ಪ್ರಕೃತಿಯೆಂಬುದು ವಿಸ್ಮಯದ ಆಡುಂಬೋಲ. ಈ ವ್ಯವಸ್ಥೆಯಲ್ಲಿ ಪ್ರತಿಯೊಂದು ಜೀವಿಯೂ ಒಂದು ವಿಶಿಷ್ಟ ಪಾತ್ರ ವಹಿಸುತ್ತದೆ. ಇವತ್ತು ಅಂತಹುದೇ ಒಂದು ಶ್ರಮಿಜೀವಿಯ ಬಗ್ಗೆ ತಿಳಿಯೋಣವೇ? ನೀವು ಚಿಕ್ಕವರಿದ್ದಾಗ ಸಗಣಿಯುಂಡೆಯೊಂದು ತನ್ನಿಂತಾನೇ ಚಲಿಸುವುದನ್ನು ನೋಡಿರಬಹುದು. ಹತ್ತಿರ ಹೋಗಿ ನೋಡಿದರೆ ಅಲ್ಲಿ ಸಗಣಿ ಉಂಡೆಯನ್ನು ನೂಕುತ್ತಿರುವ ಸಣ್ಣದೊಂದು ಕೀಟವನ್ನು ಕಾಣಬಹುದು. ನಿಜ ಹೇಳಬೇಕೆಂದರೆ ಇದು ಒಂದು ಕೀಟ ಮಾತ್ರವಲ್ಲ, ಬದಲಾಗಿ ಪರಿಸರ ಸಂರಕ್ಷಕ, ಭೂಮಿಯ ಆರೋಗ್ಯವನ್ನು ಕಾಪಾಡುವ ಸೈನಿಕ ಎಂದೇ ಹೇಳಬಹುದು. ಇದರ ಹೆಸರೇ ಸಗಣಿ ಜೀರುಂಡೆ.

Thank you for reading this post, don't forget to subscribe!

ಸಗಣಿ ಜೀರುಂಡೆಗಳ ದೇಹ ರಚನೆ

ಸಗಣಿ ಜೀರುಂಡೆಗಳು ಸಾಮಾನ್ಯವಾಗಿ ದುಂಡನೆಯ ಆಕಾರವನ್ನು ಹೊಂದಿರುತ್ತವೆ. ಅವು ಸುಮಾರು ೫ರಿಂದ ೩೦ ಮಿಲಿಮೀಟರ್ ಉದ್ದವಾಗಿರುತ್ತವೆ. ಹಾಗೆಯೆ ೨ರಿಂದ ೧೦೦ ಗ್ರಾಂಗಳವರೆಗೆ ತೂಗಬಲ್ಲವು. ಇವು ಮೂರು ಜೊತೆ ಬಲವಾದ ಕಾಲುಗಳನ್ನು ಹೊಂದಿರುತ್ತವೆ. ಪಾದಗಳು ಮಣ್ಣು ಅಗೆದು ಸುರಂಗ ಕೊರೆಯಲು ಮತ್ತು ತಮಗಿಂತ ಭಾರವಾದ ಸಗಣಿ ಉಂಡೆಗಳನ್ನು ಉರುಳಿಸಲು ಅನುಕೂಲವಾಗುವಂತೆ ವಿನ್ಯಾಸಗೊಂಡಿವೆ. ಶರೀರ ಗಟ್ಟಿಯಾದ ಎಕ್ಸೋಸ್ಕೆಲಿಟನ್ (ಬಾಹ್ಯ ಅಸ್ಥಿಪಂಜರ)ವನ್ನು ಹೊಂದಿವೆ. ಈ ಕಾರಣದಿಂದ ಸಾಮಾನ್ಯವಾಗಿ ಎಂತಹ ಹೊಡೆತವನ್ನಾದರೂ ತಡೆದುಕೊಳ್ಳಬಲ್ಲವು. ಶತ್ರುವಿನ ಆಕ್ರಮಣದಿಂದ ಸಲೀಸಾಗಿ ಪಾರಾಗಬಲ್ಲವು.

