ಸಂಪಿಗೆ ಮರದ ಹಸಿರೆಲೆ ನಡುವೆ ಕೋಗಿಲೆ ಹಾಡಿತ್ತು .
ಚಿಕ್ಕವ್ವೋ ಚಿಕ್ಕವ್ವೊ ಎನ್ನುತ ತನ್ನಯ ಗೆಳೆಯರ ಕರೆದಿತ್ತು
ಅದ ಕೇಳಿ ನಾ ಮೈಮರೆತೆ ಸ್ವರವೊಂದ ಆಗಲೆ ಕಲಿತೇ
ಹಾಡಿದೆ ಈ ಕವಿತೆ.. ನಾ ಹಾಡಿದೆ ಈ ಕವಿತೆ..
ಈ ಹಾಡನ್ನು ಎಲ್ಲರೂ ಕೇಳೀರುತ್ತೀರಿ. ಹೌದು ಸಂಪಿಗೆ ಹೂವು ಎಲ್ಲರಿಗೂ ಪ್ರಿಯವಾದ ಹೂವು. ಅದರಲ್ಲೂ ಹೆಣ್ಣುಮಕ್ಕಳಿಗಂತೂ ಈ ಹೂವಿನ ಮೇಲೆ ವಿಶಿಷ್ಟ ಪ್ರೇಮವಿದೆ. ಕಾರಣ ಇದರ ಸುವಾಸನೆ. ಸುವಾಸನೆಯೇ ಇದರ ಮುಖ್ಯ ಆಕರ್ಷಣೆ ಎಂದರೂ ತಪ್ಪಾಗಲಾರದು. ತೆಳುಹಳದಿ ಬಣ್ಣದ ಈ ಹೂವು ಸಾಮಾನ್ಯವಾಗಿ ಉದ್ಯಾನಗಳಲ್ಲಿ, ಸಸ್ಯೋದ್ಯಾನಗಳಲ್ಲಿ, ದೇವಸ್ಥಾನದ ಅಂಗಳದಲ್ಲಿ ಹಾಗೂ ಕೆಲವರ ಮನೆಗಳ ಅಂಗಳದಲ್ಲಿ ಅಥವಾ ಹಿತ್ತಲಲ್ಲಿ ಕಾಣಸಿಗುತ್ತದೆ. ಸಂಸ್ಕೃತದಲ್ಲಿ ಚಂಪಕ ಸುವರ್ಣ, ತೆಲುಗಿನಲ್ಲಿ ಚಂಪಕಮು, ಇಂಗ್ಲಿಷ್ನಲ್ಲಿ ಗೋಲ್ಡನ್ ಚಂಪಕ್, ಹಿಂದಿಯಲ್ಲಿ ಚಂಪಾ, ಮಣಿಪುರಿಯಲ್ಲಿ ಲೀಹಾವೊ, ತಮಿಳಿನಲ್ಲಿ ಸಂಬಗಮ್, ಕೊಂಕಣಿಯಲ್ಲಿ ಪುಡ್ಚಂಪೋ ಎಂದು ಕರೆಸಿಕೊಳ್ಳುವ ಈ ಹೂವಿನ ಸಸ್ಯನಾಮ ಮೈಕೇಲಿಯ ಚಂಪಕ. ಇದನ್ನು ಮ್ಯಾಗ್ನೋಲಿಯಾ ಚಂಪಕ ಎಂದೂ ಕರೆಯುತ್ತಾರೆ. ಇದು ಮ್ಯಾಗ್ನೋಲಿಯಾಸಿ ಕುಟುಂಬಕ್ಕೆ ಸೇರಿದ್ದು.

ಸಂಪಿಗೆ ಮರದದ ಬಗ್ಗೆ ನಿಮಗೆಷ್ಟು ಗೊತ್ತು?
