್ಟಬಲ್ಲವು. ಕಾಗೆಗಳು ಸಮೂಹ ಜೀವಿಗಳು. ಬೆಳ ಗಿನ ಹಾಗೂ ಸಂಜೆಯ ಹೊತ್ತು ಸದ್ದು ಮಾಡುತ್ತಾ ಗುಂಪುಗೂಡುವುದು ನಮ್ಮ ಪರಿಸರದಲ್ಲಿ ಸಾಧಾರಣವಾಗಿ ಕಾಣಸಿಗುತ್ತದೆ.

ಕಾಗೆಯ ಆಹಾರ ಕ್ರಮವೂ ವೈವಿಧ್ಯ ಹಾಗೂ ವಿಚಿತ್ರವಾದದ್ದು. ಇತರ ಪಕ್ಷಿಯ ಮೊಟ್ಟೆ ಹಾಗೂ ಮರಿಗಳು, ಇಲಿಗಳನ್ನು ಹಿಡಿದು ತಿನ್ನುತ್ತವೆ. ಅಲ್ಲದೆ ಸತ್ತ ಪ್ರಾಣಿಗಳ ಮಾಂಸ, ತ್ಯಾಜ್ಯ ವಸ್ತುಗಳನ್ನೂ ಸಹ ಕಾಗೆಗಳು ತಿನ್ನುತ್ತವೆ. ಇತರ ಪಕ್ಷಿಗಳ ಮೊಟ್ಟೆ ಹಾಗೂ ಮರಿಗಳನ್ನು ತಿನ್ನುವ ಗುಣದ ಕಾರಣಕ್ಕೆ ಕಾಗೆಗಳನ್ನು ಹತ್ತಿರ ಬಿಟ್ಟುಕೊಳ್ಳುವುದಿಲ್ಲ. ಅಲ್ಲದೆ ತರಕಾರಿ ಹಾಗೂ ಧಾನ್ಯಗಳನ್ನು ತಿನ್ನುವುದರಿಂದ ರೈತರೂ ಸಹ ಕಾಗೆಗಳನ್ನು ತಮ್ಮ ಜಮೀನಿನ ಹತ್ತಿರ ಬಿಟ್ಟು ಕೊಳ್ಳಲು ಬಯಸುವುದಿಲ್ಲ.

ಇವು ಕಾಗೆಯ ಜೀವನ ಶೈಲಿಯಾದರೆ, ಕಾಗೆಯ ಬಗ್ಗೆ ಕೆಲವು ನಂಬಿಕೆಗಳು ನಮ್ಮಲ್ಲಿವೆ. ಹಿಂದೂ ಧರ್ಮಗ್ರಂಥಗಳಲ್ಲಿ ಕಾಗೆಯನ್ನು ಅಶುಭ ಸೂಚಕ ಎನ್ನಲಾಗಿದೆ. ಅದರ ಕರ್ಕಶ ಧ್ವನಿ ಕೂಡ ಅಶುಭ ಎಂತಲೇ ಗುರುತಿಸಲ್ಪಡುತ್ತದೆ. ಮೊದಲೇ ತಿಳಿಸಿದ ಹಾಗೆ ಯಮಧರ್ಮರಾಜನ ಕೃಪೆಗೆ ಒಳಗಾದ ಕಾಗೆ, ಯಮನ ದೂತ ಅಂತಲೇ ಗುರುತಿಸಲ್ಪಟ್ಟಿದೆ. ಕಾಗೆಯು ಶುಭ ಮತ್ತು ಅಶುಭ ಸಂಗತಿಗಳನ್ನು ಗೃಹಿಸಿ ಮಾನವನಿಗೆ ಮೊದಲೇ ತಿಳಿಸುತ್ತದೆ ಎಂದೂ ಸಹ ಹೇಳಲಾಗುತ್ತದೆ. ಕಾಗೆಯ ಬಗೆಗಿನ ನಂಬಿಕೆಗಳ ಬಗ್ಗೆ ತಿಳಿಯುವ ಪ್ರಯತ್ನ ಮಾಡೋಣವೇ?

