ನಾಯಿ ಕಣ್ಣು, ನರಿ ಕಣ್ಣು, ಕಾಗೆ ಕಣ್ಣು, ಗೂಬೆ ಕಣ್ಣು, ಅವರ ಕಣ್ಣು, ಇವರ ಕಣ್ಣು, ಯಾರ ಕಣ್ಣೂ ಬೀಳ್ದೆ ಇರ್ಲಪ್ಪಾ ಎಂದು ಹಿಡಿ ಉಪ್ಪನ್ನು ಕೈಯಲ್ಲಿ ಹಿಡಿದು ದೃಷ್ಟಿ ತೆಗೆಯುವುದನ್ನು ನೀವೆಲ್ಲರೂ ನೋಡೇ ಇರ್ತೀರಿ.
Thank you for reading this post, don't forget to subscribe!ದೃಷ್ಟಿ ತೆಗೆಯುವಾಗ ಏಕೆ ಈತರ ಹೇಳುತ್ತಾರೆ. ಏನಿದರ ತಾತ್ಪರ್ಯ? ಎಂಬ ಕುತೂಹಲ ಇರಬೇಕಲ್ಲವೇ? ನಿಜ, ಈ ಮಾತನ್ನು ಹೇಳುವವರಿಗೂ ಸರಿಯಾಗಿ ಗೊತ್ತಿಲ್ಲದಿರಬಹುದು. ಬಹಳ ಹಿಂದಿನಿಂದಲೂ ಈ ಮಾತುಗಳನ್ನು ಕೇಳಿ ಕೇಳಿ ನಾವೂ ಸಹ ಇದನ್ನು ಪಾಲಿಸುತ್ತೇವೆ. ಆದರೆ ಇದರ ನಿಜವಾದ ಅರ್ಥವೇನು?
ಈ ಮಾತು “ನಾಯಿ ಕಣ್ಣು, ನರಿ ಕಣ್ಣು, ಕಾಗೆ ಕಣ್ಣು…” ಎಂಬುದು ಕನ್ನಡದಲ್ಲಿ ಬಹು ಪಾಲು ಜನಪ್ರಿಯವಾದ ಒಂದು ಶಾಪವಾಣಿ ಅಥವಾ ತಿರಸ್ಕಾರವಾಣಿ ಆಗಿದೆ. ಇದನ್ನು ಸಾಮಾನ್ಯವಾಗಿ ಯಾರಾದರೂ ದುಷ್ಟ ದೃಷ್ಟಿಯಿಂದ ನೋಡುತ್ತಾರೆ ಎಂಬ ಭಾವನೆ ವ್ಯಕ್ತಪಡಿಸಲು ಬಳಸುತ್ತಾರೆ. ಅದಿರಲಿ, ಈಗ ಹೇಳ ಹೊರಟಿರುವುದು ಗೂಬೆಯ ಬಗ್ಗೆ. ಗೂಬೆಯ ಕುರಿತಾದ ಅನೇಕ ನಂಬಿಕೆಗಳಿವೆ. ಗೂಬೆಯನ್ನು ನೋಡುವುದು ಶುಭ ಮತ್ತು ಅಶುಭ ಎಂಬ ಎರಡೂ ಬಗೆಯ ನಂಬಿಕೆಗಳು ನಮ್ಮಲ್ಲಿವೆ.
ಶುಭ-ಅಶುಭ ಸೂಚನೆಗಳು!
ಮೊದಲಿಗೆ ಶುಭ ಸೂಚನೆಯನ್ನೇ ನೋಡೋಣ. ಗೂಬೆಯನ್ನು ಲಕ್ಷ್ಮಿದೇವಿಯ ವಾಹನವೆನ್ನುತ್ತಾರೆ. ಅದನ್ನು ನೋಡುವುದು ಸಂಪತ್ತು ಮತ್ತು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅಲ್ಲದೆ ಗೂಬೆ ಬುದ್ಧಿವಂತಿಕೆಯ ಸಂಕೇತವೂ ಆಗಿದೆ. ಹಗಲಿನಲ್ಲಿ ಗೂಬೆಯನ್ನು ನೋಡುವುದರಿಂದ ಅದೃಷ್ಟ ಬರುತ್ತದೆ. ಪ್ರಯಾಣ ಮಾಡುವಾಗ ಗೂಬೆ ಕಂಡರೆ ಅದು ಧನಲಾಭದ ಸೂಚನೆ. ವಾಸ್ತು ಪ್ರಕಾರ ಗೂಬೆಯ ಪ್ರತಿಮೆಯನ್ನು ಮನೆಯಲ್ಲಿ ಇರಿಸುವುದು ಜ್ಞಾನ ಮತ್ತು ಸಂಪತ್ತು ಹೆಚ್ಚುವುದಕ್ಕೆ ಕಾರಣವಾಗುತ್ತದೆ. ಅಲ್ಲದೆ ನಕಾರಾತ್ಮಕ ಶಕ್ತಿಯನ್ನು ನಮ್ಮಿಂದ ದೂರವಿಡುತ್ತದೆ.

