ನಿಮಗೆಲ್ಲ ಕೃಷ್ಣ-ಕುಚೇಲರ ಗೆಳೆತನದ ಬಗ್ಗೆ ತಿಳಿದೇ ಇದೆ. ಒಮ್ಮೆ ಬಡ ಬ್ರಾಹ್ಮಣನಾದ ಕುಚೇಲ, ತನ್ನ ಆತ್ಮೀಯ ಗೆಳೆಯ, ದ್ವಾರಕಾ ಪಟ್ಟಣದ ರಾಜ ಕೃಷ್ಣನನ್ನು ಭೇಟಿಯಾಗಲು ಹೋಗುತ್ತಾನೆ. ದೂರದ ದ್ವಾರಕೆಗೆ ಬರಿಗಾಲಿನಲ್ಲೇ ಹೊರಟ ಕುಚೇಲನಿಗೆ ದಾರಿಯಲ್ಲಿ ಒಂದು ಪಕ್ಷಿ ಕೂಗುವುದು ಕೇಳಿಸುತ್ತದೆ. ದ್ವಾರಕೆಗೆ ಬಂದ ಕುಚೇಲನನ್ನು ಕೃಷ್ಣ ಆತ್ಮೀಯವಾಗಿ ಬರಮಾಡಿಕೊಂಡು ಪಾದಪೂಜೆ ಮಾಡಿ, ಕುಶಲೋಪರಿ ವಿಚಾರಿಸುತ್ತಾನೆ. ’ನನಗೇನು ತಂದಿರುವೆ ಗೆಳೆಯಾ?’ ಎಂದು ಕೃಷ್ಣ ಕೇಳಲಾಗಿ, ಕುಚೇಲ ತಾನು ತಂದಿರುವ ಅವಲಕ್ಕಿಯನ್ನು ಕೃಷ್ಣನಿಗೆ ಕೊಡುತ್ತಾನೆ. ಅವಲಕ್ಕಿಯನ್ನು ತಿಂದ ಕೃಷ್ಣ ಸಂತೃಪ್ತನಾಗುತ್ತಾನೆ. ಆದರೆ ಬಡ ಕುಚೇಲ ತನ್ನ ಪ್ರಾಣಸ್ನೇಹಿತನ ಹತ್ತಿರ ತನ್ನ ಪರಿಸ್ಥಿತಿಯ ಬಗ್ಗೆ ಏನನ್ನೂ ಹೇಳುವುದಿಲ್ಲ. ಅಲ್ಲದೆ ಯಾವುದೇ ಸಹಾಯವನ್ನೂ ಕೇಳದೆ ವಾಪಸ್ಸು ತನ್ನ ಊರಿಗೆ ಹೊರಡುತ್ತಾನೆ.
ಊರಿಗೆ ಬಂದು ನೋಡಿದರೆ ಅತ್ಯಾಶ್ಚರ್ಯ. ಆತನ ಮನೆ ಇದ್ದ ಜಾಗದಲ್ಲಿ ಅರಮನೆಯೊಂದು ಕಂಗೊಳಿಸುತ್ತಿತ್ತು. ಸಕಲ ವೈಭೋಗವೂ ಅಲ್ಲಿತ್ತು. ಇದೆಲ್ಲ ಕೃಷ್ಣನ ಕೃಪೆ ಎಂಬುದು ಕುಚೇಲನಿಗೆ ಅರ್ಥವಾಗಿತ್ತು. ಅಲ್ಲದೆ ಕೃಷ್ಣನನ್ನು ಭೇಟಿಯಾ ಗಲು ಹೋಗುವಾಗ ಎದುರಾದ ಪಕ್ಷಯಿಂದ ಬಂದ ಅದೃಷ್ಟ ಎಂದು ಕೂಡ ಕೆಲವು ಕಥೆಗಳು ಹೇಳುತ್ತವೆ. ಅದಕ್ಕಾಗಿ ಆ ಪಕ್ಷಿಯನ್ನು ನೋಡು ವುದು ಶುಭ ಶಕುನ ಎಂಬ ನಂಬಿಕೆ ನಮ್ಮಲ್ಲಿದೆ.