ಇವುಗಳ ಕಪ್ಪು ಮಿಶ್ರಿತ ಗಾಢ ಬಣ್ಣ ಹೊಂದಿರುತ್ತವೆ. ಕೆಲವು ಹಸಿರು ಅಥವಾ ತಾಮ್ರ ಕೆಂಪು ಬಣ್ಣದಲ್ಲಿ ಗೋಚರಿಸುತ್ತವೆ. ಕೆಲವು ಜಾತಿಯ ಗಂಡು ಜೀರುಂಡೆಗಳಿಗೆ ಕೊಂಬು (Horns) ಹೊಂದಿರುತ್ತವೆ. ಈ ಕೊಂಬುಗಳು ಸಗಣಿ ಉಂಡೆಗಳನ್ನು ಉರುಳಿಸಲು ಹಾಗು ಶತ್ರುವಿನೊಡನೆ ಹೊರಾಡಲು ಉಪಯೋಗವಾಗುತ್ತವೆ. ಅಲ್ಲದೆ ಹೆಣ್ಣು ಜೀರುಂಡೆಗಳನ್ನು ತನ್ನತ್ತ ಸೆಳೆದುಕೊಳ್ಳುವುದರಲ್ಲೂ ಈ ಕೊಂಬುಗಳ ಪಾತ್ರ ಮುಖ್ಯವಾಗಿವೆ. ಅಲ್ಲದೆ ಕೆಲವು ಜೀರುಂಡೆಗಳಲ್ಲಿ ಕೊಂಬುಗಳ ಬದಲಿಗೆ ವಿಶೇಷ ರೀತಿಯ ಸ್ಪರ್ಶಕ ಅಥವಾ Antennae ಅನ್ನು ಹೊಂದಿರುತ್ತವೆ. ಈ ಸ್ಪರ್ಶಕಗಳು ಸಗಣಿಯ ವಾಸನೆಯನ್ನು ಗ್ರಹಿಸಿ, ಜೀರುಂಡೆಯ ಗಮನ ಸೆಳೆಯುತ್ತದೆ.

ಮಹಾ ಶಕ್ತಿಶಾಲಿ ಸಗಣಿ ಜೀರುಂಡೆ

ಸಗಣಿ ಜೀರುಂಡೆಗಳ ಗಾತ್ರವನ್ನು ನೋಡಿ ಅವುಗಳ ಸಾಮರ್ಥ್ಯ ಅಳೆಯುವುದು ತಪ್ಪಾಗುತ್ತದೆ. ತಮ್ಮ ಗಾತ್ರಕ್ಕಿಂತ ಹಲವು ಪಟ್ಟು ಸಾಮರ್ಥ್ಯ ಮತ್ತು ಶಕ್ತಿಯನ್ನು ಈ ಜೀರುಂಡೆಗಳು ಹೊಂದಿರುತ್ತವೆ. ಇವು ತಮ್ಮ ದೇಹದ ತೂಕಕ್ಕಿಂತ ಸುಮಾರು ೧೧೪೧ ಪಟ್ಟು ಭಾರವಾದ ಸಗಣಿ ಉಂಡೆಯನ್ನು ತಮ್ಮ ಗಮ್ಯಸ್ಥಾನದತ್ತ ನೂಕಬಲ್ಲವು. ಅಂದರೆ ಒಬ್ಬ ಮನುಷ್ಯ ಸರಾಸರಿ ೮೦ ಟನ್ ಭಾರವನ್ನು ನೂಕುವುದಕ್ಕೆ ಸಮನಾದುದು ಈ ಸಗಣಿ ಜೀರುಂಡೆಗಳ ಶಕ್ತಿ. ಈ ಕಾರಣಕ್ಕಾಗಿಯೇ ಪ್ರಕೃತಿಯಲ್ಲಿನ ಶಕ್ತಿಶಾಲಿ ಜೀವಿಗಳಲ್ಲಿ ಒಂದೆಂದು ಗುರುತಿಸಲ್ಪಟ್ಟಿದೆ.

ಸಗಣಿ ಜೀರುಂಡೆಯೆಂಬ ನ್ಯಾವಿಗೇಷನ್ ಎಕ್ಸ್‌ಪರ್ಟ್!

