ತುಪ್ಪದ ದೀಪ ಹಚ್ಚಿದರೆ ದಾಂಪತ್ಯ ಸುಖ ಪ್ರಾಪ್ತಿ?

ಈ ಸಲ ನಮಗೆಲ್ಲ ಪರಿಚಿತವಾದ, ಪವಿತ್ರವಾದ ಹಾಗೂ ಅನೇಕ ಔಷಧಿಯುಕ್ತ ಗುಣಗಳುಳ್ಳ ತುಳಸಿ ಗಿಡದ ಬಗ್ಗೆ ತಿಳಿಯೋಣ. ನಿಮಗೆಲ್ಲ ತುಳಸಿಯ ಮಹತ್ವ ಗೊತ್ತೇ ಇರುತ್ತದೆ. ಏಕೆಂದರೆ ಎಲ್ಲರ ಮನೆಯಂಗಳದಲ್ಲಿ ತುಳಸಿ ಕಟ್ಟೆ ಇದ್ದೇ ಇರುತ್ತದೆ. ಭಾರತದಲ್ಲಿ ಅದರಲ್ಲೂ ಹಿಂದೂಗಳಿಗೆ ತುಳಸಿ ತುಂಬಾ ಪವಿತ್ರ. ತುಳಸಿ ಗಿಡದಲ್ಲಿ ದೇವಾನು ದೇವತೆಗಳು ನೆಲೆಸಿರುತ್ತಾರೆ ಎಂದು ಪುರಾಣಗಳಲ್ಲಿ ಕೂಡ ಉಲ್ಲೇಕವಿದೆ. ಈ ಕಾರಣಕ್ಕಾಗಿ ತುಳಸಿಯನ್ನು ಪವಿತ್ರ ತುಳಸಿ ಅಥವಾ ಹೋಲಿ ಬ್ಯಾಸಿಲ್ ಎಂದೇ ಕರೆಯುತ್ತೇವೆ. ವೈಜ್ಞಾನಿಕವಾಗಿ ಒಸಿಮಮ್ ಟೆನುಫ್ಲೋರಮ್ ಎಂದು ಕರೆಯಲ್ಪಡುವ ತುಳಸಿ ಲ್ಯಾಮಿಯಾಸೀ ಕುಟುಂಬಕ್ಕೆ ಸೇರಿದ್ದು. ತುಳಸಿಯನ್ನು ಹೆಚ್ಚಾಗಿ ಭಾರತದಲ್ಲೇ ಬೆಳೆಯುತ್ತಾರಾದರೂ ಇರಾನ್, ಥೈಲ್ಯಾಂಡ್, ವಿಯೆಟ್ನಾಂ ಕಾಂಬೋಡಿಯ ಹಾಗೂ ಲಾವೋಸ್‌ಗಳಲ್ಲೂ ತುಳಸಿಯನ್ನು ಉಪಯೋಗಿಸುತ್ತಾರೆ. ಇದನ್ನು ಭಾರತ, ಇರಾನ್ ಹಾಗೂ ಏಷಿಯಾದ ಉಷ್ಣವಲಯಗಳಲ್ಲಿ ಸುಮಾರು ಐದು ಸಾವಿರಕ್ಕೂ ಹೆಚ್ಚು ವರ್ಷಗಳಿಂದ ಬೆಳೆಯುತ್ತಿದ್ದರು ಎಂದು ಏಳಲಾಗುತ್ತದೆ.

ಇನ್ನು ತುಳಸಿಯಲ್ಲಿ ಅನೇಕ ವಿಧಗಳಿವೆ. ಧರ್ಮಗ್ರಂಥಗಳ ಪ್ರಕಾರ ರಾಮ ತುಳಸಿ, ಕೃಷ್ಣತುಳಸಿ, ಜ್ಞಾನ ತುಳಸಿ, ಲಕ್ಷ್ಮೀತುಳಸಿ, ಭೂಮಿ ತುಳಸಿ, ರಕ್ತತುಳಸಿ, ನೀಲ ತುಳಸಿ, ಬಿಳಿ ತುಳಸಿ, ವನ ತುಳಸಿ ಹೀಗೆ ಅನೇಕ ವಿಧಗಳಿವೆ. ಆದರೆ ನಮ್ಮಲ್ಲಿ ಕೃಷ್ಣ ತುಳಸಿ ಹಾಗೂ ರಾಮ ತುಳಸಿಯನ್ನು ಪೂಜಿಸಲಾಗುತ್ತದೆ.