ಹೌದು, ಇವತ್ತು ಹೇಳ ಹೊರಟಿರುವುದು ಅದೇ ಶಕುನದ ಪಕ್ಷಿಯ ಬಗ್ಗೆ. ಕನ್ನಡದಲ್ಲಿ ಕುಪ್ಪುಳಕ್ಕಿ, ಕೆಂಬತ್ತು, ಭಾರದ್ವಾಜ ಹಕ್ಕಿ, ಕೆಂಬೂತ ರತ್ನ ಪಕ್ಷಿ ಎಂದು ಅನೇಕ ಹೆಸರಿನಿಂದ ಕರೆಯುತ್ತಾರೆ. ಕೆಲವೊಂದು ಹಳ್ಳಿ ಗಳಲ್ಲಿ ಸಾಂಬಾರ ಕಾಗೆ ಎಂದೂ ಸಹ ಕರೆ ಯುವುದುಂಟು. ಇಂಗ್ಲೀಷಿನಲ್ಲಿ ಕೌಕಲ್, ಕ್ರೌ ಫೆಸೆಂಟ್ಸ್ ಎಂದು ಕರೆಯಲ್ಪಡುವ ಇದರ ವೈಜ್ಞಾನಿಕ ಹೆಸರು ಸೆಂಟ್ರೊಪಸ್ ಸಿನೆನ್ಸಿಸ್. ಅಲ್ಲದೆ ಇದನ್ನು ಗುಡ್‌ಲಕ್ ಬರ್ಡ್ ಎಂದೂ ಕರೆಯುತ್ತಾರೆ. ಹಿಂದಿಯಲ್ಲಿ ಇದನ್ನು ಮಹೋಕಾ ಎಂದು ಕರೆಯುತ್ತಾರೆ. ಇದರ ಕೂಗು ಶಂಖನಾದವನ್ನು ಹೋಲುವುದರಿಂದ ಇದರ ಕೂಗು ಶುಭ ಶಕುನ ಎಂಬ ನಂಬಿಕೆ ಇದೆ.


ಕಾಗೆಗಿಂತ ಕೊಂಚ ದೊಡ್ಡಕ್ಕಿ ರುವ ಕೆಂಬೂತಗಳನ್ನು ಅವುಗಳ ರೆಕ್ಕೆಯ ಬಣ್ಣದಿಂದ ಸುಲಭವಾಗಿ ಗುರುತಿಸಬಹುದು. ಕಪ್ಪು ತಲೆ, ದೇಹದ ಮೇಲೆ ಕಪ್ಪು, ಗಾಢ ನೀಲಿ ಹಾಗೂ ನೇರಳೆ ಬಣ್ಣ ಮಿಶ್ರಿತ ಬಣ್ಣಗಳನ್ನು ಹೊಂದಿದ ಕೆಂಬೂತಗಳ ರೆಕ್ಕೆಯ ಬಣ್ಣ ಕಂದು. ಇವುಗಳ ವಿಶೇಷ ಎಂದರೆ ಕಣ್ಣುಗಳು. ಕಪ್ಪು ತಲೆಯಲ್ಲಿ ಕೆಂಪನೆಯ ಮಿರ ಮಿರ ಮಿಂಚುವ ಕಣ್ಣುಗಳು ಎದ್ದು ಕಾಣಿಸುತ್ತವೆ. ಈ ಕಾರಣಕ್ಕೆ ಕೆಂಬೂತ ಎಂದು ಕರೆಯಲ್ಪಡುತ್ತದೆ. ವಿಶಾಲ ರೆಕ್ಕೆಗಳಿದ್ದರೂ ಹಾರುವುದನ್ನು ಹೆಚ್ಚು ಇಷ್ಟಪಡದ ಪಕ್ಷಿಯಿದು. ಅಪಾಯದ ಸೂಚನೆ ಸಿಕ್ಕಾಗಷ್ಟೇ ಹಾರುತ್ತವೆ. ಅದೂ ನಿಧಾನಗತಿಯಲ್ಲಿ. ಮಿಕ್ಕ ಸಮಯದಲ್ಲಿ ಘನ ಗಂಭೀರತೆಯಿಂದ ನಡೆದು ಹೋಗುವುದೇ ಹೆಚ್ಚು. ನಡೆಯುವಿಕೆಯ ಮಧ್ಯೆ ಆಗಾಗ ಕುಪ್ಪಳಿಸುವುದರಿಂದ ಇದಕ್ಕೆ ಕುಪ್ಪಳಕ್ಕಿ ಎಂಬ ಹೆಸರು ಬಂದಿದೆಯೆನ್ನಬಹುದು. ಗಂಡಿಗಿಂತ ಹೆಣ್ಣು ಕೆಂಬೂತ ಕೊಂಚ ದೊಡ್ಡದು.
