ಆಷಾಡ ಮಾಸ ಬಂದಿತವ್ವ
ಅಣ್ಣ ಬರಲಿಲ್ಲ ಕರಿಯಾಕ…
ಸುವ್ವಲಾಲೀ ಸುವ್ವಾಲಿ…
ಈ ಹಾಡನ್ನು ಕೇಳುವಾಗ ಆಷಾಢ ತಿಂಗಳು ಪ್ರಾರಂಭವಾಯಿತು. ಅಣ್ಣ ತವರು ಮನೆಗೆ ಕರೆಯಲು ಬರಲೇ ಇಲ್ಲ ಎಂದು ಬಾಗಿಲಲ್ಲಿ ಕುಳಿತು ಅಣ್ಣನ ದಾರಿ ಕಾಯುತ್ತಿರುವ ತಂಗಿಯ ಚಿತ್ರ ಕಣ್ಣೆದುರು ಬಂದರೆ ಅಚ್ಚರಿಯೇನಿಲ್ಲ. ಯಾಕೆ ಹೀಗೆ ತಂಗಿ ಕಾಯಬೇಕು. ಅಷ್ಟಕ್ಕೂ ಹೊಸದಾಗಿ ಮದುವೆಯಾದ ದಂಪತಿಗಳು ಆಷಾಢ ಮಾಸದಲ್ಲಿ ಏಕೆ ಬೇರೆಬೇರೆಯಾಗಿರಬೇಕು. ಅದಕ್ಕೂ ಒಂದು ಕಾರಣವಿದೆ. ಈ ಅವಧಿಯಲ್ಲಿ ಹೆಣ್ಣು ಗರ್ಭ ತಳೆದರೆ ಆಕೆ ಚೈತ್ರ ಮಾಸದಲ್ಲಿ ಅಂದರೆ ಬೇಸಿಗೆ ಕಾಲದಲ್ಲಿ ಮಗುವಿಗೆ ಜನ್ಮ ನೀಡುತ್ತಾಳೆ. ಸುಡುಬಿಸಿಲ ಬೇಗೆಯಿಂದಾಗಿ ತಾಯಿ-ಮಗುವಿಗೆ ಕಷ್ಟವಾಗಬಹುದು ಎಂಬುದು ಒಂದು ಕಾರಣ. ಇದಲ್ಲದೆ ತವರಿಗೆ ಕರೆದುಕೊಂಡು ಹೋಗುವುದರ ಹಿಂದೆ ಇನ್ನೊಂದು ಕಾರಣವೂ ಇದೆ ಎನ್ನುತ್ತಾರೆ ಹಿರಿಯರು. ಅದೆಂದರೆ ಈ ಸಮಯದಲ್ಲಿ ಅತ್ತೆ-ಸೊಸೆಯನ್ನು ಒಂದೇ ಮನೆಯಲ್ಲಿ ಇರುವುದು ನಿಷೇಧ ಎಂದು ಕೆಲವು ಕಡೆಗಳಲ್ಲಿ ವಾಡಿಕೆಯಲ್ಲಿದೆ. ಆಷಾಢದ ಸಮಯದಲ್ಲಿ ಮಳೆ ಹೆಚ್ಚು ಬೀಳುವುದರಿಂದ ಹೊಲಗದ್ದೆಗಳಲ್ಲಿ ಮತ್ತು ಮನೆಯಲ್ಲಿ ಕೆಲಸಗಳು ಹೆಚ್ಚಿರುತ್ತವೆ. ಅತ್ತೆಯಾದವಳು ಸೊಸೆಗೆ ಹೆಚ್ಚಿಗೆ ಕೆಲಸ ನೀಡಿ ಒತ್ತಡ ತರಬಹುದು ಎಂಬುದು ಸಹ ಅಣ್ಣ, ತಂಗಿಯನ್ನು ತವರು ಮನೆಗೆ ಕರೆದುಕೊಂಡು ಹೋಗಲು ಇರುವ ಒಂದು ಕಾರಣ ಎಂಬ ನಂಬಿಕೆಯೂ ಇದೆ.
