ಕಮಲದ ಮೊಗದೊಳೆ ಕಮಲದ ಕಣ್ಣೋಳೆ
ಕಮಲವ ಕೈಯಲ್ಲಿ ಹಿಡಿದೊಳೆ..
ಕಮಲದ ಮೊಗದೊಳೆ ಕಮಲದ ಕಣ್ಣೋಳೆ
ಕಮಲವ ಕೈಯಲ್ಲಿ ಹಿಡಿದೊಳೆ..
ಕಮಲನಾಭನ ಹೃದಯ ಕಮಲದಲಿ ನಿಂತೋಳೆ
ಕಮಲಿ ನೀ ಕರಮುಗಿವೆ ಬಾ ಮಾ..
ಪೂಜೆಯ ಸ್ವೀಕರಿಸೆ ದಯಮಾಡಿಸಮ್ಮ…
ಕಮಲದ ಮೊಗದೊಳೆ ಕಮಲದ ಕಣ್ಣೋಳೆ
ಕಮಲವ ಕೈಯಲ್ಲಿ ಹಿಡಿದೊಳೆ…
ಈ ಹಾಡನ್ನು ಎಲ್ಲರೂ ಕೇಳೇ ಇರುತ್ತೀರಿ. ೧೯೮೪ಲ್ಲಿ ಬಿಡುಗಡೆಯಾದ ಹೊಸ ಇತಿಹಾಸ ಚಿತ್ರದ ಈ ಹಾಡು ಅಂದು ಹೊಸ ಇತಿಹಾಸ ಸೃಷ್ಟಿಸಿದ್ದು ಸುಳ್ಳಲ್ಲ. ಚಿ| ಉದಯ್ ಶಂಕರ್ ಸಾಹಿತಕ್ಕೆ ಸುಮಧುರ ಕಂಠ ನೀಡಿದವರು ಎಸ್. ಜಾನಕಿ. ಹಾಡು ಕೇಳುತ್ತಿದ್ದರೇನೇ ಕಣ್ಣು ಮುಚ್ಚಿ ಕೈ ಮುಗಿಯಬೇಕೆಂಬ ಭಕ್ತಿ ಉಕ್ಕುತ್ತದೆ. ಈ ಹಾಡನ್ನು ಇಲ್ಲಿ ಪ್ರಸ್ತಾಪ ಏಕೆ ಪ್ರಸ್ತಾಪ ಮಾಡುತ್ತಿದ್ದೇನೆ ಅಂತೀರಾ? ನಿಮಗೆ ಗೊತ್ತಾಗಿದೆ ಅಲ್ವೆ? ಹೌದು. ಈ ಪೀಠಿಕೆಗೆ ಕಾರಣ ಕಮಲದ ಹೂವು.
ಕಮಲದ ಹೂವಿನ ವೈಶಿಷ್ಟ್ಯ!
ಹೌದು. ಕಮಲದ ಹೂವು ಅನೇಕ ದೇವರುಗಳ ಕೈಯಲ್ಲಿ ಹಿಡಿದಿರುವುದನ್ನು ನಾವು ನೋಡುತ್ತೇವೆ. ಕಮಲದ ಹೂವಿನ ವೈಶಿಷ್ಟ್ಯ ದೇವತೆಗಳ ಸ್ವಭಾವ, ಕಾಲ, ದೇಶಕ್ಕೆ ಅನುಗುಣವಾಗಿ ಇದು ಬದಲಾಗುತ್ತಿರುತ್ತದೆ. ಕಮಲದ ಹೂವಿಗೆ ಸುಮಾರು ಐದು ಸಾವಿರವ ವರ್ಷಗಳ ಇತಿಹಾಸವಿದೆ. ಬುದ್ಧನು ಹುಟ್ಟಿದಾಗ ಅದನ್ನು ಜಗತ್ತಿಗೆ ಸಾರಲು ಕಮಲದ ಹೂವೂ ಸಹ ಹುಟ್ಟಿತೆಂಬ ಪ್ರತೀತಿ ಇದೆ.