ಸಗಣಿ ಜೀರುಂಡೆ

ಈ ಜೀರುಂಡೆಗಳು ಸಗಣಿಯ ಉಂಡೆಯನ್ನು ಉರುಳಿಸಿಕೊಂಡು ಎಲ್ಲಿಯವರೆಗೆ ಹೋಗುತ್ತವೆ ಎಂಬುದು ಗೊಂದಲಮಯವಾಗಿದೆಯಲ್ಲವೇ? ಹೌದು, ಹೀಗೆ ಸಗಣಿ ಉಂಡೆಯನ್ನು ಸರಿಯಾದ ಜಾಗಕ್ಕೆ ತೆಗೆದುಕೊಂಡು ಹೋಗುವ ಜಾಣ್ಮೆ ಈ ಜೀರುಂಡೆಗಳಿಗಿದೆ. ಸಾಮಾನ್ಯವಾಗಿ ಈ ಸಗಣಿ ಉಂಡೆಯನ್ನು ತಾವು ಕೊರೆದ ಸುರಂಗದೆಡೆ ಉರುಳಿಸಿಕೊಂಡು ಹೋಗುತ್ತವೆ. ಆದರೆ ಈ ಸುರಂಗವನ್ನು ಹೇಗೆ ಗುರುತಿಸುತ್ತವೆ ಎಂಬುದು ಸೋಜಿಗದ ಸಂಗತಿಯೇ ಸರಿ. ಇವುಗಳಲ್ಲಿ ಒಂದು ವಿಶೇಷವಾದ ಶಕ್ತಿಯಿದೆ. ಆಕಾಶದಲ್ಲಿನ ಸೂರ್ಯ, ಚಂದ್ರ ಮತ್ತು ನಕ್ಷತ್ರಗಳ ಬೆಳಕಿನ ಗಮನದಲ್ಲಿಟ್ಟುಕೊಂಡು ಗೂಗಲ್ ಮ್ಯಾಪ್‌ಗಿಂತ ನಿಖರವಾಗ ನ್ಯಾವಿಗೇಟ್ ಮಾಡುವ ಸಾಮರ್ಥ್ಯವಿದೆ. ಇದನ್ನು ’ಸಕ್ರಬಸ್ ಸ್ಯಾಟರ್ (Scarabaeus satyrus) ಎಂದು ಕರೆಯುತ್ತಾರೆ. ಈ ಸಾಮರ್ಥ್ಯವನ್ನು ಸಮರ್ಥವಾಗಿ ಬಳಸುವ ಜೀರುಂಡೆ ಎಂದರೆ ಅದು ಆಫ್ರಿಕನ್ ಸಗಣಿ ಜೀರುಂಡೆ. ಇದು ಚಂದ್ರನ ಬೆಳಕಿಲ್ಲದಿದ್ದರೂ ಸಹ ನಕ್ಷತ್ರಗಳನ್ನು ಗಮನಿಸಿ ತನ್ನ ಗಮ್ಯಸ್ಥಾನ ತಲುಪುವ ಚತುರತೆಯನ್ನು ಹೊಂದಿದೆ. ಈ ಶಕ್ತಿಯಿಂದಲೇ ಜೀರುಂಡೆಗಳು ತಮ್ಮ ಶತ್ರುಗಳ ಕಾಟದಿಂದ ಪಾರಾಗಿ ಸಗಣಿ ಉಂಡೆಯನ್ನು ನಿರ್ದಿಷ್ಟವಾದ ಸುರಂಗವನ್ನು ತಲುಪುತ್ತವೆ.

ಆಹಾರ ಮತ್ತು ಸೇವನೆಯ ವಿಧಾನ?