ಗೂಬೆಯ ಅಶುಭ ಸಂಕೇತಗಳು. ಮನೆಯೊಳಗೆ ಗೂಬೆಗಳು ಬರುವುದು ಅಶುಭವೆಂದೇ ಹೇಳಲಾಗುತ್ತದೆ. ಇದು ಮನೆಯ ಪ್ರಗತಿಗೆ ಹಿನ್ನಡೆಯನ್ನುಂಟು ಮಾಡುತ್ತದೆ. ಮನೆಯ ಛಾವಣಿಯಲ್ಲಿ ಕುಳಿತು ಗೂಬೆ ಕೂಗುವುದು ಅಶುಭ ಸುದ್ದಿಯ ಸಂಕೆತ. ಗೂಬೆಯನ್ನು ರಾತ್ರಿಯ ರಾಜನೆಂದು ಕರೆಯುತ್ತಾರೆ. ಗೂಬೆಗಳು ಹೆಚ್ಚಾಗಿ ರಾತ್ರಿಯ ವೇಳೆಯಲ್ಲೇ ಕಾಣಿಸುವುದು ಇದಕ್ಕೆ ಕಾರಣವಿರಬಹುದು. ಆದರೆ ರಾತ್ರಿ ಸಮಯದಲ್ಲಿ ಗೂಬೆಯ ಕಣ್ಣನ್ನು ನೋಡುವುದೂ ಸಹ ಅಶುಭವೆಂಬ ನಂಬಿಕೆಯಿದೆ. ಆದರೆ ಹಿಂದೂ ಧರ್ಮದ ಪ್ರಕಾರ ಬಿಳಿ ಗೂಬೆಯನ್ನು ನೋಡುವುದು ಮಂಗಳಕರ. ಬಿಳಿ ಗೂಬೆಯನ್ನು ನೋಡುವುದರಿಂದ ನಮ್ಮ ಜೀವನದ ಎಲ್ಲಾ ಸಮಸ್ಯೆಗಳೂ ಪರಿಹಾರವಾಗುತ್ತದೆ ಎಂಬುದೂ ಕೆಲವು ಕಡೆಗಳಲ್ಲಿನ ನಂಬಿಕೆ.
ಗೂಬೆಗಳಿಗೆ ಅದ್ಭುತ ಶ್ರವಣ ಶಕ್ತಿ ಇದೆ!
ಹಾಗೆಯೇ ಗೂಬೆಗಳ ಕಣ್ಣುಗಳೂ ಸಹ ವಿಶಿಷ್ಟವಾಗಿವೆ. ಅವುಗಳ ಕಣ್ಣುಗಳು ಗೋಳಾಕಾರದಲ್ಲಿಲ್ಲದ ಅವುಗಳು ನಮ್ಮಂತೆ ಕಣ್ಣುಗಳ ಚಲನೆಯನ್ನು ಅವಲಂಬಿಸಿಲ್ಲ. ಈ ಕಾರಣಕ್ಕಾಗಿಯೇ ಅವು ಸುತ್ತಮುತ್ತಲ ಪ್ರದೇಶದಲ್ಲಿ ನಡೆಯುವ ಚಟುವಟಿಕೆಯನ್ನು ನೋಡಲು ತಮ್ಮ ತಲೆಯನ್ನೇ ತಿರುಗಿಸುತ್ತವೆ. ಅಂದರೆ ಇವು ತಮ್ಮ ತಲೆಯನ್ನು 270 ಡಿಗ್ರಿ ತಿರುಗಿಸಬಲ್ಲವು. ಅಲ್ಲದೆ ಇವುಗಳ ಕಣ್ಣುಗಳ ಇನ್ನೊಂದು ವಿಶೇಷವೆಂದರೆ, ದೂರದ ವಸ್ತುಗಳನ್ನೂ ಸಹ ತಮ್ಮ ಸ್ಪಷ್ಟವಾಗಿ ನೋಡಬಲ್ಲವು. ಕಿವಿಗಳು ನಮ್ಮ ಹಾಗೆ ಹೊರ ಚಾಚಿರುವುದಿಲ್ಲ. ತಲೆಯ ಎರಡೂ ಬದಿಗಳಲ್ಲಿ ದೊಡ್ಡ ರಂಧ್ರಗಳಂತಿದ್ದು, ಒಂದು ಕಿವಿ ಇನ್ನೊಂದಕ್ಕಿಂತ ಕೆಳಗಿರುತ್ತದೆ. ಇದು ಈಗಿನ ಸರೌಂಡ್ ಸೌಂಡ್ ಸಿಸ್ಟಮ್ ತರಹ ಕೆಲಸ ಮಾಡುತ್ತದೆ. ಇದರಿಂದ ಶಬ್ದವು ಯಾವ ದಿಕ್ಕಿನಿಂದ ಬರುತ್ತಿದೆ ಎಂಬುದನ್ನು ಸ್ಪಷ್ಟವಾಗಿ ಗೃಹಿಸುತ್ತದೆ.


ಗೂಬೆಗಳು ಅತ್ಯಂತ ಪ್ರಾಚೀನ ಪಕ್ಷಿಗಳೆಂದೇ ಹೇಳಬಹುದು. ಗೂಬೆಗಳ ಪಳೆಯುಳಿಕೆಗಳು ಸುಮಾರು ೬ ಕೋಟಿ ವರ್ಷಗಳ ಹಿಂದೆಯೇ ಕಂಡು ಬಂದಿವೆಯೆನ್ನಲಾಗಿದೆ. ಗೂಬೆಗಳ ವಂಶಾವಳಿಗಳು ಬೆರುರ್ನಿಸ್ ಮತ್ತು ಓಗಿಗೋಪ್ಟಿಂಕ್ಸ್ನಂತಹ ಪುರಾತನ ಪ್ರಾಣಿಗಳ ಜೊತೆ ಗುರುತಿಸಿಕೊಂಡಿವೆ. ಅಂದರೆ ಡೈನೋಸಾರಸ್ಗಳ ಅಳಿವಿನ ನಂತರ ಇವುಗಳು ಬೆಳವಣಿಗೆಯಾಗಿರಬಹುದು ಎಂಬ ಒಂದು ಅಂದಾಜಿದೆ. ಈಯೋಸಿನ್ ಯುಗ ಅಂದರೆ ಬೆಚ್ಚಗಿನ ಜಾಗತಿಕ ವಾತಾವರಣದಲ್ಲಿ ಪ್ರಾರಂಭವಾಗಿ ಮಯೋಸಿನ್ ಹಾಗೂ ಪೆಸ್ಟೋಸಿನ್ ಯುಗಗಳಲ್ಲಿ ವಿಕಸನ ಹೊಂದಿ ಆಧುನಿಕ ಗೂಬೆಗಳು ರೂಪಾಂತರ ಹೊಂದಿದವೆಂದು ತಿಳಿದು ಬರುತ್ತವೆ. ಕುದುರೆ, ಆನೆ, ಬಾವಲಿ ಹಾಗೂ ತಿಮಿಂಗಿಲಗಳೂ ಸಹ ಇದೇ ಯುಗದಲ್ಲಿ ಕಂಡು ಬಂದವು. ಈಸಿಯೋನ್ ಯುಗದ ಗೂಬೆಗಳ ಪಳೆಯುಳಿಕೆಗಳು ಉತ್ತರ ಅಮೇರಿಕಾದ ವೈಮಿಂಗ್ ರಾಜ್ಯದಲ್ಲಿ ಕಂಡು ಬಂದಿವೆ. ಈ ಪಳೆಯುಳಿಕೆಗಳಿಗೆ ಪ್ಯಾಲಿಯೋಸಿಯಸ್ ಡೇಕ್ವೋರಿ (Palaeosius deccori) ಎಂದು ಹೆಸರಿಸಲಾಗಿದೆ. ಆದರೆ ಇವುಗಳ ಪೂರ್ವಜರ ಬಗ್ಗೆ ಇನ್ನೂ ಸ್ಪಷ್ಟವಾದ ಮಾಹಿತಿ ದೊರೆತಿಲ್ಲ. ಒಂದು ಮೂಲದ ಪ್ರಕಾರ ಇವು ಮಾಂಸಾಹಾರಿ ಪಕ್ಷಿಗಳಾದ ಹದ್ದುಗಳು ಮತ್ತು ಇತರ ರಾತ್ರಿಯಲ್ಲಿ ಬೇಟೆಯಾಡುವ ಪಕ್ಷಿಗಳ ಸಮೂಹದಿಂದ ಬೇರ್ಪಟ್ಟು ವಿಕಸನಗೊಂಡಿರಬಹುದೆಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.
ಗೂಬೆಗಳ ವಿಶಿಷ್ಟ ದೈಹಿಕ ರಚನೆ!
ಗೂಬೆಗಳ ತಲೆಯ ಗೋಳಾಕಾರವಾಗಿದೆ. ಕಣ್ಣುಗಳೂ ಗೋಳಾಕಾರವಾಗಿಯೇ ಇವೆ. ಕಣ್ಣು ಗುಡ್ಡೆಗಳು ನಮ್ಮ ಹಾಗೆ ಎಡ-ಬಲ ಚಲಿಸಲಾರವು. ಹಾಗಾಗಿ ಗೂಬೆಗಳು ತಮ್ಮ ಮುಂದಿರುವುದನ್ನು ಮಾತ್ರ ನೋಡಬಲ್ಲವು. ಈ ಕಾರಣಕ್ಕಾಗಿಯೇ ಗೂಬೆ ತನ್ನ ತಲೆಯನ್ನು ಸುಮಾರು ೨೭೦ ಡಿಗ್ರಿಗಳಷ್ಟು ತಿರುಗಿಸಬಲ್ಲವು. ಅಲ್ಲದೆ ಗೂಬೆಯ ಕಣ್ಣುಗಳ ರೆಟಿನಾದಲ್ಲಿ ರಾಡ್ ಸೆಲ್ಸ್ (Rod cells) ಮತ್ತು ಕೋನ್ ಸೆಲ್ಸ್ (Cone cells) ಎಂಬ ಎರಡು ಬಗೆಯ ಕೋಶಗಳಿವೆ. ಈ ರಾಡ್ ಸೆಲ್ಸ್ಗಳು ಕಡಿಮೆ ಬೆಳಕಿನಲ್ಲಿ ಕಪ್ಪು-ಬಿಳುಪು ಚಿತ್ರಗಳನ್ನು ಪ್ರತಿಪಾದಿಸಿದರೆ, ಕೋನ್ ಸೆಲ್ಸ್ಗಳು ಪ್ರಕಾಶಮಾನವಾದ ಬಣ್ಣ ಮತ್ತು ನಿಖರವಾದ ಚಿತ್ರಗಳನ್ನು ಹಿಡಿದಿಡಬಲ್ಲವು. ಈ ಕಾರಣದಿಂದ ಗೂಬೆಯ ಕಣ್ಣುಗಳು ಸ್ಪಷ್ಟವಾದ ಚಿತ್ರಗಳನ್ನು ಅಥವಾ ದೃಶ್ಯಗಳನ್ನು ನೋಡಬಲ್ಲವು. ರಾಡ್ ಸೆಲ್ಸ್ಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಕಾರಣ ರಾತ್ರಿಯ ಕತ್ತಲಲ್ಲೂ ಸ್ಪಷ್ಟವಾಗಿ ವಸ್ತುಗಳನ್ನು ಗುರುತಿಸಬಲ್ಲವು.