ತುಳಸಿ ಗಿಡ ಸುಮಾರು ಮೂವತ್ತರಿಂದ ನೂರಾಮೂವತ್ತು ಸೆಂಟಿಮೀಟರ್‌ನಷ್ಟು ಎತ್ತರ ಬೆಳೆಯಬಲ್ಲದು. ಎಲೆಗಳು ಹಸಿರಾಗಿದ್ದು, ರೇಷ್ಮೆಯಂತಹ ನುಣುಪನ್ನು ಹೊಂದಿರುತ್ತದೆ. ಹೂಗಳು ಬಹಳ ಸಣ್ಣದಾಗಿದ್ದು, ಬಿಳಿ ಬಣ್ಣ ಹೊಂದಿರುತ್ತವೆ. ಪ್ರತಿ ಕಾಂಡದ ಕೊನೆಯಲ್ಲಿ ಹೂವುಗಳು ಬಿಡುತ್ತವೆ. ಹೂವುಗಳು ಒಣಗಿ ಕಪ್ಪು ಬೀಜಗಳನ್ನೊಳಗೊಂಡ ಬೀಜ ಕೋಶಗಳನ್ನು ಹೊಂದಿರುತ್ತವೆ. ತುಳಸಿಯು ಸೂಕ್ಷ್ಮವಾಗಿರುವ ಕಾರಣ ತಂಪಾದ ವಾತಾವರಣಕ್ಕಿಂತ ಉಷ್ಣ ವಲಯಗಳಲ್ಲಿ ಉತ್ತಮವಾಗಿ ಬೆಳೆಯುತ್ತದೆ. ಹಿಮಪ್ರದೇಶಗಳಲ್ಲಿ ವರ್ಷಕ್ಕೊಮ್ಮೆ ಬೆಳೆಯುತ್ತದೆ. ಸೂರ್ಯನ ಬೆಳಕು ಬೀಳುವ ಜಾಗದಲ್ಲಿ ಇದರ ಬೆಳವಣಿಗೆ ಚೆನ್ನಾಗಿರುತ್ತದೆ. ಮನೆಯ ಹೊರಭಾಗ, ತೋಟ ಮತ್ತು ಉದ್ಯಾನವನಗಳಲಿ ಹೆಚ್ಚಾಗಿ ಬೆಳೆಯುತ್ತೇವೆ. ಅಲ್ಲದೆ ಮನೆಯ ಒಳಭಾಗದಲ್ಲಿ ಕುಂಡದಲ್ಲಿ ಬೆಳೆಸಬಹುದು. ಎಲೆಗಳು ನೀರಿನ ಕೊರತೆಯಿಂದ ಬಾಡಿಹೋಗಿದ್ದರೆ, ಇದಕ್ಕೆ ಸಾಕಷ್ಟು ನೀರು ಹಾಯಿಸಿ ಸೂರ್ಯನ ಬೆಳಕಿನಲ್ಲಿರಿಸಿದರೆ ಮತ್ತೆ ಚೇತರಿಸಿಕೊಳ್ಳುತ್ತದೆ. ಒಂದೊಮ್ಮೆ ಕಾಂಡದಿಂದ ಹೂ ಬಿಡಲು ಆರಂಭಗೊಂಡಾಗ, ಕಾಂಡವು ದಟ್ಟವಾಗುತ್ತದೆ.