ಹೆಸರೇ ಸೂಚಿಸುವಂತೆ ಸಗಣಿ ಜೀರುಂಡೆಗಳ ಪ್ರಾಥಮಿಕ ಆಹಾರ ಸಗಣಿ. ಇವು ದನ-ಕರುಗಳ ಸಗಣಯನ್ನಷ್ಟೇ ಸೇವಿಸುವುದಿಲ್ಲ. ಬದಲಿಗೆ ಜಿರಾಫೆ, ಜೀಬ್ರಾ, ಕಾಡೆಮ್ಮೆ, ಆನೆ, ಕುರಿ, ಕಾಡುನಾಯಿಗಳು, ಗೋರಿಲ್ಲಾ ಮತ್ತು ಒಂಟೆ ಈ ಎಲ್ಲ ಪ್ರಾಣಿಗಳ ಮಲವನ್ನು ಆಹಾರವಾಗಿ ಬಳಸುತ್ತವೆ. ಆದರೆ ಇವುಗಳು ಸಾಮಾನ್ಯವಾಗಿ ಸಸ್ಯಾಹಾರಿ ಪ್ರಾಣಿಗಳ ಮಲವನ್ನಷ್ಟೇ ಬಳಸುತ್ತವೆ. ಏಕೆಂದರೆ ಸಸ್ಯಾಹಾರಿ ಪ್ರಾಣಿಗಳ ಮಲವು ಅಗತ್ಯವಾದ ಪೋಷಕಾಂಶಗಳು ಮತ್ತು ತೇವಾಂಶವನ್ನು ಹೊಂದಿರುತ್ತವೆ. ಮಾಂಸಾಹಾರಿ ಪ್ರಾಣಿಗಳ ಮಲವು ಜೀರುಂಡೆಗಳಿಗೆ ಹಾನಿಕಾರಕವೆನ್ನಬಹುದು. ಆದರೆ ಸಸ್ಯಾಹಾರಿ ಪ್ರಾಣಿಗಳ ಮಲದಲ್ಲಿರುವ ಜೀವಾಣುಗಳು ಹಾನಿಕಾರಕವಲ್ಲದ ಕಾರಣ ತೊಂದರೆಯೇನು ಆಗದು. ಸಗಣಿಯನ್ನು ಕಂಡಾಗ ಈ ಜೀರುಂಡೆಗಳು ಅದರ ತುಂಡುಗಳನ್ನು ಕತ್ತರಿಸಿ, ತಮ್ಮ ಮುಂಗಾಲುಗಳಿಂದ ಅದನ್ನು ಗೋಲಿಯಾಕಾರದಲ್ಲಿ ಸುತ್ತುತ್ತವೆ. ಈ ಮೊದಲೇ ಹೇಳಿದ ಹಾಗೆ ಈ ಸಗಣಿ ಗೋಲಿಗಳು ಅವುಗಳ ದೇಹದ ಭಾರಕ್ಕಿಂತ ಹೆಚ್ಚಾಗಿರುತ್ತವೆ. ಗೋಲಿಯನ್ನು ತಯಾರಿಸಿದ ನಂತರ ಅದನ್ನು ಹಿಂಗಾಲುಗಳಿಂದ ಉರುಳಿಸಿಕೊಂಡು ತಮ್ಮ ಗಮ್ಯ ಸ್ಥಾನದತ್ತು ಹೋಗುತ್ತವೆ. ಈ ಸಗಣಿ ಉಂಡೆಯನ್ನು ಸುರಂಗದಲ್ಲಿಟ್ಟು ಆಹಾರದ ಅಭಾವ ಉಂಟಾದಾಗ ಬಳಸುತ್ತವೆ. ಹೆಣ್ಣು ಜೀರುಂಡೆಗಳು ಮೊಟ್ಟೆಯನ್ನಿಡಲೂ ಸಹ ಈ ಸಗಣಿ ಉಂಡೆಯನ್ನೇ ಅವಲಂಬಿಸಿವೆ.