ಕಿವಿಗಳು ತಲೆಯ ಎರಡೂ ಬದಿಗಳಲ್ಲಿ ರಂಧ್ರಗಳ ರೂಪದಲ್ಲಿರುತ್ತವೆ. ಈ ಕಾರಣದಿಂದ ಗೂಬೆಯ ಕಿವಿ ನಮಗೆ ಗೋಚರಿಸುವುದಿಲ್ಲ. ಈ ಕಿವಿಗಳಲ್ಲು ಒಂದು ವಿಶೇಷ ರಚನೆಯಿದೆ. ಒಂದು ಕಿವಿ ಕೆಳಗಿದ್ದರೆ, ಇನ್ನೊಂದು ಸ್ವಲ್ಪ ಮೇಲೆ ಇರುತ್ತದೆ. ಈ ರೀತಿಯ ರಚನೆಯಿಂದ ಸುತ್ತಲಿನ ಧ್ವನಿಗಳು ಮೊದಲು ಒಂದು ಕಿವಿಯನ್ನು ತಲುಪಿ, ಸ್ವಲ್ಪ ಸಮಯದ ನಂತರ ಇನ್ನೊಂದು ಕಿವಿಯನ್ನು ತಲುಪುತ್ತವೆ. ಈ ವಿಶಿಷ್ಟತೆಯ ಕಾರಣ ಗೂಬೆಗಳು ಧ್ವನಿಯ ಸ್ಥಾನ ಮತ್ತು ದೂರವನ್ನು ನಿಖರವಾಗಿ ಗುರುತಿಸಬಲ್ಲವು. ಕಣ್ಣುಗಳನ್ನು ತಿರುಗಿಸಲು ಅಸಾಧ್ಯವಾದ ಕಾರಣ ಶತ್ರು ಎಷ್ಟು ದೂರದಲ್ಲಿದ್ದಾನೆ ಎಂಬುದನ್ನು ಕಿವಿಯ ಮೂಲಕವೇ ತಿಳಿಯುವ ಶಕ್ತಿ ಗೂಬೆಗಳಿಗಿವೆ. ಅಲ್ಲದೆ ಮುಖದ ಸುತ್ತಲಿರುವ ರೋಮಗಳೂ ಸಹ ಧ್ವನಿ ತರಂಗಗಳನ್ನು ಕಿವಿಯ ಕಡೆಗೆ ತಲುಪಿಸುವಲ್ಲಿ ವಿಶಿಷ್ಟ ಪಾತ್ರ ವಹಿಸುತ್ತದೆ. ಕೆಳಕ್ಕೆ ಬಾಗಿದ ಚಿಕ್ಕದಾದ ಕೊಕ್ಕು ಮೊನಚಾಗಿದ್ದು ಬೇಟೆಯನ್ನು ಹಿಡಿಯಲು ಮತ್ತು ಮಾಂಸವನ್ನು ಕಿತ್ತು ತಿನ್ನಲು ಸಹಾಯ ಮಾಡುತ್ತವೆ. ಕೊಕ್ಕಿನ ಕೆಳಭಾಗದಲ್ಲಿರುವ ಮೂಗಿನ ರಂಧ್ರಗಳು ಗೂಬೆಯ ಉಸಿರಾಟಕ್ಕೆ ಮತ್ತು ವಾಸನೆಯನ್ನು ಗೃಹಿಸಲು ಸಹಾಯಕವಾಗಿದೆ.
ರೆಕ್ಕೆಗಳು ಅಗಲವಾಗಿದ್ದು ದೊಡ್ಡದಾಗಿರುತ್ತವೆ. ಇದು ಕಡಿಮೆ ವೇಗದಲ್ಲಿ ಹಾರಾಟ ಮತ್ತು ಒಂದೇ ಸ್ಥಳದಲ್ಲಿ ಹಾರುತ್ತಾ ನಿಲ್ಲಲು ಸಹಾಯ ಮಾಡುತ್ತದಲ್ಲದೆ ಶಕ್ತಿಯನ್ನೂ ಸಹ ಉಳಿತಾಯ ಮಾಡುತ್ತದೆ. ರೆಕ್ಕೆಯ ಮುಂಭಾಗದ ಅಂಚಿನಲ್ಲಿ ಚೂಪಾದ ರೋಮಗಳು ಹಾಗೂ ಹಿಂಭಾಗದ ಅಂಚಿನಲ್ಲಿ ಮೃದುವಾದ ರೋಮಗಳಿವೆ. ಇವು ಗಾಳಿಯಿಂದುಂಟಾಗುವ ಘರ್ಷಣೆಯನ್ನು ಕಡಿಮೆ ಮಾಡುವುದಲ್ಲದೆ ಶಬ್ದವನ್ನೂ ಸಹ ಕಡಿಮೆ ಮಾಡುತ್ತವೆ. ಅಲ್ಲದೆ ರೆಕ್ಕೆ ಹಾಗೂ ದೇಹದ ಮೇಲೆಲ್ಲ ಇರುವ ರೋಮಗಳು ದೇಹದ ಉಷ್ಣತೆಯನ್ನು ಸಮತೋಲನದಲ್ಲಿಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಲ್ಲದೆ ಈ ರೋಮಗಳು ವಿವಿಧ ಬಣ್ಣಗಳ ಚಿತ್ರಾರದಿಂದ ಕೂಡಿರುತ್ತವೆ. ಇವು ಮರದ ತೊಗಟೆ ಹಾಗೂ ಕಲ್ಲುಬಂಡೆಗಳ ನಡುವೆ ಅಡಗಿ ಕೂರಲು ಸಹಾಯಕವಾಗಿದೆ.