ತುಳಸಿಯೊಂದಿಗೆ ತಳಕು ಹಾಕಿಕೊಂಡಿರುವ ಹಲವಾರು ಆಚರಣೆಗಳು ಹಾಗು ನಂಬಿಕೆಗಳಿವೆ. ಇಟಲಿಯಲ್ಲಿ ಇದು ಪ್ರೀತಿಯ ಸಂಕೇತವಾಗಿದೆ. ಆದರೆ ತುಳಸಿಯು ಪ್ರಾಚೀನ ಗ್ರೀಸ್‌ನಲ್ಲಿ ದ್ವೇಷವನ್ನು ಪ್ರತಿನಿಧಿಸುತ್ತದೆ. ಆಫ್ರಿಕನ್ ಪುರಾಣವು, ತುಳಸಿಯು ಚೇಳುಗಳಿಂದ ರಕ್ಷಣೆ ನೀಡುತ್ತದೆಂದು ಹೇಳುತ್ತದೆ. ಗ್ರೀಕ್ ಆರ್ತೋಡಾಕ್ಸ್ ಚರ್ಚ್‌ನಲ್ಲಿ ಪವಿತ್ರ ತೀರ್ಥವನ್ನು ಸಿದ್ಧಪಡಿಸಲು ಬಳಸಲಾಗುತ್ತದೆ. ಅಲ್ಲದೇ ತುಳಸಿಯ ಕುಂಡಗಳನ್ನು ಸಾಮಾನ್ಯವಾಗಿ ಚರ್ಚಿನ ನಿವೇದನಾಪೀಠದ ಕೆಳಗೆ ಇರಿಸಲಾಗುತ್ತದೆ. ಯುರೋಪಿನಲ್ಲಿ, ತುಳಸಿಯನ್ನು ಸತ್ತವರ ಕೈಯಲ್ಲಿರಿಸುವುದರಿಂದ ಮುಂದಿನ ಲೋಕಕ್ಕೆ ಅವರ ಪ್ರಯಾಣ ಸುರಕ್ಷಿತ ಎಂದು ಭಾವಿಸುತ್ತಾರೆ. ಭಾರತದಲ್ಲಿ, ಮರಣಶಯ್ಯೆಯಲ್ಲಿರುವವರ ಬಾಯಿಯಲ್ಲಿರಿಸಿದರೆ ಅವರು ದೇವರ ಪಾದವನ್ನು ಸೇರುವರೆಂದು ಹೇಳಲಾಗುತ್ತದೆ. ಪುರಾತನ ಈಜಿಪ್ತಿಯನ್ನರು ಹಾಗು ಪುರಾತನ ಗ್ರೀಕರು, ಇದು ಸಾಯಲಿರುವ ಮನುಷ್ಯನಿಗೆ ಸ್ವರ್ಗದ ಬಾಗಿಲನ್ನು ತೋರುತ್ತದೆಂದು ನಂಬುತ್ತಾರೆ. ಮನೆಯಲ್ಲಿ ತುಳಸಿ ಗಿಡ ನೆಟ್ಟು ಪ್ರತಿದಿನವೂ ನೀರು ಹಾಕುವುದರಿಂದ ಮನೆಯಲ್ಲಿ ಕಂಡುಬರುವ ಎಲ್ಲಾ ವಾಸ್ತು ದೋಷಗಳಿಗೂ ಪರಿಣಾಮಕಾರಿ. ಆಗ್ನೇಯ ಹಾಗೂ ವಾಯುವ್ಯ ದಿಕ್ಕಿನಲ್ಲಿ ತುಳಸಿ ಗಿಡವನ್ನು ಇಡುವುದು ಅತ್ಯಂತ ಅಶುಭ. ಮಕ್ಕಳು ತಪ್ಪು ಹಾದಿ ತುಳಿಯುತ್ತಿದ್ದರೆ ಅವರಿಗೆ ಪ್ರತಿದಿನ ಮೂರು ತುಳಸಿ ಎಲೆಗಳನ್ನು ಯಾವುದಾದರೂ ರೂಪದಲ್ಲಿ ಕೊಡುವುದು ಒಳ್ಳೆಯದು. ಪುರಾಣದ ಪ್ರಕಾರ ತುಳಸಿಯನ್ನು ಪ್ರತಿದಿನ ಪೂಜಿಸಿದರೆ ಹಾಗೂ ಪ್ರತಿ ದಿನ ಸಂಜೆ ತುಳಸಿಯ ಗಿಡದ ಬಳಿ ದೀಪವನ್ನು ಇಟ್ಟರೆ ಮಹಾಲಕ್ಷ್ಮೀಯು ಸದಾ ಮನೆಯಲ್ಲಿ ನೆಲೆಸುತ್ತಾಳೆ ಎನ್ನಲಾಗುತ್ತದೆ.