ನಿಸರ್ಗದ ಸ್ವಚ್ಛತಾ ಕರ್ಮಚಾರಿಗಳು!

ಪರಿಸರ ಸಮತೋಲಿತವಾಗಿರಲು ಈ ಸಗಣಿ ಜೀರುಂಡೆಗಳ ಪಾತ್ರ ಅಮೂಲ್ಯವಾದದ್ದು. ಇವುಗಳನ್ನು ಸ್ವಚ್ಛತಾ ಕರ್ಮಚಾರಿಗಳೆಂದರೂ ತಪ್ಪಲ್ಲ. ಇವು ಹಸು, ಎಮ್ಮೆ ಮುಂತಾದ ಜಾನುವಾರುಗಳಿಂದ ಸಗಣಿಯನ್ನು ಮಣ್ಣಿನೊಳಗೆ ಹೂತಿಡುವ ಮೂಲಕ ಭೂಮಿಯನ್ನು ಸ್ವಚ್ಛವಾಗಿಡುತ್ತವೆ. ಅಲ್ಲದೆ ಹೂತಿಟ್ಟ ಸಗಣಿಯಿಂದ ಮಣ್ಣಿಗೆ ನೈಟ್ರೋಜನ್ ಸೇರಿ, ಮಣ್ಣು ಫಲವತ್ತಾಗುತ್ತವೆ. ಇದು ಸಸ್ಯಗಳ ಬೆಳವಣಿಗೆಗೆ ಅತ್ಯವಶ್ಯಕ. ಅಲ್ಲದೆ ಪ್ರಾಣಿಗಳ ಸಗಣಿ ಅಥವಾ ಮಲದಲ್ಲಿ ಬೆಳೆಯುವ ಹುಳು ಮತ್ತು ಬ್ಯಾಕ್ಟಿರೀಯಾದಂತಹ ರೋಗಕಾರಕ ಜೀವಿಗಳನ್ನು ನಿಯಂತ್ರಿಸುತ್ತವೆಂದರೆ ತಪ್ಪಲ್ಲ. ಇದರಿಂದ ಮನುಷ್ಯ ಹಾಗೂ ಜಾನುವಾರುಗಳನ್ನು ರೋಗಗಳಿಂದ ಕಾಪಾಡುತ್ತವೆ. ಇಷ್ಟೇ ಅಲ್ಲದ ಸಸ್ಯದ ಬೀಜಗಳು ಈ ಸಗಣಿ ಉಂಡೆಗೆ ಅಂಟಿಕೊಳ್ಳುತ್ತವೆ. ಈ ಸಗಣಿ ಉಂಡೆಯನ್ನು ಮಣ್ಣಿನಲ್ಲಿ ಹೂತಿಡುವುದರಿಂದ ಬೀಜಗಳು ಮೊಳಕೆಯೊಡೆದು ಸಸ್ಯಗಳು ಬೆಳೆಯಲು ಸಹಾಯವಾಗುತ್ತದೆ. ಹಾಗೆಯೇ ಸಗಣಿ ಉಂಡೆಗಳು ಮಣ್ಣಿನಲ್ಲಿ ಬೆರೆತು, ಸಸ್ಯಗಳಿಗೆ ಗೊಬ್ಬರವನ್ನು ಒದಗಿಸುತ್ತವೆ.