ಕಮಲದ ಹೂವಿನ ಮೂಲನೆಲೆ ಭಾರತವೆಂದೇ ಗುರ್ತಿಸಲಾಗಿದೆ. ಇಡೀ ಸೃಷ್ಠಿಯೇ ಈ ಹೂವಿನಲ್ಲಿ ಇದೆ ಎಂದರೂ ತಪ್ಪಾಗಲಾರದು. ಇದು ಸ್ತ್ರೀಯ ಜನನೇಂದ್ರಿಯದ ಸಂಕೇತ. ಜೊತೆಗೆ ದೇವತೆ, ದೈವತ್ವ ಮತ್ತು ಆಧ್ಯಾತ್ಮಿಕ ಶಕ್ತಿಯ ಪ್ರತಿನಿಧಿ. ಕ್ರಿಸ್ತಪೂರ್ವ ೮೦೦ರ ಬ್ರಾಹ್ಮಣಗಳಲ್ಲಿ ಕಮಲದ ಎಲೆಯನ್ನು ಗರ್ಭವೆಂದು ಹೇಳಲಾಗಿದೆ. ಕ್ರಿ.ಪೂ ೧ನೇ ಶತಮಾನದಿಂದ ಹಿಡಿದು ಇಂದಿನವರೆವಿಗೂ ದೇವಿ ಪದ್ಮಳ ಕೆತ್ತನೆಗಳಲ್ಲಿ ಅವಳು ಕಮಲದ ಹೂ ಮೇಲೆ ನಿಂತಿದ್ದಾಳೆ, ಅವಳ ಅಕ್ಕ-ಪಕ್ಕ ಎರಡು ಆನೆಗಳಿದ್ದು, ಅವು ಸೊಂಡಿಲಿನಿಂದ ನೀರನ್ನು ಎರಚುತ್ತಿರುತ್ತವೆ. ಕ್ರಿ.ಪೂ.೩ನೇ ಶತಮಾನದಲ್ಲಿ ಸಿಂಧೂಕಣಿವೆಯ ಮೆಹೆಂಜೋದಾರೋವಿನಲ್ಲಿ ಸಿಕ್ಕಿರುವ ಕಲಾಪ್ರತಿಮೆಯಲ್ಲಿ ಕಮಲದ ಹೂ ಕಂಡು ಬಂದಿದೆ. ರೈತರಿಗೆ ಲಕ್ಷ್ಮೀ ತುಂಬಾ ಶ್ರೇಷ್ಠಳಾದ ದೇವತೆ. ಫಲವಂತಿಕೆಯ ಶಕ್ತಿ ಇರುವಂತಹವಳು. ವಿಷ್ಣುವಿನ ಹೆಂಡತಿಯಾದ ಲಕ್ಷ್ಮಿಯನ್ನು ಶ್ರೀ, ಸಿರಿ, ಪದ್ಮ, ಭೂದೇವಿ ಎಂದು ಕರೆಯಲಾಗಿದೆ.

ಚೀನಾ ದೇಶದಲ್ಲಿ ಕಮಲದ ಹೂವಿನ ಪರಿಕಲ್ಪನೆ ವಿಶಿಷ್ಟವಾದುದಾಗಿದೆ. ಅವರು ನಾಲ್ಕು ಋತುಗಳನ್ನು ಹೂಗಳಲ್ಲಿ ಗುರ್ತಿಸುತ್ತಾರೆ. ಅವುಗಳಲ್ಲಿ ಕಮಲದ ಹೂ ಬೇಸಿಗೆಕಾಲದ ಹೂವಾಗಿದೆ. ಇದು ಪರಿಶುದ್ದತೆಯ, ಫಲವಂತಿಕೆ, ಸೃಷ್ಟಿಶಕ್ತಿಯನ್ನೂ ಸಂಕೇತಿಸುತ್ತದೆ.
ಕಮಲದ ಹೂವಿಗಿದೆ ವಿವಿಧ ಹೆಸರುಗಳು!