ಜೈಗೋಡಾಕ್ಟೈಲ್ ಪಂಜದ ವಿನ್ಯಾಸ
ಗೂಬೆಗಳ ಕಾಲುಗಳಲ್ಲಿ ನಾಲ್ಕು ಬೆರಳುಗಳಿವೆ. ಇವು ಜೈಗೋಡಾಕ್ಟೈಲ್ ಪಂಜದ ವಿನ್ಯಾಸವನ್ನು ಹೊಂದಿವೆ. ಅಂದರೆ ನಾಲ್ಕು ಬೆರಳುಗಳಲ್ಲಿ ಮೊದಲ ಮತ್ತು ನಾಲ್ಕನೇ ಬೆರಳುಗಳು ಹಿಂದಕ್ಕೆ ಚಾಚಿಕೊಂಡಿರುತ್ತವೆ. ಸಾಮಾನ್ಯವಾಗಿ ಪಕ್ಷಿಗಳ ಪಾದಗಳು ಅನಿಸೊಡಾಕ್ಟೈಲ್, ಜೈಗೋಡಾಕ್ಟೈಲ್, ಹೆಟೆರೋಡಾಕ್ಟೈಲ್, ಸಿಂಡಾಕ್ಟೈಲ್ ಮತ್ತು ಪ್ಯಾಂಪ್ರೊಡಾಕ್ಟೈಲ್ ಎಂಬ ವಿನ್ಯಾಸಗಳನ್ನು ಹೊಂದಿರುತ್ತವೆ. ಇದರಲ್ಲಿ ಜೈಗೋಡಾಕ್ಟಲ್ ಮತ್ತು ಹೆಟೆರೋಡಾಕ್ಟೈಲ್ ಪಾದಗಳಲ್ಲಿ ಎರಡು ಬೆರಳುಗಳು ಹಿಂದಕ್ಕೆ ಮತ್ತೆರಡು ಮುಂದಕ್ಕೆ ಚಾಚಿಕೊಂಡಿರುತ್ತವೆ. ಹೆಟೆರೋಡಾಕ್ಟೈಲ್ನಲ್ಲಿ ಮೊದಲ ಮತ್ತು ಎರಡನೇ ಬೆರಳುಗಳು ಹಿಂದಕ್ಕೆ ಚಾಚಿಕೊಂಡಿರುತ್ತವೆ. ಈ ಗೂಬೆಗಳದು ಜೈಗೋಡಾಕ್ಟೈಲ್ ವಿನ್ಯಾಸ. ಈ ವಿನ್ಯಾಸದಿಂದ ತನ್ನ ಬೇಟೆಯನ್ನು ಹಿಡಿದಿಟ್ಟುಕೊಳ್ಳುವುದಲ್ಲದೆ, ಹೆಚ್ಚಿನ ಬಲವನ್ನು ಬೆರಳ ಮೇಲೆ ಹಾಕುವುದರಿಂದ ಚಿಕ್ಕಪುಟ್ಟ ಪ್ರಾಣಿಗಳು ಅಲ್ಲೇ ಸತ್ತು ಹೋಗುತ್ತವೆ. ಅಲ್ಲದೆ ಕಾಲುಗಳು ದಟ್ಟವಾದ ರೋಮಗಳಿಂದ ಕೂಡಿವೆ. ಇವು ಬೇಟೆಯಾಡಿದ ಪ್ರಾಣಿಗಳ ಕಡಿತದಿಂದ ರಕ್ಷಿಸುತ್ತವೆ.
ಗೂಬೆಗಳು ಪ್ರಾಥಮಿಕವಾಗಿ ಮಾಂಸಾಹಾರಿಗಳು.

ಈ ಮಾಂಸಾಹಾರಿಗಳನ್ನು ಕಾರ್ನಿವೋರ್ಸ್ ಎಂದು ಕರೆಯುತ್ತಾರೆ. ಅಂದರೆ ಇವು ಪ್ರಾಣಿಗಳನ್ನು ಬೇಟೆಯಾಡಿ ಅಥವಾ ಕೊಳೆತ ಮಾಂಸಗಳನ್ನು ತಿನ್ನುತ್ತವೆ. ಆಹಾರವು ಇವುಗಳ ಪ್ರಭೇದ ಮತ್ತು ವಾಸಸ್ಥಾನದ ಮೇಲೆ ಅವಲಂಬಿತವಾಗಿದೆ. ಸಣ್ಣ ಪ್ರಭೇದದ ಗೂಬೆಗಳು ಕಿಟ, ಜೀರುಂಡೆ, ಚಿಕ್ಕಚಿಕ್ಕ ಹಕ್ಕಿಗಳು, ಕಪ್ಪೆಗಳು ಹಾಗೂ ಓತಿಕ್ಯಾತಗಳನ್ನು ಹಿಡಿದು ತಿನ್ನುತ್ತವೆ. ದೊಡ್ಡ ಪ್ರಭೇದಗಳು ಇಲಿ, ಹಾವೂ ಮತ್ತು ನೀರು ಹಕ್ಕಿಗಳಂತಹ ಪ್ರಾಣಿಗಳನ್ನು ಬೇಟೆಯಾಡಿ ತಿನ್ನುತ್ತವೆ. ಗೂಬೆಗಳು ಉತ್ತಮವಾದ ಪಚನ ವ್ಯವಸ್ಥೆಯನ್ನು ಹೊಂದಿವೆ. ಅವು ಬೇಟೆಯನ್ನು ತುಂಡು ಮಾಡದೆ ಪೂರ್ತಿ ನುಂಗುತ್ತವೆ. ಕೆಲವೊಮ್ಮೆ ದೊಡ್ಡದೊಡ್ಡ ಪ್ರಾಣಿಗಳನ್ನು ಕೊಕ್ಕಿನಿಂದ ಕುಕ್ಕಿ ತುಂಡು ಮಾಡಿಯೂ ನುಂಗಬಹುದು. ಇವುಗಳ ಪಚನ ಕ್ರಿಯೆಯೂ ಸಹ ಇಂಟರೆಸ್ಟಿಂಗ್ ಆಗಿದೆ. ಅವು ನುಂಗಿದ ಆಹಾರವನ್ನು ವಿವಿಧ ಹಂತಗಳಲ್ಲಿ ಜೀರ್ಣಿಸಿಕೊಳ್ಳುತ್ತವೆ. ಜೀರ್ಣವಾಗದೆ ಇರುವ ಮೂಳೆ, ಇತರ ವಸ್ತುಗಳು ಗೋಳಾಕಾರದ ಗುಂಡಾಗಿ ರೂಪುಗೊಳ್ಳುತ್ತದೆ. ಇದಕ್ಕೆ ಪೆಲೆಟ್ಗಳೆನ್ನುತ್ತಾರೆ. ಸುಮಾರು ಆರರಿಂದ ಹನ್ನೆರಡು ಗಂಟೆಗಳಲ್ಲಿ ಈ ಜೀರ್ಣವಾಗದ ಗೋಲವನ್ನು ವಾಂತಿ ಮಾಡಿಕೊಳ್ಳುತ್ತದೆ. ವಿಜ್ಞಾನಿಗಳು ಈ ಪೆಲೆಟ್ಗಳನ್ನು ಒಡೆದು ನೋಡಿ, ಆ ಪ್ರದೇಶದ ಗೂಬೆಗಳು ಏನು ತಿನ್ನುತ್ತವೆ ಮತ್ತು ಆ ಪ್ರದೇಶದಲ್ಲಿ ಯಾವೆಲ್ಲ ಚಿಕ್ಕ ಪ್ರಾಣಿಗಳು ವಾಸಿಸುತ್ತವೆ ಎಂಬ ಮಾಹಿತಿಗಳನ್ನು ಅಭ್ಯಸಿಸುತ್ತಾರೆ.