ಪೂಜೆ ಮತ್ತು ಸಾಂಸ್ಕೃತಿಕ ಮಹತ್ವ!

ಈ ಸಗಣಿ ಜೀರುಂಡೆಗಳನ್ನು ’ಮಲವನ್ನು ತಿಂದು ಬದುಕುವ ಜೀವಿಗಳು’ ಎಂದು ನಿರ್ಲಕ್ಷಿಸುವಂತಿಲ್ಲ. ಈ ಸಗಣಿ ಜೀರುಂಡೆಗಳು ಸಂಸ್ಕೃತಿ ಮತ್ತು ಪುರಾಣಗಳಲ್ಲಿ ಮಹತ್ವದ ಸ್ಥಾನವನ್ನು ಪಡೆದಿವೆ. ಪ್ರಾಚೀನ ಈಜಿಪ್ಟ್ ನಾಗರಿಕತೆಯಲ್ಲಿ ಸಗಣಿ ಜೀರುಂಡೆಯನ್ನು ಸ್ಕಾರಬ್ ಎಂದು ಕರೆಯುತ್ತಿದ್ದರು. ಈ ಜೀರುಂಡೆ ಒಂದು ಪವಿತ್ರ ಚಿಹ್ನೆಯಾಗಿತ್ತು. ಸೃಷ್ಟಿ, ಪುನರುಜ್ಜೀವನದ ಪ್ರತೀಕವಾಗಿತ್ತು. ಅಲ್ಲದೆ ಈಜಿಪ್ಟಿಯನ್ನರ ದೇವತೆ ಖೆಪ್ರಿ (Khepri)ಯ ಇನ್ನೊಂದು ರೂಪ ಎಂದೇ ನಂಬುತ್ತಿದ್ದರು. ಸೂರ್ಯ ಎಂದರೆ, ಬೆಳಕಿನ ಗೋಳವನ್ನು ಭೂಮಿಯ ನೂಕುವ ಒಂದು ಶಕ್ತಿ. ಇದೇ ರೀತಿ ಸಗಣಿ ಉಂಡೆಯನ್ನು ನೂಕುವ ಜೀರುಂಡೆಯನ್ನು ಸೂರ್ಯನ ಇನ್ನೊಂದು ರೂಪ ಎಂದೇ ನಂಬುತ್ತಿದ್ದರು. ಅಲ್ಲದೆ ಜೀರುಂಡೆಯ ಮರಿ ಸಗಣಿಯ ಗೋಲಿಯೊಳಗಿನಿಂದ ಹೊರಬರುವುದು ಮರಣದಿಂದ ಪುನರುಜ್ಜೀವನ ಪಡೆಯುವ ಶಕ್ತಿಯ ಪ್ರತೀಕ ಎಂದೇ ನಂಬಿದ್ದರು. ಮರಣೋತ್ತರದ ಜೀವನದಲ್ಲಿ ಈಜಿಪ್ಟಿಯನ್ನರಿಗೆ ಅಪಾರವಾದ ನಂಬಿಕೆಯಿತ್ತು. ಈ ಸಗಣಿ ಜೀರುಂಡೆಗಳನ್ನು ಹೋಲುವ ತಾವೀಜು (Amulets)ಗಳನ್ನು ಮರಣ ಹೊಂದಿದ ರಾಜ ಅಥವಾ ರಾಣಿಯ ಹೃದಯದ ಮೇಲೆ ಇಟ್ಟು ’ಮಮ್ಮಿ’ ಮಾಡಲಾಗುತ್ತಿತ್ತು. ಈ ತಾವೀಜುಗಳು ಮರಣದ ನಂತರದ ಪ್ರವಾಸದಲ್ಲಿ ರಕ್ಷಣೆ ನೀಡುತ್ತದೆಯೆಂದು ಈಜಿಪ್ಟಿಯನ್ನರು ನಂಬುತ್ತಿದ್ದರು. ಅಲ್ಲದೆ ಈ ತಾವೀಜುಗಳು ಪಾಪ-ಪುಣ್ಯಗಳನ್ನು ಅಳತೆ ಮಾಡುವ ಸಮಯದಲ್ಲಿ ಹೃದಯವು ಸತ್ತ ವ್ಯಕ್ತಿಯ ವಿರುದ್ಧ ಸಾಕ್ಷ್ಯ ನುಡಿಯದಂತೆ ತಡೆಯುತ್ತವೆ ಎಂದೂ ನಬಲಾಗಿತ್ತು. ಅಷ್ಟೇ ಅಲ್ಲದೆ ಈ ತಾವೀಜುಗಳನ್ನು ಧರಿಸುವುದರಿಂದ ಅದೃಷ್ಟ ಬರುವುದೆಂದೂ ನಂಬುತ್ತಿದ್ದರು.
ಈ ಸಗಣಿ ಜೀರುಂಡೆಗಳ ಬಗ್ಗೆ ಈಜಿಪ್ಟಿಯನ್ನರ ತರಹ ನಂಬಿಕೆ ಹಾಗೂ ಪೂಜಿಸುವುದು ಬೇರೆಡೆ ಕಂಡು ಬರುವುದು ಕಡಿಮೆ. ಆದರೆ ಇತರ ದೇಶ ಅಥವಾ ಪ್ರ್ಯಾಂತಗಳಲ್ಲಿಯೂ ಸಹ ಆದಿವಾಸಿಗಳ ಜೀವನದಲ್ಲಿ ಸಗಣಿ ಜೀರುಂಡೆಗೆ ಮಹತ್ವ ಕೊಡುವುದು ಕಂಡು ಬಂದಿದೆ. ಅನೇಕ ಆಫ್ರಿಕನ್ ಮತ್ತು ಆಸ್ಟ್ರೇಲಿಯನ್ ಆದಿವಾಸಿಗಳ ಸಂಸ್ಕೃತಿಗಳಲ್ಲಿ ಕಂಡು ಬರುವ ನೀತಿ ಕಥೆಗಳು ಮತ್ತು ಪುರಾಣಗಳಲ್ಲಿ ಸಗಣಿ ಜೀರುಂಡೆಯು ಜಗತ್ತನ್ನು ಸೃಷ್ಟಿಸಿಸುವುದರಲ್ಲಿ ಮಹತ್ತರವಾದ ಪಾತ್ರ ಹೊಂದಿದೆ ಎಂದು ಉಲ್ಲೇಖವಿದೆ. ಅಲ್ಲದೆ ಈ ಜೀರುಂಡೆಯನ್ನು ತಮ್ಮ ಜೀವನಕ್ಕೆ ದಾರಿ ತೋರುವ ’ಬುದ್ಧಿವಂತ ಮಾರ್ಗದರ್ಶಕ’ ಎಂದು ಈ ಆದಿವಾಸಿಗಳು ಅಂದುಕೊಂಡಿದ್ದರು.

amulets of egypt

ಆಹಾರ ಮತ್ತು ಔಷಧಿಯಾಗಿ ಬಳಕೆ!