ಕಮಲದ ಹೂವಿಗೆ ಅನೇಕ ಹೆಸರುಗಳಿವೆ. ಆವೋದ, ತಾವರೆ, ನಳಿನ, ಸರೋಜ, ಕುಮುದ, ಪಂಕಜ, ಪದ್ಮಜ ಹೀಗೆ ಸಾಗುತ್ತದೆ ಕಮಲದ ಹೆಸರಿನ ಪಟ್ಟಿ. ಅಲ್ಲದೆ ಕಮಲದ ಹೂ ಕೆಸರಿನಲ್ಲಿ ಹುಟ್ಟಿದರೂ ತನ್ನದೇ ಆದ ವಿಶಿಷ್ಟತೆಗಳಿಂದ ವಿಶ್ವದಾದ್ಯಂತ ಜನಮನ್ನಣೆ ಗಳಿಸಿದೆ. ಇದು ವ್ಯಕ್ತಿಯ ಹುಟ್ಟಿನ ಹಿನ್ನೆಲೆಗಿಂತ ಅವನ ವ್ಯಕ್ತಿತ್ವ, ಸಂಸ್ಕಾರ, ಸುಸಂಸ್ಕೃತ ನಡವಳಿಕೆ ಅವನನ್ನು ದೈವತ್ವಕ್ಕೂ ಏರಿಸಿ ಮಹಾಪುರುಷನನ್ನಾಗಿ ಮಾಡಬಹುದು ಎಂಬುದನ್ನು ತಿಳಿಸುತ್ತದೆ.
ಇದರ ವೈಜ್ಞಾನಿಕ ಹೆಸರು ನೀಲಂಬೊ ನೂಸಿಫೆರಾ. ಇದು ನೀಲಂಬೊನೇಸಿಯಿ ಕುಟುಂಬಕ್ಕೆ ಸೇರಿದ ಜಲವಾಸಿ ಸಸ್ಯ. ಈ ಸಸ್ಯವು ಒಂದು ಜಲವಾಸಿ ಬಹುವಾರ್ಷಿಕ ಸಸ್ಯವಾಗಿದೆ. ತಾವರೆ ಇದರ ಪರ್ಯಾಯ ನಾಮ. ಬಹಳ ಸುಂದರವಾದ ವಿವಿಧ ಬಣ್ಣಗಳ ಹೂ ಬಿಡುವ ಈ ಸಸ್ಯ ಭಾರತೀಯರಿಗೆ ಪವಿತ್ರವೆನಿಸಿದೆ. ಭಾರತದ ಎಲ್ಲ ಪ್ರದೇಶಗಳಲ್ಲೂ ಕೆರೆ, ಕೊಳ ಮುಂತಾದುವುಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತದೆ. ಉದ್ಯಾನಗಳ ಕೃತಕ ಸರೋವರಗಳಲ್ಲಿ ಅಲಂಕಾರಕ್ಕಾಗಿ ಬೆಳೆಸುತ್ತಾರೆ.
ಅನಂತನ ವೃತ ಅಥವಾ ಅನಂತ ಚತುರ್ದಶಿ ಹಬ್ಬವನ್ನು ಭಾದ್ರಪದ ಮಾಸದ ಹದಿನಾಲ್ಕನೇ ದಿನ ಅಂದರೆ ಚತುರ್ದಶಿಯಂದು ಆಚರಿಲಾಗುತ್ತದೆ. ಅನಂತ ಚತುರ್ದಶಿ ಎಂದರೆ ಕ್ಷೀರಸಾಗರದಲ್ಲಿ ಏಳು ಹೆಡೆಗಳ ಆದಿಶೇಷನ ಮೇಲೆ ಮಲಗಿರುವ ವಿಷ್ಣುವನ್ನು ಆರಾಧಿಸುವ ಹಬ್ಬ. ಇದಕ್ಕೂ ಕಮಲಕ್ಕೂ ಏನು ಸಂಬಂಧ ಅಂತೀರಾ? ಹೆಸರಲ್ಲೇ ಇದೆ, ಅನಂತ ಪದ್ಮನಾಭ. ಅನಂತ ಅಂದರೆ ಅನಿಯಮಿತ ಎಂದರ್ಥ. ಪದ್ಮನಾಭ ಎಂದರೆ ನಾಭಿಯಲ್ಲಿ ಕಮಲವನ್ನು ಹೊಂದಿದವನು, ನಾರಾಯಣ ಅಥವಾ ವಿಷ್ಣು ಎಂಬ ಅರ್ಥ. ಇಷ್ಟಲ್ಲದೆ ಯೋಗ ನಿದ್ರೆಯಲ್ಲಿರುವ ವಿಷ್ಣುವಿನ ನಾಭಿಯಿಂದ ಹೊಮ್ಮಿದ ಪುಷ್ಪ ಕಮಲ. ಆದ್ದರಿಂದಲೇ ವಿಷ್ಮುವಿಗೆ ಪದ್ಮನಾಭ ಎಂಬ ಹೆಸರು ಬಂತೆಂದೂ ಹೇಳುತ್ತಾರೆ.



ಯಾವುದೇ ದೇವಸ್ಥಾನಕ್ಕೆ ಹೋಗಿ ನೋಡಿದರೂ, ಅಲ್ಲಿ ದೇವತೆಗಳನ್ನು ಕಮಲದ ಪೀಠದ ಮೇಲೆ ಕೂರಿಸಿರುವುದನ್ನು ನೋಡುತ್ತೇವೆ. ಭಗವಾನ್ ಬುದ್ಧ, ಗಣೇಶ, ಶಾರದೆ, ಲಕ್ಷ್ಮಿ ಅಲ್ಲದೆ ಶ್ರೀರಾಮಕೃಷ್ಣ ಪರಮಹಂಸ ಹೀಗೆ ಎಲ್ಲ ದೇವಾನುದೇವತೆಗಳು ಕಮಲದ ಮೇಲೆ ಕುಳಿತಿರುವುದನ್ನು ನಾವು ಕಾಣಬಹುದು. ಕಮಲವೇ ಏಕೆ? ಅದು ಒಂದು ಸಂಕೇತ, ಭಾವನೆ. ಕಮಲ ಕೆಸರಿನಲ್ಲೇ ಹುಟ್ಟಿದರೂ, ಕೆಸರಿನ ಒಳಗಡೆ ಇದ್ದರೂ ಆ ಕೆಸರನ್ನು ತನ್ನ ಮೈಗಂಟಿಸಿಕೊಂಡು ಬೆಳೆಯಲ್ಲ. ಇದು ಪರಿಶುದ್ಧತೆಯ ಸಂಕೇತ. ನಾವೂ ಕೂಡಾ ಹೀಗೆಯೇ ಪರಿಶುದ್ಧವಾಗಿ ಬದುಕಬೇಕು ಎಂಬುದು ಇದರ ಅರ್ಥ. ಸೂರ್ಯೋದಯದ ಜೊತೆಗೇ ಕಮಲದ ಹೂವು ಕೂಡಾ ಅರಳುತ್ತದೆ. ಅದರಂತೆ ನಮ್ಮೆಲ್ಲರ ಮನಸ್ಸೂ ಕೂಡಾ ಜ್ಞಾನೋದಯವಾಗಲಿ ಎಂಬುದೂ ಕೂಡಾ ಇದರ ಹಿಂದಿರುವ ಇನ್ನೊಂದು ಅರ್ಥ.
ಕೆಸರಿನಲ್ಲಿ ಹುಟ್ಟಿದರೂ ಕೆಸರು ಅಂಟಲ್ಲ!