ಅಶುಭ ಮಾಸ
ಅದೇನೇ ಇರಲಿ. ಆಷಾಢ ಎಂಬುದು ಅಶುಭ ಮಾಸ ಎಂಬ ನಂಬಿಕೆ ಹಿಂದಿನಿಂದಲೂ ಇದೆ. ಈ ಸಮಯದಲ್ಲಿ ಶುಭಕಾರ್ಯಗಳು ನಡೆಯುವುದು ಕಡಿಮೆ. ಆಷಾಢ ಮಾಸ ಪ್ರಾರಂಭವಾದ ಶುಕ್ಲಪಕ್ಷದ ಹನ್ನೊಂದನೇ ದಿನ ಅಂದರೆ ಏಕಾದಶಿಯಂದು ವಿಷ್ಣುವು ದೈವಿಕ ನಿದ್ರೆಗೆ ಜಾರುತ್ತಾನೆ ಎಂದು ನಂಬಲಾಗಿದೆ. ಈ ಕಾರಣಕ್ಕಾಗಿ ಈ ದಿನ
ವನ್ನು ‘ದೈವಶಯನಿ ಏಕಾದಶಿ’ ಎಂದು ಕರೆಯುವರು. ಹೀಗೆ ನಿದ್ರೆಗೆ ಜಾರಿದ ವಿಷ್ಣುವು ಕಾರ್ತಿಕ ಮಾಸದ ಏಕಾದಶಿಯಂದು ಎಚ್ಚರಗೊಳ್ಳುತ್ತಾನೆ. ಈ ದಿನವನ್ನು ಪ್ರಬೋಧಿನಿ ಏಕಾದಶಿ ಎನ್ನುತ್ತಾರೆ. ಹೀಗೆ ದೈವಶಯನಿ ಏಕಾದಶಿಯಿಂದ ಪ್ರಬೋಧಿನಿ ಏಕಾದಶಿವರೆಗಿನ ನಾಲ್ಕು ತಿಂಗಳ ಕಾಲವನ್ನು ಚಾತುರ್ಮಾಸ ಕರೆಯುತ್ತೇವೆ. ಭಗವಾನ್ ವಿಷ್ಣುವು ವಿಶ್ರಾಂತಿ ತೆಗೆದುಕೊಳ್ಳುವ ಕಾಲದಲ್ಲಿ ಪ್ರವಾಹ, ಅತಿವೃಷ್ಟಿ, ರೋಗರುಜಿನಗಳು ಹೀಗೆ ಪ್ರಕೃತಿ ವಿಕೋಪಗಳು ಹೆಚ್ಚಾಗಿರುತ್ತವೆ. ಆದರೆ ಪ್ರಕೃತಿಯಲ್ಲಿ ಒಂದು ವಿಚಿತ್ರ ನಡೆಯುತ್ತದೆ. ಈ ಸಮಯದಲ್ಲಿ ಕಾಡು ತರಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಿಗುತ್ತವೆ. ಇದು ಪ್ರಕೃತಿ ನಮ್ಮನ್ನು ರೋಗ ರುಜಿನಗಳಿಂದ ರಕ್ಷಿಸುವುದಕ್ಕಾಗಿ ನೀಡುವ ಕೊಡುಗೆ ಎನ್ನಬಹುದು. ಹೀಗೆ ಕೇವಲ ಆಷಾಢ ಏಕಾದಶಿಯಂದು ಭಾರತದ ಕೆಲವು ಕಡೆ ಹಸಿರು ಬಣ್ಣದ, ಗುಂಡಗಿನ ಒಂದು ಹಣ್ಣು ಮಾರುಕಟ್ಟೆ ಪ್ರವೇಶಿಸುತ್ತದೆ. ಇದು ಕೇವಲ ಹಣ್ಣಲ್ಲ, ಮಳೆಗಾಲದಲ್ಲಿ ಕಾಡುವ ರೋಗ-ರುಜಿನಗಳಿಂದ ರಕ್ಷಿಸಿಕೊಳ್ಳಲು ಸಿಕ್ಕ ಅಮೃತಫಲ ಅನ್ನಬಹುದು.