ಹೌದು, ಪ್ರಪಂಚದ ಜೆಕವಯ ಕೆಲವು ಭಾಗಗಳಲ್ಲಿ ಈ ಸಗಣಿ ಜೀರುಂಡೆಗಳನ್ನು ಆಹಾರ ಮತ್ತು ಔಷಧಿಯಾಗಿ ಬಳಸಲಾಗುತ್ತದೆ. ಇದು ನಂಬಲು ಕಷ್ಟವಾದರೂ ಸತ್ಯ. ಈ ಸಗಣಿ ಜೀರುಂಡೆಯ ಮರಿ ಹಾಗೂ ಪ್ರೌಢ ಜೀರುಂಡೆಗಳು ಪ್ರೋಟಿನ್ ಮತ್ತು ಕೊಬ್ಬಿನ ಉತ್ತಮ ಮೂಲವಾಗಿದೆ. ಈ ಕಾರಣಕ್ಕಾಗಿ ಮೆಕ್ಸಿಕೋ, ಥೈಲ್ಯಾಂಡ್, ಆಫ್ರಿಕಾದ ಹಾಗೂ ಲ್ಯಾಟಿನ್ ಅಮೇರಿಕದ ಕೆಲವು ಭಾಗಗಳಲ್ಲಿ ಸಗಣಿ ಜೀರುಂಡೆಗಳು ಆಹಾರದ ಭಾಗವಾಗಿ ಉಪಯೋಗಿಸುತ್ತಾರೆ. ಅವುಗಳನ್ನು ಸಾಮಾನ್ಯವಾಗಿ ಬೇಯಿಸಿ ಅಥವಾ ಎಣ್ಣೆಯಲ್ಲಿ ಹುರಿದು ತಿನ್ನಲಾಗುತ್ತದೆ.

ಏಷ್ಯಾ ಮತ್ತು ಆಫ್ರಿಕಾದಾದ್ಯಂತ ಸಾಂಪ್ರದಾಯಿಕ ಔಷಧದಲ್ಲಿ ವಿವಿಧ ರೋಗಗಳಿಗೆ ಚಿಕಿತ್ಸೆ ನೀಡಲು ಈ ಸಗಣಿ ಜೀರುಂಡೆಯನ್ನು ಬಳಸಲಾಗುತ್ತಿತ್ತು. ಆದರೆ ಇವುಗಳನ್ನು ಔಷಧೀಯಾಗಿ ಬಳಸುವುದು ವೈಜ್ಞಾನಿಕವಾಗಿ ಪರಿಣಾಮಕಾರಿ ಎಂದು ಸಾಬೀತಾಗಿಲ್ಲ. ಚೀನಾ, ವಿಯೆಟ್ನಾಂ ಮತ್ತು ಆಫ್ರಿಕಾದ ಕೆಲವು ಭಾಗಗಳಲಿ ಸಗಣಿ ಜೀರುಂಡೆಯನ್ನು ಶಕ್ತಿವರ್ಧಕ ಮತ್ತು ಕಾಮೋದ್ದೀಪಕವಾಗಿ ಬಳಸಲಾಗುತ್ತದೆ ಎಂದು ಪ್ರತೀತಿ. ಅದರ ಸಗಣಿ ಗೋಲಿಯನ್ನು ನೂಕುವ ಶಕ್ತಿಯು ಮಾನವರಲ್ಲಿ ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂಬ ನಂಬಿಕೆ ಈ ಭಾಗಗಳಲ್ಲಿದೆ. ಅಲ್ಲದೆ ಜ್ವರ, ಉಬ್ಬಸ, ಹಾವುಗಳ ಕಡಿತ, ಹೊಟ್ಟೆನೋವು, ಅಜೀರ್ಣ ಅಲ್ಲದೆ ಹಲ್ಲುನೋವುಗಳ ಸಮಸ್ಯೆಗಳಿಗೆ ಈ ಸಗಣಿ ಜೀರುಂಡೆಗಳನ್ನು ವಿವಿಧ ರೀತಿಯಲ್ಲಿ ಬಳಸಲಾಗುತ್ತದೆ ಎಂದು ವಿವಿಧ ಮೂಲಗಳು ತಿಳಿಸುತ್ತವೆ. ಆದರೆ ಈ ಔಷಧೀಯ ಬಳಕೆಗಳು ನೂರಾರು ವರ್ಷಗಳ ಸಾಂಪ್ರದಾಯಿಕ ನಂಬಿಕೆ ಮೆಲೆ ಆಧಾರಿತವಾಗಿವೆ ಅಷ್ಟೇ. ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲದ ಕಾರಣ ಆಧುನಿಕ ಚಿಕಿತ್ಸೆಯ ಬಳಸಲಾಗುವುದಿಲ್ಲ. ಯಾವುದೇ ರೋಗ ಲಕ್ಷಣಗಳಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ವಿನಾಶದತ್ತ ಜೀರುಂಡೆಗಳ ಸಂತತಿ!