ಕಮಲದ ಹೂವಿಗೆ ಹಲವಾರು ಹೆಸರುಗಳಿವೆ. ಅವೆಂದರೆ- ಆವೋದ, ತಾವರೆ, ನಳಿನ, ಸರೋಜ, ಕುಮುದ, ಪಂಕಜ, ಪದ್ಮಜ, ಅಂಬುಜ, ಸರೋಜ, ನೀರಜ, ಜಲಜ, ವಾರಿಜ ಹೀಗೆ ಅನೇಕ ಹೆಸರಿನಿಂದ ಕರೆಸಿಕೊಳ್ಳುವ ಕಮಲ ಶುದ್ಧತೆ, ನಿರ್ಲಿಪ್ತತೆಗಳ ಸಂಕೇತ. ಇನ್ನೂ ಆಶ್ಚರ್ಯಕರ ವಿಷಯವೆಂದರೆ ಕಮಲದ ಹೆಸರಿನಲ್ಲಿ ಅನೇಕ ಊರುಗಳನ್ನು ಕಾಣಬಹುದು. ಕಮಲಾಪುರ, ತಾವರೆಕೆರೆ, ಪದ್ಮನೂರು ಹೀಗೆ ಅನೇಕ ಊರುಗಳು ಕಮಲದ ಹೆಸರಿನಲ್ಲಿವೆ. ಇನ್ನು ನದಿಗಳ ಹೆಸರು ಕೂಡಾ ಕಮಲದಿಂದ ಕೂಡಿದೆ. ಬಿಹಾರ ಮತ್ತು ನೇಪಾಳದಲ್ಲಿ ಕಮಲಾ ಎಂಬ ನದಿ ಹರಿಯುತ್ತದೆ. ಇಷ್ಟೇ ಅಲ್ಲದೆ, ಭಾರತದಲ್ಲಿ ಬಿಜೆಪಿಯ ರಾಷ್ಟ್ರೀಯ ಲಾಂಛನ ಕೂಡಾ ಕಮಲವೇ. ಭಾರತ ಹಾಗೂ ವಿಯೆಟ್ನಾಮ್ ದೇಶದ ರಾಷ್ಟ್ರೀಯ ಹೂವೂ ಕೂಡಾ ಕಮಲವೆ.



ಕಮಲದ ಹೂವಿನ ಉಪಯೋಗಗಳು!
ಕಮಲದ ಹೂವು ಸೌಂದರ್ಯಕ್ಕೆ ಮಾತ್ರ ಮೀಸಲಾಗಿಲ್ಲ. ಇದನ್ನು ಆಹಾರವಾಗಿಯೂ ಬಳಸುತ್ತಾರೆ. ಕಮಲದ ಕಾಯಿಗಳನ್ನು ಹುರಿದು ಅಥವಾ ಹುರಿಯದೆಯೇ ತಿನ್ನುವುದು ಆರೋಗ್ಯಕ್ಕೆ ಉತ್ತಮ. ಎಳೆಯ ಎಲೆಗಳು, ಕಾಂಡ ಮತ್ತು ಹೂಗಳನ್ನೂ ತರಕಾರಿಯಾಗಿ ಬಳಸುತ್ತಾರೆ. ಕಮಲದ ಹೂ ಮಾತ್ರವಲ್ಲದೇ, ಅದರ ದಂಟು, ಎಲೆ, ಬೀಜ ಹೆಚ್ಚು ಉಪಯೋಗ ಪಡೆದುಕೊಂಡಿದೆ. ದಕ್ಷಿಣ ಏಷ್ಯಾ, ಆಸ್ರ್ಟೇಲಿಯಾ ದೇಶಗಳಲ್ಲೂ ಕಮಲವನ್ನು ಹೆಚ್ಚಾಗಿ ಬಳಸಲಾಗುತ್ತದೆ. ಜಪಾನ್ ದೇಶದಲ್ಲಿ ತಾವರೆಯ ಗಡ್ಡೆ ಹೆಚ್ಚು ಜನಪ್ರಿಯ. ಇದರಿಂದ ಆಹಾರವನ್ನು