ಇಷ್ಟೇ ಅಲ್ಲದೆ ಹಲವಾರು ಅದ್ಭುತ ಔಷಧೀಯ ಗುಣಗಳನ್ನು ತುಳಸಿಯಲ್ಲಿ ಕಾಣಬಹುದು. ತುಳಸಿ ರಸವನ್ನು ಜೇನಿನೊಂದಿಗೆ ನಿಯಮಿತವಾಗಿ ೬ ತಿಂಗಳು ತೆಗೆದುಕೊಂಡಲ್ಲಿ ನೋವಿನ ಬಾಧೆ ಕಡಿಮೆಯಾಗುತ್ತದೆ. ತುಳಸಿ ರಸವನ್ನು ನೀರಿನೊಂದಿಗೆ ಬೆರೆಸಿ ಸೇವಿಸಿದರೆ ತ್ವಚೆಯ ಸಾಂದ್ರತೆ ಹೆಚ್ಚಿ ಚರ್ಮ ಹೊಳಪನ್ನು ಪಡೆಯುತ್ತದೆ. ತುಳಸಿ ಸೇವನೆಯಿಂದ ಜ್ಞಾಪಕ ಶಕ್ತಿ ಹೆಚ್ಚಾಗಿ ಬುದ್ಧಿವಂತಿಕೆಯೂ ಚುರುಕುಗೊಳ್ಳುತ್ತದೆ. ಇದನ್ನು ವಯಸ್ಸಾದವರು ಸೇವಿಸಿದರೆ ಸುಸ್ತು ಕಡಿಮೆಯಾಗುತ್ತದೆ. ಪ್ರತಿ ರಾತ್ರಿ ತುಳಸಿಯ ಕೆಲವು ಎಲೆಗಳನ್ನು ಹಾಲಿನಲ್ಲಿ ಕುದಿಸಿ ನಂತರ ಈ ಹಾಲನ್ನು ಕುಡಿಯಿರಿ. ಇದು ನರಮಂಡಲವನ್ನು ಸಡಿಲಗೊಳಿಸುತ್ತದೆ. ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ. ಕೃಷ್ಣ ತುಳಸಿ ಗಿಡದ ಎಲೆಗಳನ್ನು ಚೆನ್ನಾಗಿ ತೊಳೆದು ಕಷಾಯ ತಯಾರಿಸಿ ಕುಡಿಯುವುದರಿಂದ ವಿಷಮ ಜ್ವರ ಕಡಿಮೆಯಾಗುತ್ತದೆ. ಕಫ ನಿವಾರಿಸುವ ಗುಣಗಳು ತುಳಸಿಯಲ್ಲಿವೆ. ತುಳಸಿ ರಸ, ಬೆಳ್ಳುಳ್ಳಿ ರಸ, ಜೇನುತುಪ್ಪವನ್ನು ಸಮಭಾಗ ತೆಗೆದುಕೊಂಡು ಮಿಶ್ರಣ ಮಾಡಿ ತಯಾರಿಸಿ, ಮೂರು ದಿನಗಳಿಗೊಮ್ಮೆ ೧ ಚಮಚ ಸೇವಿಸಿದರೆ ಹೊಟ್ಟೆ ನೋವು ಗುಣವಾಗುತ್ತದೆ. ತುಳಸಿ ಎಲೆಯನ್ನು ಬಾಯಲ್ಲಿ ಹಾಕಿ ಅಗಿಯುವುದರಿಂದ ಬಾಯಿಯ ದುರ್ಗಂಧ ಕಡಿಮೆಯಾಗುತ್ತದೆ. ತುಳಸಿ ಎಲೆಗಳಲ್ಲಿ ಕ್ಯಾಂಪೇನ್, ವಿಟಮಿನ್ ಸಿ, ಸಿನೋಲ್ ಮತ್ತು ಯುಜೆನಾಲ್ ಇದ್ದು, ಇದು ಶ್ವಾಸಕೋಶದ ಸೋಂಕನ್ನು ತಡೆಗಟ್ಟುವುದು.