ಅರಣ್ಯದಂಚಿನಲ್ಲಿ, ಹುಲುಸಾದ ಹುಲ್ಲು ಗಾವಲು ಪ್ರದೇಶಗಳಲ್ಲಿ ಕಾಣ ಸಿಗುವ ಕೆಂಬೂತ ಗಳು ಹೆಚ್ಚಾಗಿ ಜೋಡಿಯಾಗಿಯೇ ಕಾಣಿಸಿ ಕೊಳ್ಳುತ್ತವೆ. ಕೆಲವು ಪಕ್ಷಿಗಳ ಮೊಟ್ಟೆ, ಸಣ್ಣ ಹುಳ-ಹುಪ್ಪಡಿ, ಮಿಡತೆ, ಕಪ್ಪೆ, ಬಸವನ ಹುಳು ಮುಂತಾದ ಸಣ್ಣ ಜೀವಿಗಳು, ಧಾನ್ಯ, ಹಣ್ಣು, ಬೀಜಗಳೇ ಇವುಗಳ ಆಹಾರಗಳು. ಈ ಹಕ್ಕಿ ತನ್ನ ಗೂಡಿನ ನಿರ್ಮಾಣಕ್ಕೆ ಒಂದು ರೀತಿಯ ವಿಶೇಷ ಔಷಧೀಯ ಗುಣಮಟ್ಟದ ಹುಲ್ಲನ್ನು ಬಳಸುತ್ತದೆಯಂತೆ. ಅಲ್ಲದೆ ಅವು ಗೂಡು ಕಟ್ಟಲು ಸಂಜೀವಿನಿ ಕಡ್ಡಿಯನ್ನು ಬಳಸು ತ್ತವೆ ಎಂಬ ಮೂಢ ನಂಬಿಕೆಯಿಂದ ಜನರು ಕೆಂಬೂತಗಳ ಗೂಡುಗಳಿಂದ ಅವುಗಳನ್ನು ಓಡಿಸುತ್ತಿದ್ದರು ಎಂಬ ಕಥೆಯೂ ಇದೆ.
ಬ್ರಿಟೀಷರು ಇವುಗಳನ್ನು ಕಾಡು ಕೋಳಿಗಳೆಂದು ಭಾವಿಸಿ ಬೇಟೆಯಾಡಿ ಅದರ ಮಾಂಸವನ್ನು ತಿನ್ನಲಾಗದೆ ಅದನ್ನು ತಮ್ಮೊಂದಿ ಗಿದ್ದ ಬೇಟೆ ನಾಯಿಗಳಿಗೆ ಹಾಕುತ್ತಿದ್ದರಂತೆ. ಆದರೆ ನಾಟಿ-ವೈದ್ಯದಲ್ಲಿ ಇದರ ಮಾಂಸ ಕ್ಷಯರೋಗ ಹಾಗು ಉಸಿರಾಟಕ್ಕೆ ಸಂಬಂಧಿಸಿದ ರೋಗಗಳಿಗೆ ಮದ್ದು ಎಂದು ಹೇಳುತ್ತಾರೆ. ಆದರೀಗ ಇವುಗಳ ಸಂತತಿ ಕ್ಷೀಣಿಸಿದೆ ಎಂದೇ ಹೇಳಬಹುದು.