ಸಂಪಿಗೆ ಮರ ಸುಮಾರು ೩೦ರಿಂದ ೫೦ ಮೀಟರ್ ಎತ್ತರದ ವರೆಗೂ ಬೆಳೆಯುತ್ತದೆ. ಎಲೆಗಳು ಉದ್ದವಾಗಿದ್ದು ಮಾವಿನ ಎಲೆಗಳಂತೆಯೇ ಕಾಣುತ್ತದೆ. ಎಲೆಗಳು ಸುಮಾರು ೧೦ರಿಂದ ೧೫ ಸೆಂಟಿಮೀಟರ್ ಉದ್ದ ಹಾಗೂ ೪ರಿಂದ ೧೧ ಸೆಂಟೀಮೀಟರ್ ಅಗಲವಾಗಿದ್ದು ಸುರುಳಿಯಾಕಾರದಲ್ಲಿ ಜೋಡಿಸಲ್ಪಟ್ಟಿರುತ್ತವೆ. ಹೂವುಗಳು ಸುಮಾರು ೨ರಿಂದ ೫ ಸೆಂಟಿಮೀಟರ್ ಉದ್ದವಿದ್ದು ಸುಮಾರು ೧೫ರಿಂದ ೨೦ ಹಾಲೆಗಳನ್ನು ಒಳಗೊಂಡಿರುತ್ತವೆ. ಮಧ್ಯದಲ್ಲಿ ಚಿಕ್ಕ ಚಿಕ್ಕ ಬೀಜಗಳಂತಹ ಆಕೃತಿಯನ್ನು ಹೊಂದಿರುತ್ತದೆ. ಅವು ಮುಂದೆ ಹಣ್ಣುಗಳಾಗಿ ಪರಿವರ್ತಿತವಾಗುತ್ತವೆ. ಮರಗಳು ಹೆಚ್ಚಾಗಿ ಉಷ್ಣ ಹಾಗೂ ಸಮಶೀತೋಷ್ಣವಲಯದಲ್ಲಿ ಬೆಳೆಯುತ್ತದೆ.
ಸಾಮಾನ್ಯವಾಗಿ ಈ ಸಂಪಿಗೆಯ ಹೂವು ಪ್ರತಿಯೊಬ್ಬರಿಗೂ ಪರಿ ಚಯವಾಗಿರುತ್ತದೆ, ಕೆಲವರು ಈ ಹೂವನ್ನು ಮನೆಯ ಮುಂದೆ ಹಾಗು ಕೈ ತೋಟಗಳಲ್ಲಿ ಬೆಳೆಸುತ್ತಾರೆ ಇನ್ನು ಕೆಲವರು ಈ ಹೂವನ್ನು ಬೆಟ್ಟಗಳಲ್ಲಿ ಹಾಗು ದೇವಾಲಯದ ಮುಂದೆ ಕಾಣಬಹುದು. ಸಾಮಾನ್ಯ ವಾಗಿ ಮನುಷ್ಯನಿಗೆ ಕಾಡುವಂತ ಹಲವು ಸಮಸ್ಯೆಗಳಲ್ಲಿ ಕೆಲವೊಂದನ್ನು ದೈಹಿಕ ಸಮಸ್ಯೆಗಳನ್ನು ನಿವಾರಿಸುವ ಔಷಧಿ ಮನೆಮದ್ದು ಈ ಸಂಪಿಗೆ ಗಿಡದಲ್ಲಿದೆ.
ಸಂಪಿಗೆ ಹೂವು ಎರಡು ಬಗೆಯಲ್ಲಿ ಇರುತ್ತದೆ ಒಂದು ಕೆಂಡ ಸಂಪಿಗೆ ಹಾಗು ಬಿಳಿ ಸಂಪಿಗೆ ಎಂಬುದಾಗಿ, ಸಂಪಿಗೆ ಹೂವು ಮತ್ತು ಮರದ ಚಕ್ಕೆ ಔಷಧೀಯ ಗುಣಗಳನ್ನು ಹೊಂದಿದೆ ಎಂಬುದಾಗಿ ಆಯುರ್ವೇದದಿಂದ ತಿಳಿಯಲಾಗುತ್ತದೆ. ಇದರ ಔಷಧೀಯ ಗುಣಗಳು ಅನೇಕವಿವೆ.


ಸಂಪಿಗೆ ಮರದ ಉಪಯೋಗಗಳು…
ಸಂಪಿಗೆ ಮರವನ್ನು ವಿಮಾನ ಹಡಗು ನಿರ್ಮಾಣಕ್ಕೆ, ಆಟದ ಗೊಂಬೆ, ಪೆನ್ಸಿಲ್, ಪ್ಲೈವುಡ್ ಪೀಠೋಪಕರಣಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಇದರ ಬೀಜದಿಂದ ತೈಲವನ್ನು ಉತ್ಪಾದಿಸುತ್ತಾರೆ. ಇದರ ಬೀಜದಿಂದ ಮೇಣವನ್ನೂ ತಯಾರಿಸಲಾಗುತ್ತದೆ. ಸಂಪಿಗೆ ಹೂವಿನ ತೈಲದಲ್ಲಿ ’ಐಸೊಯುಜಿನಾರ್ ಎಂಬ ಅಂಶವಿರುತ್ತದೆ. ಮರದ ತೊಗಟೆಯಲ್ಲಿ ಮೀತೈಲ್ ಆಲ್ಕೋಹಾಲ್, ಟ್ಯಾನಿನ್ ಅಂಶಗಳಿರುತ್ತದೆ. ವಿವಿಧ ರೋಗಗಳಿಗೆ ಇದರ ತೊಗಟೆ, ಹೂವಿನ ಪಕಳೆ, ಬೇರು, ಎಲೆ, ಬೀಜ, ಹಸಿಕಾಯಿಗಳಿಂದ ಒಸರುವ ಹಾಲಿನಿಂದ, ಅಂಟು, ಒಣಗಿದ ಚಕ್ಕೆ ಕಡ್ಡಿಯಿಂದ ಔಷಧಿಯನ್ನು ತಯಾರಿಸುತ್ತಾರೆ.