ಸಾಮಾನ್ಯವಾಗಿ ಡಂಗ್ ಬೀಟಲ್ (Dung beetle) ಎಂದು ಕರೆಯಲ್ಪಡುವ ಸಗಣಿ ಹುಳುಗಳನ್ನು ವಿವಿಧ ಪ್ರದೇಶಗಳಲ್ಲಿ ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ. ಹಿಂದಿಯಲ್ಲಿ ಭೇಂಸಾ ಕಾ ಕೀಡಾ, ಗೋಬ್ರೈಲಾ ಎಂದು ಕರೆಯುತ್ತಾರೆ. ತೆಲುಗುವಿನಲ್ಲಿ ಸಗಣಿ ಬೀಟ್ಲ, ಪೇಡ ಪುರುಗು ಎಂಬ ಹೆಸರಿದೆ. ತಮಿಳಿನಲ್ಲಿ ಸಾಣಿಪ್ ಪೂಚ್ಚಿ, ಮಲಯಾಳಂನಲ್ಲಿ ಚಾಣಿಚ್ಚಿರಟ್ಟ, ಮರಾಠಿಯಲ್ಲಿ ಶೆಂಚಾ ಭೋಮಡಾ, ಬೆಂಗಾಲಿಯಲ್ಲಿ ಗೋಬೊರ್ ಪೋಕಾ, ಗುಜರಾತಿಯಲ್ಲಿ ಶೆಂಟ್ನೋ ಭಮರೋ, ಓಡಿಯಾ ಭಾಷೆಯಲ್ಲಿ ಗೋಬರೋ ಪೋಕೊ, ಪಂಜಾಬಿಯಲ್ಲಿ ಗೋಹೆ ದಾ ಕೀಡಾ, ಆಸ್ಸಾಮಿನಲ್ಲಿ ಗೋಬೊರ್ ಪೋಕಾ-ಹೀಗೆ ವಿವಿಧ ಪ್ರದೇಶಗಳಲ್ಲಿ ವಿವಿಧ ಹೆಸರುಗಳಿಂದ ಕರೆಸಿಕೊಳ್ಳುವ ಸಗಣಿ ಜೀರುಂಡೆಗಳು ಸ್ಕಾರಬ್ ಬೀಟಲ್ (Scarab Beetle) ವೈಜ್ಞಾನಿಕ ಹೆಸರುಳ್ಳ ಕುಟುಂಬಕ್ಕೆ ಸೇರಿವೆ. ಈ ಜೀರುಂಡೆಗಳ ಕುಟುಂಬಕ್ಕೆ ಸೇರಿದ ಹಲವಾರು ಉಪಜಾತಿಗಳಿವೆ. ಸುಮಾರು ಜೀರುಂಡೆಗಳಲ್ಲಿ ನಿಖರವಾಗಿ ಅಲ್ಲದಿದ್ದರೂ, ಸುಮಾರು ೧.೫ ಮಿಲಿಯನ್‌ನಿಂದ ೨.೧ ಮಿಲಿಯನ್ ಪ್ರಭೇದಗಳಿವೆ ಎಂದು ಅಂದಾಜಿಸಲಾಗಿದೆ. ಈ ಜೀರುಂಡೆಗಳು ಕೀಟ ಪ್ರಪಂಚದಲ್ಲೇ ಅತಿ ಹೆಚ್ಚಿನ ಸಂಖ್ಯೆಯಲ್ಲಿರುವ ಕೀಟಗಳಾಗಿವೆ ಎಂದು ಊಹಿಸಲಾಗಿದೆ. ಜೀರುಂಡೆಗಳ ಪ್ರಭೇದಗಳಲ್ಲಿ ಕೆಲವು ವಿಷಕಾರಿಯಾಗಿವೆ. ಈ ಕಾರಣದಿಂದಾಗಿ ಜೀರುಂಡೆಗಳು ಕಂಡು ಬಂದಲ್ಲಿ ಕೀಟನಾಶಕಗಳನ್ನು ಉಪಯೋಗಿಸುವುದು ಮಾಮೂಲು. ಹೀಗಾಗಿ ಪ್ರಕೃತಿಯಲ್ಲಿ ಈ ಜೀರುಂಡೆಗಳ ಸಂತತಿ ವಿನಾಶದತ್ತ ಸಾಗುತ್ತಿದೆ ಎನ್ನಬಹುದು.