ವೈಜ್ಞಾನಿಕ ಹೆಸರು ಸ್ಟ್ರಿಗಿಫಾರ್ಮ್ಸ್-Strigiformes
ಅಂಟಾರ್ಟಿಕ ಮತ್ತು ಇತರ ಪ್ರಮುಖ ಖಂಡಗಳಿಂದ ಬಲುದೂರವಿರುವ ದ್ವೀಪಗಳನ್ನು ಹೊರತುಪಡಿಸಿ ಜಗತ್ತಿನ ಎಲ್ಲ ಪ್ರದೇಶಗಳಲ್ಲೂ ಗೂಬೆಗಳು ಕಂಡು ಬರುತ್ತವೆ. ಇವುಗಳು ಬಹುತೇಕ ಎಲ್ಲ ಪರಿಸರಗಳಲ್ಲೂ ಹೊಂದಿಕೊಂಡು ಬದುಕುವ ಸಾಮರ್ಥ್ಯ ಈ ಗೂಬೆಗಳಿಗಿವೆ. ಇದರ ವೈಜ್ಞಾನಿಕ ಹೆಸರು ಸ್ಟ್ರಿಗಿಫಾರ್ಮ್ಸ್ (Strigiformes) ಇಂಗ್ಲೀಷಿನಲ್ಲಿ ಓವಲ್ (Owl) ಎಂದೂ ಕರೆಯುತ್ತಾರೆ. ಸುಮಾರು ಇನ್ನೂರಿಂದ ಇನ್ನೂರೈವತ್ತು ಜಾತಿಯ ಗೂಬೆಗಳಿವೆಯೆಂಬ ಅಂದಾಜಿದೆ. ಭಾರತದಲ್ಲಿ ಸುಮಾರು ಮೂವತ್ತಾರು ಜಾತಿಯ ಗೂಬೆಗಳು ಕಂಡು ಬರುತ್ತವೆ. ಬಾರ್ನ್ ಓವಲ್, ಇಂಡಿಯನ್ ಈಗಲ್ ಓವಲ್, ಸ್ಪಾಟೆಡ್ ಓವಲ್, ಮೊಟ್ಲೆಡ್ ವುಡ್ ಓವಲ್, ಬ್ರೌನ್ಫಿಶ್ ಓವಲ್, ಡಸ್ಕಿ ಈಗಲೆ ಓವಲ್ ಹೀಗೆ ಅನೇಕ ವಿವಿಧ ಜಾತಿಯ ಗೂಬೆಗಳು ಭಾರತದಲ್ಲಿ ಕಂಡು ಬರುತ್ತವೆ.
ಗೂಬೆಗಳ ವಿವಿಧ ಹೆಸರುಗಳು!