ಸಂಧಿವಾತವಿದ್ದರೆ, ಒಂದು ಕಪ್ ಹರಳೆಣ್ಣೆಯಲ್ಲಿ ಸಂಪಿಗೆಯ ಐದಾರು ಹೂಗಳನ್ನು ಹಾಕಿ ಬೆಚ್ಚಗೆ ಮಾಡಿ ನೋವಿರುವ ಜಾಗಕ್ಕೆ ಸವರಿದರೆ ನೋವು ನಿವಾರಣೆ ಯಾಗುತ್ತದೆ. ತಲೆಕೂದಲು ಉದುರುತ್ತಿದ್ದರೆ, ಹೊಟ್ಟು ಹೆಚ್ಚಾದರೆ, ನಿಂಬೇ ಹಣ್ಣಿನ ರಸದಲ್ಲಿ ಸಂಪಿಗೆ ಹೂವುಗಳನ್ನು ರಾತ್ರಿ ಪೂರಾ ನೆನೆಹಾಕಿ ಮುಂಜಾನೆ ಹೂಗಳನ್ನು ಹಿಸುಕಿ ತೆಗೆದು ತಲೆಕೂದಲಿನ ಬುಡಕ್ಕೆ ಹಚ್ಚಿ.



ಕಾಲಿನ ಪಾದಗಳು ಉರಿಯಾಗುತ್ತಿದ್ದರೆ ಹಾಗು ಹಿಮ್ಮಡಿ ಒಡೆಯು ತ್ತಿದ್ದರೆ, ಪ್ರತಿ ದಿನ ಸಂಪಿಗೆ ಮರದ ಎಲೆಗಳನ್ನು ಬಿಸಿ ನೀರಲ್ಲಿ ಹಾಕಿ ಆ ನೀರಲ್ಲಿ ಕಾಲಿಟ್ಟುಕೊಳ್ಳಬೇಕು. ನಂತರ ಸಂಪಿಗೆಯ ಮೊಗ್ಗು ಮತ್ತು ಬೀಜವನ್ನು ಅರೆದು ಹಿಮ್ಮಡಿಗೆ ಹಚ್ಚಿದರೆ ಪರಿಹಾರವನ್ನು ಕಾಣಬಹುದು. ಜ್ವರದ ಸಮಸ್ಯೆ ಇದ್ರೆ ಸಂಪಿಗೆ ಮರದ ಚಕ್ಕೆಯನ್ನು ಬಳಸಿ ಕಷಾಯ ಮಾಡಿ ಸೇವಿಸುವುದರಿಂದ ಜ್ವರ ಕಡಿಮೆಯಾಗುತ್ತದೆ, ಅಷ್ಟೇ ಅಲ್ಲದೆ ಹೊಟ್ಟೆ ನೋವು ಕಾಡುತ್ತಿದ್ದರೆ, ಸಂಪಿಗೆ ಮರದ ಎಲೆಗಳ ರಸವನ್ನು ಜೇನುತುಪ್ಪದ ಜೊತೆ ಸೇವನೆ ಮಾಡುವುದರಿಂದ ಹೊಟ್ಟೆ ನೋವು ಕಡಿಮೆಯಾಗುತ್ತದೆ.
ಮೂತ್ರ ಕಟ್ಟುವುದು ಹಾಗು ಮೂತ್ರ ಸಲೀಸಾಗಿ ಹೋಗದೆ ಇದ್ರೆ ಸಂಪಿಗೆಯ ಹೂಗಳನ್ನು ಕುದಿಯುವ ನೀರಿನಲ್ಲಿ ಹಾಕಿ ಮುಚ್ಚಿಡಬೇಕು. ಅದು ಆರಿದ ಬಳಿಕ ಸೇವಿಸುವುದರಿಂದ ಮೂತ್ರ ಸಲೀಸಾಗಿ ಹೋಗುತ್ತದೆ. ಸಂಪಿಗೆ ಮರದ ಚಕ್ಕೆಯ ಕಷಾಯದಿಂದ ಗಾಯವನ್ನು ತೊಳೆದರೆ ಗಾಯಗಳು ಬಹುಬೇಗನೆ ವಾಸಿಯಾಗುತ್ತವೆ.