ತಯಾರಿಸಲಾಗುತ್ತದೆ. ಕೆಲವು ದೇಶಗಳಲ್ಲಿ ಕಮಲದ ಹೂವಿನಿಂದ ಚಹಾ ತಯಾರಿಸಿ ಕುಡಿಯುತ್ತಾರೆ. ಸೌಂದರ್ಯ ವರ್ಧಕದಲ್ಲೂ ಇದರ ಬಳಕೆಯುಂಟು. ಅಲ್ಲದೆ ಕಮಲದ ಹೂಗಳಿಂದ ಸುಗಂಧ ದ್ರವ್ಯವನ್ನು ತಯಾರಿಸಲಾಗುತ್ತದೆ. ಕಮಲದ ಹೂಗಳಲ್ಲಿ ಸಿಗುವ ಸಿಹಿಯಾದ ಜೇನು ಶಕ್ತಿವರ್ದಕ ಎಂದೇ ಪರಿಗಣಿಸಲಾಗಿದೆ. ಅಲ್ಲದೆ ಇದನ್ನು ಕೆಲವು ಕಣ್ಣಿನ ರೋಗ ನಿವಾರಣೆಯಲ್ಲಿ ಬಳಸುತ್ತಾರೆ. ಅಲ್ಲದೆ ಇದು ಅತಿಸಾರ, ಆಮಶಂಕೆಗಳಿಂದ ಬಳಲುವವರಿಗೆ ದಿವ್ಯೌಷಧ. ಅಲ್ಲದೆ ಕಮಲದಿಂದ ಒಂದು ಬಗೆಯ ಲೇಪವನ್ನು ತಯಾರಿಸಿ ಗಜಕರ್ಣ ಮತ್ತಿತರ ಚರ್ಮರೋಗಗಳ ಚಿಕಿತ್ಸೆಯಲ್ಲಿ ಬಳಸುತ್ತಾರೆ. ಹೂವಿನ ದಳಗಳನ್ನು ಅರೆದು ಮುಖಕ್ಕೆ ಲೇಪಿಸುವುದರಿಂದ ಮುಖದ ಸೌಂದರ್ಯ ಹೆಚ್ಚುತ್ತದೆ. ಅಲ್ಲದೆ ಕಮಲದ ಬೀಜದಿಂದ ರುಚಿಯಾದ ಪಾಯಸ ಮಾಡಿ ಸವಿಯಬಹುದು. ಅಲ್ಲದೆ ಲೋಟಸ್ ಸೀಡ್ಸ್ ಅಥವಾ ಮಖಾನಾ ಎಂದು ಕರೆಸಿಕೊಳ್ಳುವ ಕಮಲದ ಬೀಜವನ್ನು ಹಾಲಿನಲ್ಲಿ ಕುದಿಸಿ ಕುಡಿಯುವುದರಿಂದ ಕಾಲು, ಮಂಡಿ, ಸೊಂಟ, ಬೆನ್ನು, ಕುತ್ತಿಗೆಗಳಲ್ಲಿ ಉಂಟಾಗುವ ನೋವು ಹಾಗೂ ಸುಸ್ತು, ನಿಶಕ್ತಿ, ರಕ್ತ ಹೀನತೆ, ಬೊಜ್ಜು ಕೂಡಾ ಕಡಿಮೆಯಾಗುತ್ತದೆ.
ಹಾಂ. ಹೇಳಲು ಮರೆತೆ. ಕಮಲದ ಹೂವುಗಳು ಮುಖ್ಯವಾಗಿ ಬಿಳಿ, ಗುಲಾಬಿ, ಹಳದಿ, ಕೆಂಪು, ನೀಲಿ ಮತ್ತು ನೇರಳೆ ಸೇರಿದಂತೆ ಆರು ಬಣ್ಣಗಳಲ್ಲಿ ಲಭ್ಯವಿದೆ. ಕಮಲದ ಬಗ್ಗೆ ಹೇಳುತ್ತಾ ಹೋದರೆ ಇನ್ನೂ ಅನೇಕ ವಿಷಯಗಳಿವೆ. ಆದರೆ ಇಲ್ಲಿ ಇಷ್ಟು ಸಾಕು.