ಇಂಗ್ಲೀಷಿನಲ್ಲಿ ಓವಲ್, ಸಂಸ್ಕೃತದಲ್ಲಿ ಉಲೂಕ ಮತ್ತು ಪೇಚಕ, ಕನ್ನಡದಲ್ಲಿ ಗೂಬೆ, ತಮಿಳಿನಲ್ಲಿ ಅಂದೈ, ತೆಲುಗಿನಲ್ಲಿ ಗುಡ್ಲಗೂಬ, ಮಲಯಾಳಂನಲ್ಲಿ ಮೂಂಗ, ಮರಾಠಿಯಲ್ಲಿ ಗುಬಡ್, ಬೆಂಗಾಲಿಯಲ್ಲಿ ಪೆಚಾ, ಗುಜರಾತಿಯಲ್ಲಿ ಗುವಡ್, ಹಿಂದಿ-ಪಂಜಾಬಿ ಹಾಗೂ ಉರ್ದುವಿನಲ್ಲಿ ಉಲ್ಲೂ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಜರ್ಮನ್ನಲ್ಲ ಓಯ್ಲೆ, ಫ್ರೆಂಚ್ನಲ್ಲಿ ಶುವಟ್ ಅಥವಾ ಇಬೂ, ಸ್ಪ್ಯಾನಿಷ್ ಭಾಷೆಯಲ್ಲಿ ಬೂಓ ಅಥವಾ ಲೆಚೂಥಾ, ಜಪನೀಸ್ನಲ್ಲಿ ಪುಕುರೋ, ಚೈನೀಸ್ನಲ್ಲಿ ಮ್ಯಾಂಡರಿನ್, ಅರಬಿಕ್ನಲ್ಲಿ ಬೂಮಾ ಹಾಗೂ ರಷ್ಯನ್ ಭಾಷೆಯಲ್ಲಿ ಸೋವಾ ಎಂಬ ಹೆಸರೂ ಗೂಬೆಗಿದೆ. ಇಲ್ಲಿ ಮಲಯಾಳಂ ಮತ್ತು ತಮಿಳು ಭಾಷೆಗಳ ಗೂಬೆಯ ಹೆಸರುಗಳು ಸ್ವತಂತ್ರವಾಗಿ ವಿಕಸನಗೊಂಡಿವೆ. ಕನ್ನಡದ ಗೂಬೆ, ಹಿಂದಿಯ ಉಲ್ಲೂ ಎಂಬ ಹೆಸರುಗಳನ್ನು ಮೂರ್ಖತನದ ಸಂಕೇತವಾಗಿ ಬಳಸಲಾಗುತ್ತದೆ. ಆದರೆ ಹಿಂದೂ ಪುರಾಣದಲ್ಲಿ ಗೂಬೆಯನ್ನು ಜ್ಞಾನದ ದೇವತೆಯಾದ ಲಕ್ಷ್ಮೀದೇವಿಯ ವಾಹನವಾಗಿ ಪೂಜಿಸಲಾಗುತ್ತದೆ. ಇದು ಜ್ಞಾನ ಮತ್ತು ಸಂಪತ್ತಿನ ಪ್ರತೀಕವಾಗಿದೆ. ಹೀಗಿದ್ದರೂ ಗೂಬೆಯನ್ನು ಮೂರ್ಖತನಕ್ಕೆ ಹೋಲಿಸಿದವರ್ಯಾರೋ?

ತಲೆಯನ್ನು 270 ಡಿಗ್ರಿ ತಿರುಗಿಸಬಲ್ಲವು!
ಹಾಗೆ ನೋಡಿದರೆ ಗೂಬೆಯನ್ನು ಮೂರ್ಖತನಕ್ಕೆ ಹೋಲಿಸಿದುದರ ಹಿಂದೆ ಕೆಲವು ಕಾರಣಗಳಿವೆ. ಗೂಬೆಯು ತಮ್ಮ ದೊಡ್ಡ ಕಣ್ಣುಗಳನ್ನು ಚಲಿಸಲು ಅಸಾಧ್ಯವಾದುದರಿಮದ ಅವುಗಳ ನೋಟ ನಿಶ್ಚಲವಾಗಿ ಕಾಣಿಸಬಹುದು. ಗೂಬೆಗಳು ತಮ್ಮ ತಲೆಯನ್ನು ೨೭೦ ಡಿಗ್ರಿ ತಿರುಗಿಸಬಲ್ಲವು. ಇದು ಕೆಲವೊಮ್ಮೆ ವಿಚಿತ್ರವಾಗಿ ಕಾಣಿಸುತ್ತವೆ. ಅಲ್ಲದೆ ಗೂಬೆಗಳು ನಿಶಾಚರ ಪ್ರಾಣಿಗಳು. ಹಗಲು ಹೊತ್ತಿನಲ್ಲಿ ಅವು ನಿಧಾನಗತಿಯಲ್ಲಿ ಚಲಿಸುತ್ತವೆ. ಕೆಲವೊಮ್ಮೆ ದಿಕ್ಕು ತಪ್ಪಿದಂತೆ ಚಲಿಸುವುದು ಹಾಗೂ ಒಂದೇ ಕಡೆ ನಿಶ್ಚೇಷ್ಟಿತವಾಗಿ ಬಿದ್ದಿರಬಹುದು. ಈ ಎಲ್ಲ ಕಾರಣಗಳಿಂದಾಗಿ ಇದನ್ನು ಮೂರ್ಖತನಕ್ಕೆ ಹೋಲಿಸಿರಬಹುದೆಂಬುದು ಒಂದು ಅಂದಾಜು, ಅಷ್ಟೆ. ಇದಲ್ಲದೆ ಪ್ರಾಚೀನ ಗ್ರೀಕ್ ನೀತಿ ಕಥೆಕಾರ ಈಸೋಪ ತನ್ನ ಕಥೆಗಳಲ್ಲಿ ಗೂಬೆಯನ್ನು ಬುದ್ಧಿವಂತಯ ಹಾಗೂ ವಿವೇಕಹೀನ-ಹೀಗೆ ಎರಡೂ ರೀತಿಯಲ್ಲಿ ಚಿತ್ರಿಸಿರುವುದು ಕಂಡುಬರುತ್ತದೆ. ಅಲ್ಲದೆ ಶೇಕ್ಸ್ಫೀಯರ್ ಸಹ ತನ್ನ ನಾಟಕಗಳಲ್ಲಿ ಗೂಬೆಯನ್ನು ಮರಣ ಮತ್ತು ಅಶುಭದ ಸಂಕೇತವಾಗಿ ತೋರಿಸಿದ್ದಿದೆ. ಅಲ್ಲದೆ ಅದನ್ನು ಕೆಲಸ ಮಾಡದ ಪಕ್ಷಿ ಎಂದೂ ಕರೆದಿದ್ದಾನೆ ಎನ್ನುತ್ತಾರೆ. ಆದರೆ ಹಿಂದೂ ಪುರಾಣದ ಪ್ರಕಾರ ಗೂಬೆ ಜ್ಞಾನ ಮತ್ತು ವಿವೇಕದ ಪ್ರತೀಕವಾಗಿದೆ. ವೈಜ್ಞಾನಿಕವಾಗಿಯೂ ಗೂಬೆಗಳು ಅತ್ಯಂತ ಬುದ್ಧಿವಂತ ಹಾಗೂ ಶಕ್ತಿಯುತ ಬೇಟೆಗಾರ ಪಕ್ಷಿ. ಅವುಗಳ ಶ್ರವಣಶಕ್ತಿ ಮತ್ತು ದೃಷ್ಟಿ ಸಹ ಅದ್ಭುತವಾಗಿದೆ.