ಇದಲ್ಲದೆ ತುಳಸಿಯ ಬಗ್ಗೆ ನಮ್ಮಲ್ಲಿ ಇನ್ನೂ ಕೆಲವು ನಂಬಿಕೆಗಳು ಚಾಲ್ತಿಯಲ್ಲಿವೆ. ತುಳಸಿ ಗಿಡಕ್ಕೆ ಪೂಜೆ ಮಾಡಿ, ತುಪ್ಪದ ದ್ವೀಪವನ್ನು ಹಚ್ಚಿಡಬೇಕು. ಇದರಿಂದ ದಾಂಪತ್ಯ ಸುಖವು ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆ ಹಲವರಲ್ಲಿದೆ. ಆದರೆ ತುಳಸಿ ಗಿಡಕ್ಕೆ ಅವಮಾನ ಮಾಡುವುದು, ಅನುಪಯುಕ್ತ ಕೆಲಸಗಳಿಗೆ ತುಳಸಿ ಬಳಸುವುದರಿಂದ ಸಾಕಷ್ಟು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಹಿಂದೂ ಪುರಾಣ ಕಥೆಗಳ ಪ್ರಕಾರ, ವಿಷ್ಣುವು ತುಳಸಿಯ ಪತಿ. ಆದ್ದರಿಂದ ವಿಷ್ಣುವಿನ ಅವತಾರಗಳಾದ ಶ್ರೀ ಕೃಷ್ಣ, ರಾಮ, ವಿಷ್ಣುವಿಗೆ ಮಾತ್ರ ತುಳಸಿ ಎಲೆ ಪ್ರಿಯ ಎನ್ನಲಾಗುತ್ತದೆ. ಸೂರ್ಯಗ್ರಹಣ, ಚಂದ್ರಗ್ರಹಣ, ಭಾನುವಾರ ಹಾಗೂ ಏಕಾದಶಿ ಸಮಯದಲ್ಲಿ ತುಳಸಿ ಎಲೆಯನ್ನು ಕೀಳುವುದು, ಗಿಡವನ್ನು ಕತ್ತರಿಸುವುದು ಅಥವಾ ಬಿಸಾಡುವ ಕೆಲಸವನ್ನು ಎಂದಿಗೂ ಮಾಡಬಾರದು ಎಂದು ಹೇಳಲಾಗುತ್ತದೆ. ಇದರಿಂದ ಶಾಪ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆ ಇದೆ. ಇಷ್ಟೆಲ್ಲ ಉಪಯೋಗವಿರುವ ತುಳಸಿ ಗಿಡವನ್ನು ನಮ್ಮೆಲ್ಲರ ಮನೆಯಲ್ಲಿ ಹೆಚ್ಚೆಚ್ಚು ಬೆಳೆಸಬೇಕಲ್ಲವೇ?

Related Posts

  • All Post
  • ಇತರೆ
  • ಎಲೆ
  • ಕಾಯಿ
  • ಪಕ್ಷಿ
  • ಪ್ರಾಣಿ
  • ಬೇರು
  • ಸಸ್ಯ
  • ಹಣ್ಣು
  • ಹಾವು
  • ಹೂವು
ಬಹುಪಯೋಗಿ ಈ ಬಾಳೆ ಹೂವು!

16/07/2025/

ನಾವೆಲ್ಲ ದಿನನಿತ್ಯದ ಜೀವನದಲ್ಲಿ ಬಾಳೆಹಣ್ಣು, ಬಾಳೆ ಎಲೆಗಳನ್ನು ಉಪಯೋಗಿಸಿಯೇ ಇರುತ್ತೇವೆ. ಈ ಲೇಖನದಲ್ಲಿ ಬಾಳೆ ಹೂವಿನ ಬಗ್ಗೆ ವಿವರವಾಗಿ ತಿಳಿಯೋಣ. ಬಾಳೆ...

Leave a Reply

Your email address will not be published. Required fields are marked *

Follow Us

Best Camping Shoes

Popular Posts

Trending Posts

Categories

Tags

Edit Template

Copyright © 2025 Kadumanjari