ಅರೇ ಇದೇನಿದು? ಆಷಾಢ ಏಕಾದಶಿಯಂದು ಮಾತ್ರ ಸಿಗುವ ಹಣ್ಣು ಯಾವುದೆಂದು ಯೋಚಿಸುತ್ತಿದ್ದೀರಾ? ಅದೇ ಗೋವಿಂದಫಲ ಅಥವಾ ಅತುಂಡಿ ಕಾಯಿ. ಮಹಾರಾಷ್ಟ್ರದ ಕೆಲವು ಹಳ್ಳಿಗಳಲ್ಲಿ ಈ ಹಣ್ಣನ್ನು ಮೊದಲು ವಿಠೋಭ ಅಥವಾ ವಿಷ್ಣುವಿಗೆ ಅರ್ಪಿಸಿ ನಂತರ ಸೇವಿಸುವ ಪರಿಪಾಠವಿದೆ. ಈ ಕಾರಣಕ್ಕಾಗಿ ಇದಕ್ಕೆ ಗೋವಿಂದ ಫಲ್ ಎನ್ನುವ ಹೆಸರು ಬಂದಿದೆಯೆನ್ನಬಹುದು. ಅಲ್ಲದೆ ಈ ಹಣ್ಣನು ಒಂದು ಸಲ ತಿಂದರೆ ಮಳೆಗಾಲ ಪೂರ್ತಿ ರೋಗಗಳಿಂದ ದೂರವಿಡುತ್ತದೆ ಎಂಬ ನಂಬಿಕೆಯೂ ಇದೆ. ಈಗ ಇದರ ಬಗ್ಗೆ ಸ್ವಲ್ಪ ವಿವರವಾಗಿ ತಿಳಿಯುವ ಅಲ್ಲವೇ?
ಇದರ ವೈಜ್ಞಾನಿಕ ಹೆಸರು (Capparis zeylanica) ಕ್ಯಾಪ್ಪರಿಸ್ ಝೆಲಾನಿಕಾ. ಇದು ಕ್ಯಾಪ್ರೇಸಿಯಾ (Capparaceae) ಕುಟುಂಬಕ್ಕೆ ಸೇರಿದೆ. ಕ್ಯಾಪ್ರೇಸಿಯಾ ಕುಟುಂಬದಲ್ಲಿ ಅನೇಕ ರೀತಿಯ ಸಸ್ಯಗಳಿವೆ. ಹೆಚ್ಚಾಗಿ ಒಂದನ್ನೊಂದು ಹೋಲುತ್ತವೆ. ಈ ಕ್ಯಾಪ್ರೇಸಿಯಾ ಕುಟುಂಬದಲ್ಲಿ ಸುಮಾರು ಏಳು ನೂರು ಪ್ರಬೇಧದ ಸಸ್ಯಗಳಿವೆ ಎಂದು ನಂಬಲಾಗಿದೆ. ಈ ಕ್ಯಾಪ್ಪರಿಸ್ ಝೆಲಾನಿಕಾ ಸಸ್ಯವನ್ನು ಸಿನೋನ್ ಕೇಪರ್ ಅಥವಾ ಇಂಡಿಯನ್ ಕೇಪರ್ ಎಂಬ ಹೆಸರಿನಿಂದಲೂ ಗುರುತಿಸುತ್ತಾರೆ. ಇಂಡಿಯನ್ ಕೇಪರ್ ಎಂಬ ಹೆಸರೇ ಸಾಕು, ಈ ಗಿಡ ಭಾರತ ಮೂಲದ್ದು ಎಂದು ತಿಳಿದುಕೊಳ್ಳಲು. ಕನ್ನಡದಲ್ಲಿ ಮುಳ್ಳು ಕತ್ತರಿ ಗಿಡ ಎಂಬ ಹೆಸರಿದೆ. ಈ ಮುಳ್ಳು ಕತ್ತರಿ ಹೆಚ್ಚಾಗಿ ಬೆಟ್ಟಗುಡ್ಡಗಳಲ್ಲಿ ಕಂಡು ಬರುತ್ತದೆ. ಪಾಳುಬಿದ್ದ ಜಾಗ, ಕಲ್ಲು ಬಂಡೆಯ ಸಂದುಗಳು ಹಾಗೂ ರಸ್ತೆಯ ಅಕ್ಕಪಕ್ಕದಲ್ಲಿಯೂ ಕೆಲವೊಮ್ಮೆ ಕಂಡು ಬರುತ್ತದೆ. ಇದೊಂದು ಬಳ್ಳಿಯ ಜಾತಿಗೆ ಸೇರಿದ ಸಸ್ಯ. ಈ ಕಾರಣದಿಂದಾಗಿ ತಮ್ಮ ಸುತ್ತಮುತ್ತ ಇರುವ ಚಿಕ್ಕಪುಟ್ಟ ಗಿಡ ಅಥವಾ ಪೊದೆಗಳನ್ನು ಆವರಿಸಿಕೊಂಡು ಬಿಡುತ್ತವೆ. ಸಾಮಾನ್ಯವಾಗಿ ರೈತರು ತಮ್ಮ ಜಮೀನಿನಲ್ಲಿ ಎಲ್ಲಿಯಾದರೂ ಕಂಡು ಬಂದರೆ ಕಿತ್ತೆಸೆ ಯುತ್ತಾರೆ. ಅವರ ದೃಷ್ಟಿಯಲ್ಲಿ ಇದೊಂದು ಕಳೆ ಗಿಡ. ಜಮೀನನ್ನು ಹಾಳುಮಾಡುತ್ತದೆ ಎಂಬ ಆತಂಕ. ಆದರೆ ನಿಜಕ್ಕಾದರೆ ಇದೊಂದು ಅದ್ಭುತ ಔಷಧೀಯ ಗುಣಗಳಿಂದ ಕೂಡಿದ ಗಿಡ. ಈ ಗಿಡದ ಎಲ್ಲ ಭಾಗಗಳೂ ಸಹ ಉಪಯುಕ್ತವಾದವೇ ಆಗಿವೆ.


ಮುಳ್ಳು ಕತ್ತರಿ ಗಿಡದ ಮೂಲ ಭಾರತವೇ ಆದರೂ ಬರ್ಮಾ, ಶ್ರೀಲಂಕಾ, ಇಂಡೋನೇಷಿಯಾ, ಮಲೇಷಿಯಾ, ಫಿಲಿಪೈನ್ಸ್‌ಗಳಲ್ಲೂ ಕಂಡು ಬರುತ್ತದೆ. ಸಾಮಾನ್ಯವಾಗಿ ಈ ಸಸ್ಯವು ಎರಡರಿಂದ ಐದು ಮೀಟರ್ ಉದ್ದವಾಗಿದ್ದು, ಕೆಲವೊಮ್ಮೆ ಅಕ್ಕಪಕ್ಕದ ಗಿಡಗಳನ್ನು ಅವಲಂಬಿಸಿ ಹತ್ತು ಮೀಟರ್‌ವರೆಗೂ ಹರಡಬಲ್ಲವು. ಗಿಡಗಳು ಬೆಳೆದಂತೆಲ್ಲ ಕಾಂಡಗಳು ದಪ್ಪವಾಗುತ್ತ ಹೋಗುತ್ತವೆ. ಎಲೆಗಳು ಹಸಿರಾಗಿದ್ದು ಮೂರಿಂದ ಆರು