ಅಚ್ಚ ಬಿಳಿಯ ಬಣ್ಣದ ಮೊಟ್ಟೆ!
ಗೂಬೆಗಳು ಮರದ ಪೊಟರೆ, ಪ್ರಪಾತದಂತಹ ಆಳವಾದ ಜಾಗಗಳಲ್ಲಿರುವ ಸಂದುಗಳು, ನೆಲದ ಮೇಲಿರುವ ಆಳವಾದ ಕುಳಿಗಳು ಮುಂತಾದ ಜಾಗಗಳಲ್ಲಿ ಹೆಚ್ಚಾಗಿ ವಾಸ ಮಾಡುತ್ತವೆ. ಕೆಲವು ಸಲ ಗಿಡುಗ ಅಥವಾ ಕಾಗೆಗಳು ತೊರೆಯಲ್ಪಟ್ಟ ಗೂಡುಗಳಲ್ಲೂ ಸಹ ವಾಸಿವುದುಂಟು. ಎಲ್ಲ ಜಾತಿಯ ಗೂಬೆಗಳು ಗುಂಡನೆಯ ಮತ್ತು ಅಚ್ಚ ಬಿಳಿಯ ಬಣ್ಣದ ಮೊಟ್ಟೆಗಳನ್ನಿಡುತ್ತವೆ. ಒಂದು ಸಲಕ್ಕೆ ಒಂದರಿಂದ ಏಳು ಮೊಟ್ಟೆಗಳನ್ನಿಡಬಹುದು. ಕಾವು ಕೊಡುವುದು, ಮರಿಗಳ ಪಾಲನೆಯನ್ನು ಗಂಡು ಮತ್ತು ಹೆಣ್ಣು ಗೂಬೆಗಳೆರಡೂ ನಿರ್ವಸುತ್ತವೆ. ಕೆಲವು ಪ್ರಭೇದದ ಗೂಬೆಗಳಲಿ ಕಾವು ಕೊಡುವ ಕೆಲಸವನ್ನು ಹೆಣ್ಣು ಗೂಬೆ ಮಾಡಿದರೆ, ಕಾವು ಕೊಡಲು ಕೂತ ಹೆಣ್ಣಿಗೆ ಗಂಡು ಗೂಬೆಗಳು ಆಹಾರವನ್ನು ಒದಗಿಸುತ್ತವೆ.

ಗೂಬೆಗಳ ಮೊಟ್ಟೆಗಳು ಕೆಲವೊಮ್ಮೆ ಇತರ ಪಕ್ಷಿಗಳಿಗೆ ಆಹಾರವಾಗುವುದುಂಟು. ಕಾಗೆಗಳು ಮತ್ತು ಕಾಡುಕೋಳಿಗಳು ಗೂಬೆಗಳ ಗೂಡುಗಳ ಮೇಲೆ ದಾಳಿ ಮಾಡಿ ಮೊಟ್ಟೆಗಳನ್ನು ತಿನ್ನುವುದುಂಟು. ಅಷ್ಟಲ್ಲದೆ ದೊಡ್ಡ ಹದ್ದುಗಳು, ಗಿಡುಗಗಳೂ ಸಹ ಗೂಬೆಗಳ ಗೂಡುಗಳನ್ನು ದೋಚುವುದುಂಟು. ಒಮ್ಮೊಮ್ಮೆ ಗೂಬೆಯ ಮೊಟ್ಟೆ ಹಾವುಗಳಿಗೂ ಆಹಾರವಾಗುವುದುಂಟು. ನರಿ, ಕಾಡುನಾಯಿ, ಮುಂಗುಸಿ, ನವಿಲುಗಳು, ಕೋತಿ, ಅಳಿಸು ಹೀಗೆ ಕೆಲವು ಪ್ರಾಣಿಗಳೂ ಸಹ ಗೂಬೆಯ ಮೊಟ್ಟೆಗಳನ್ನು ಕದ್ದು ತಿನ್ನುವ ಹವ್ಯಾಸ ಬೆಳೆಸಿಕೊಂಡಿವೆ. ಹಾಗಾದರೆ ಮಾನವರೂ ಸಹ ಗೂಬೆಯ ಮೊಟ್ಟೆಗಳನ್ನು ತಿನ್ನಬಹುದೇ ಎಂಬ ಪ್ರಶ್ನೆ ಏಳುವುದು ಸಹಜ. ಇಲ್ಲ. ಏಕೆಂದರೆ ಭಾರತ ಸಹಿತ ವಿಶ್ವದ ಬಹುತೇಕ ದೇಶಗಳಲ್ಲಿ ಗೂಬೆಗಳು ಸಂರಕ್ಷಿತ ಪ್ರಾಣಿಗಳಾಗಿವೆ. ಅವುಗಳ ಮೊಟ್ಟೆಗಳನ್ನು ಸಂಗ್ರಹಿಸುವುದು, ವ್ಯಾಪಾರ ಮಾಡುವುದು ಅಥವಾ ತಿನ್ನುವುದು ಕಾನೂನು ಪ್ರಕಾರ ದಂಡನೀಯ ಅಪರಾಧವಾಗಿದೆ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಗೂಬೆಗಳ ಪ್ರಭೇದಗಳು ಅಳಿವಿನಂಚಿನಲ್ಲಿವೆ. ಆದಕಾರಣ ಗೂಬೆಗಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವೆಂದರೂ ತಪ್ಪಾಗಲಾರದು.