ಯಮನ ಕೃಪೆ ಕಾಗೆಯ ಮೇಲಿರುವುದರಿಂದ, ನಮ್ಮನ್ನಗಲಿದ ನನ್ನ ಪೂರ್ವಜರು ಕಾಗೆಯ ಮೂಲಕ ನಮ್ಮ ಸಂಪರ್ಕಿಸಿ, ನಮಗಾಗುವ ಒಳಿತು ಕೆಡುಕುಗಳನ್ನು ಮೊದಲೇ ತಿಳಿಸುತ್ತಿದ್ದರು ಎಂಬುದು ಒಂದು ನಂಬಿಕೆ ಕೆಲವರಲ್ಲಿದೆ. ಕಾಗೆಗಳ ಹಿಂಡು ನಮ್ಮ ಮನೆಯ ಆಸುಪಾಸಿನಲ್ಲಿ ಜಗಳವಾಡುತ್ತಿದ್ದರೆ ಆ ಮನೆಯ ಯಜಮಾನನಿಗೆ ಆಪತ್ತು ಕಟ್ಟಿಟ್ಟ ಬುತ್ತಿ. ಕಾಗೆಯ ಉತ್ತರ ದಿಕ್ಕಿನಲ್ಲಿ ಕುಳಿತು ಕೂಗುತ್ತಿದ್ದರೆ ಒಳ್ಳೆಯ ದಿನ ಬರಲಿದೆ ಎಂದು ನಂಬಬಹುದಂತೆ. ಅಲ್ಲದೇ ಕಾಗೆ ತನ್ನ ಕೊಕ್ಕಿನಲ್ಲಿ ಆಹಾರದೊಂದಿಗೆ ಹಾರುವುದನ್ನು ನೋಡುವುದು ಕೂಡ ಶುಭ ಸಂಕೇತವಾಗಿದೆ. ಮನೆಯ ಮೇಲೆ ದಕ್ಷಿಣ ದಿಕ್ಕಿಗೆ ಮುಖಮಾಡಿ ಕೂಗುತ್ತಿದ್ದರೆ ಅದು ಶುಭ ಸೂಚಕವಲ್ಲ, ಅಶುಭ. ವ್ಯಕ್ತಿಯ ತಲೆಯ ಮೇಲೆ ಕಾಗೆ ಕುಳಿತರೆ ಸಾವು, ಪಾದ ಮುಟ್ಟಿದರೆ ಮಂಗಳಕರ. ಒಂದೊಮ್ಮೆ ಕಾಗೆಯು ಹಾರುವಾಗ ವ್ಯಕ್ತಿಯ ಮೇಲೆ ಮಲವಿಸರ್ಜನೆ ಮಾಡಿದರೆ ಅದು ಕೆಡುಕನ್ನು ಉಂಟು ಮಾಡುತ್ತದೆ ಎನ್ನಲಾಗುತ್ತದಲ್ಲದೆ, ತೀವ್ರ ಅನಾರೋಗ್ಯ, ದೊಡ್ಡ ಆರ್ಥಿಕ ನಷ್ಟವನ್ನು ಎದುರಿಸಬೇಕಾಗುತ್ತದೆ. ಕಾಗೆ ಮನೆಯ ಬಳಿ ಬಂದು ಕೂಗುತ್ತಿದ್ದರೆ, ನೀವು ಅತಿಥಿಗಳನ್ನು ಬರಮಾಡಿಕೊಳ್ಳುವ ತಯಾರಿ ಮಾಡಿಕೊಳ್ಳಬಹುದು. ಹೀಗೆ ಕಾಗೆಯು ನಮಗೆ ಮುಂಬರುವ ದಿನಗಳ ಒಳಿತು-ಕೆಡುಕನ್ನು ತಿಳಿಸುತ್ತವೆ ಎಂಬುದು ನಮ್ಮ ಪೂರ್ವಜರ ನಂಬಿಕೆಗಳು. ಏನೇ ಆದರೂ ಕಾಗೆಯನ್ನು ನಾವು ಸಾಕಲು ಹಿಂದೇಟು ಹಾಕುತ್ತೇವೆ. ಇತ್ತೀಚಿನ ದಿನಗಳಲ್ಲಿ ಕಾಗೆಯ ಸಂತತಿ ಅಳಿವಿನಂಚಿನಲ್ಲಿದೆ ಎನ್ನಬಹುದು.

Related Posts

  • All Post
  • ಇತರೆ
  • ಎಲೆ
  • ಕಾಯಿ
  • ಪಕ್ಷಿ
  • ಪ್ರಾಣಿ
  • ಬೇರು
  • ಸಸ್ಯ
  • ಹಣ್ಣು
  • ಹಾವು
  • ಹೂವು
ಬಹುಪಯೋಗಿ ಈ ಬಾಳೆ ಹೂವು!

16/07/2025/

ನಾವೆಲ್ಲ ದಿನನಿತ್ಯದ ಜೀವನದಲ್ಲಿ ಬಾಳೆಹಣ್ಣು, ಬಾಳೆ ಎಲೆಗಳನ್ನು ಉಪಯೋಗಿಸಿಯೇ ಇರುತ್ತೇವೆ. ಈ ಲೇಖನದಲ್ಲಿ ಬಾಳೆ ಹೂವಿನ ಬಗ್ಗೆ ವಿವರವಾಗಿ ತಿಳಿಯೋಣ. ಬಾಳೆ...

Leave a Reply

Your email address will not be published. Required fields are marked *

Follow Us

Best Camping Shoes

Popular Posts

Trending Posts

Categories

Tags

Edit Template

Copyright © 2025 Kadumanjari