ಸೆಂಟಿಮೀಟರ್ ಉದ್ದವಾಗಿರುತ್ತವೆ. ಕಾಂಡದ ಮೇಲೆಲ್ಲ ಮುಳ್ಳುಗಳಿರುತ್ತವೆ. ಹೂವುಗಳು ಮಾರ್ಚ್‌ನಿಂದ ಅರಳಲು ಪ್ರಾರಂಭಿಸಿ ಏಪ್ರಿಲ್‌ವರೆಗೆ ಇರುತ್ತವೆ. ಹೂವುಗಳು ಮೂರರಿಂದ ನಾಲ್ಕು ಪುಟ್ಟಪುಟ್ಟ ದಳಗಳಿಂದ ಕೂಡಿದ್ದು, ಮೂವತ್ತರಿಂದ ಮೂವತ್ತೈದು ಕೇಸರಗಳನ್ನು ಹೊಂದಿರುತ್ತದೆ. ಸುಮಾರು ಮೂರು ಸೆಂಟಿಮೀಟರ್ ಉದ್ದದ ಗುಲಾಬಿ ಕೇಸರಗಳು ದಿನಕಳೆದಂತೆ ಕಡುಕೆಂಪು ಬಣ್ಣಕ್ಕೆ ತಿರುಗುತ್ತವೆ. ದಿನಕಳೆದಂತೆ ಹೂವಿನ ಕೇಸರಗಳೆಲ್ಲ ಉದುರಿ, ನಂತರ ಕಾಯಿಗಳಾಗಿ ಮಾರ್ಪಾಡು ಹೊಂದುತ್ತದೆ. ಮೂರರಿಂದ ನಾಲ್ಕು ಸೆಂಟಿಮೀಟರ್ ಗಾತ್ರದ ಹಸಿರು ಕಾಯಿಗಳು ಬೆಳೆದಂತೆಲ್ಲ ರಕ್ತ ಕೆಂಪು ಬಣ್ಣ ಪಡೆದುಕೊಳ್ಳುತ್ತದೆ. ಬಿಳಿಯ ಜೆಲ್ಲಿಯಂತಿರುವ ಹಣ್ಣಿನ ಮಧ್ಯಭಾಗದಲ್ಲಿ ಕಪ್ಪುಕಪ್ಪು ಬೀಜಗಳು ಕಂಡು ಬರುತ್ತವೆ. ಹೂವು ಸುವಾಸನೆಯಿಂದ ಕೂಡಿದ್ದರೂ, ಹಣ್ಣು ಮಾತ್ರ ಸ್ವಲ್ಪ ಕಹಿಯಾಗಿರುತ್ತದೆ.
ಗೋವಿಂದ ಫಲ
ಈ ಗಿಡವನ್ನು ಹಲವಾರು ಹೆಸರುಗಳಿಂದ ಕರೆಯುತ್ತಾರೆ. ಸಂಸ್ಕೃತದಲ್ಲಿ ತಪಸಪ್ರಿಯ, ವ್ಯಾಘ್ರನಖಿ, ಕರಂಭ ಎಂಬ ಹೆಸರಿದೆ. ಕನ್ನಡದಲ್ಲಿ ಆತುಂಡಿ ಕಾಯಿ, ಅಂತುಂಡಿ ಕಾಯಿ, ಅತೇಂದ್ರಿ, ಗೋವಿಂದ ಫಲ, ಮುಳ್ಳು ಕತ್ತರಿ ಎಂಬ ಹೆಸರುಗಳಿಂದ ಗುರುತಿಸುತ್ತಾರೆ. ಬೆಂಗಾಲಿಯಲ್ಲಿ ಆಸ್ರಿಯಾ, ಹಿಂಗ್ಶ್ರಾ, ಕಾಕ್ಡೋನಿ, ಕಲಿಕೇರಾ, ಕಿಜರ್, ರೋಹಿಣಿ, ಕಲೋಕೆರಾ ಎಂದರೆ ಹಿಂದಿ ಅರ್ದಂಡ, ಗೋವಿಂದ್ಫಲ್, ಬೌರಿ, ಗಿಟೋರಾನ್, ಗೋವಿಂದಫಲ್, ಹಿನ್ಸ್, ಹಿಸ್, ಜಿರಿಸ್, ಖಲೀಸ್ ಎನ್ನುತ್ತಾರೆ. ಮರಾಠಿಯಲ್ಲಿ ಅರ್ದಂಡಿ, ತಾರಾಮತಿ, ವಾಗತಿ, ವಾಗಂತಿ, ವಾಗ್, ವಾಗತಿ, ಗೋವಿಂದಿ, ಕಡೂವಾಘಾಂಟಿ, ವಾಘಾಂಟಿ ಹೀಗೆ ಅನೇಕ ಹೆಸರಿನಿಂದ ಕರೆಯುತ್ತಾರೆ. ಗುಜರಾತಿ: ಗೋವಿಂದಕಲ್, ಕಖಬಿಲದೋ, ಕರ್ರಲ್ಲೂರ, ಕೊಂಕಣಿ: ವಾಘಾಂಟಿ, ಮಲಯಾಳಂ: ಕಾರ್ತೊಟ್ಟಿ, ಗಿಟೊರನ್, ಎಲಿಪ್ಪಯಾರ್, ನೇಪಾಳಿ: ಬನ್ ಕೆರಾ, ಒರಿಯಾ: ಒಸರ, ಪಂಜಾಬಿ: ಗರ್ನಾ, ಕರ್ವಿಲ, ಕರ್ವಿಲುನ್, ರಾಜಸ್ಥಾನಿ: ಗೀತೊರಂಜ್, ತಮಿಳು: ಅದೊಂಡೈ, ತೊಂಡೈ, ಆಟಂಡಯ್, ಆಟಂಡಂ, ಅತಂಡಿ, ಎಕ್ಕತಾರಿ, ಅಟೊಂತೈ, ಕರ್ರೊಟ್ಟಿ, ಸುಡುತೊರಟ್ಟಿ, ಸುಡುತೊರಟಿ, ಮೊರಂಡನ್ ಹೀಗೆ ಅನೇಕ ಹೆಸರುಗಳು ನಮ್ಮ ಭಾರತದಲ್ಲಿ ಚಾಲ್ತಿಯಲ್ಲಿವೆ.
ಬರ್ಮಾದಲ್ಲಿ ನಹ್-ಮಾ-ನೀ-ತನ್ಯೆತ್, ಕಾಂಬೋಡಿಯಾದಲ್ಲಿ ರೂಕ್ ಸಾ, ಇಂಡೋನೇಷ್ಯಾದಲ್ಲಿ ಮೆಲಾಡಾ, ಚೀನಾದಲ್ಲಿ ನಿಯು ಯಾನ್ ಜಿಂಗ್, ಚುಯಿ ಗುವೋ ಟೆಂಗ್, ಇಷ್ಟೇ ಅಲ್ಲದೆ ಕಾರ್ವಿಲಾ, ಬಾನ್ ಕೇರಾ, ಕಾರ್ವಿಲುನ್, ಸಿಲೋನ್ ಕೇಪರ್, ಗರ್ನಾ, ಕಾಟು ತೊಟ್ಟಿ, ಗಿಟೋರಾನ್, ಎಲಿಪ್ಪಯಾರ್ ಎಂಬೆಲ್ಲ ಹೆಸರುಗಳು ಸಹ ಈ ಸಸ್ಯಕ್ಕಿದೆ.
ಔಷಧಿಯಾಗಿ ಗೋವಿಂದ ಫಲ
ಅನೇಕ ರೋಗಗಳನ್ನು ಗುಣಪಡಿಸುವ ಶಕ್ತಿ ಮುಳ್ಳು ಕತ್ತರಿ ಗಿಡಕ್ಕಿದೆ. ಹೂವು, ಹಣ್ಣು, ಬೇರು, ತೊಗಟೆ, ಬೀಜ, ಎಲೆ ಹೀಗೆ ಸಸ್ಯದ ಎಲ್ಲ ಭಾಗಗಳನ್ನೂ ಔಷಧಿಯಾಗಿ ಉಪಯೋಗಿಸುತ್ತೇವೆ. ಬೇರು ಮತ್ತು ಎಲೆಯನ್ನು ಹೆಚ್ಚಾಗಿ ಭಾರತೀಯ ಸಾಂಪ್ರದಾಯಿ ಔಷಧೀಯ ಪದ್ಧತಿಗಳಲ್ಲಿ ಬಳಸುತ್ತಾರೆ. ತಲೆನೋವಿನ ಬಾಧೆಯಿಂದ ಬಳಲುತ್ತಿರುವವರು ಕತ್ತರಿ ಗಿಡದ ನಾಲ್ಕಾರು ಎಲೆಯನ್ನು ಉಪ್ಪಿನೊಂದಿಗೆ ಚೆನ್ನಾಗಿ ತಿಕ್ಕಿ ಹಣೆಗೆ ಹಚ್ಚಿಕೊಂಡರೆ ತಲೆನೋವು ಶಮನವಾಗುತ್ತದೆ. ಇದರ ಹಣ್ಣನ್ನು ತಿನ್ನುವುದರಿಂದ ಹೊಟ್ಟೆನೋವು ಕಡಿಮೆಯಾಗುತ್ತದೆ. ಹಸಿವಾಗದಿರುವುದು, ಊಟ ಸೇರದಿರುವ ಸಮಸ್ಯೆಯಿರುವವರು ಬೇರಿನ ಕಷಾಯವನ್ನು ಕುಡಿಯುವುದರಿಂದ ತೊಂದರೆಗೆ ಪರಿಹಾರ ಸಿಗುತ್ತದೆ. ತೊಗಟೆಯ ಕಷಾಯ ಕೂಡ ಹಸಿವನ್ನು ಹೆಚ್ಚಿಸುತ್ತದೆ. ತಿಂದ ಆಹಾರ ಪದೇಪದೇ ವಾಂತಿಯಾಗುತ್ತಿದ್ದರೂ ಸಹಾ ಈ ಕಷಾಯ ಕುಡಿಯಬಹುದು. ಹಾವಿನ ಕಡಿತಕ್ಕೆ ಪ್ರತಿವಿಷವಾಗಿ ಇದರ ಹಣ್ಣುಗಳನ್ನು ಬಳಸಲಾಗುತ್ತದೆ. ಎರಡು ಮೂರು ಹನಿ ತಾಜಾ ಹಣ್ಣಿನ ರಸವನ್ನು ಕಿವಿಯೊಳಗೆ ಬಿಡುವುದರಿಂದ ಕಿವಿ ನೋವು ಶನಮವಾಗುತ್ತದೆ. ಅಲ್ಲದೆ ಹಣ್ಣು ನಿದ್ರಾಹೀನತೆಯಿಂದ ಬಳಲುತ್ತಿರುವವರಿಗೆ ವರದಾನವಾಗಿದೆ.
ಇಷ್ಟಲ್ಲದೆ ಕತ್ತರಿಗಿಡದ ಕಾಯಿಗಳು ತರಕಾರಿಯಾಗಿ ಬಳಕೆ ಯಾಗುತ್ತದೆ. ಹಣ್ಣಿನ ಬೀಜಗಳನ್ನು ಹುರಿದು ತಿನ್ನಲು ಬಲು ರುಚಿ. ಈ ಕಾಯಿಗಳನ್ನು ಉಪ್ಪಿನ ಕಾಯಿ ತಯಾರಿಕೆಯಲ್ಲೂ ಬಳಸಲಾಗುತ್ತದೆ.
ಇಷ್ಟೆಲ್ಲ ಉಪಯೋಗವಿರುವ ಈ ಗಿಡವೀಗ ಅಳಿವಿನಂಚಿನಲ್ಲಿದೆ. ಈ ಗಿಡದ ಬಗ್ಗೆ ರೈತರಿಗೆ ಮಾಹಿತಿ ನೀಡಿ, ಗಿಡಗಳನ್ನು ಬೆಳೆಸುವ ಕೆಲಸ ತುರ್ತಾಗಿ ಆಗಬೇಕಿದೆ. ಇಲ್ಲದೇ ಹೋದರೆ ಒಂದು ಅಪರೂಪದ ಗಿಡದ ಸಂತತಿ ಮುಂದಿನ ಪೀಳಿಗೆಗೆ ಕಾಣಸಿಗಲಾರದು.