ಮಂದಾರ ಪುಷ್ಪವು ನೀನು
ಸಿಂಧೂರ ಪ್ರತಿಮೆಯು ನೀನು
ಗಂಧರ್ವ ಗಾನ ವಾಣಿ
ರಾಣಿ ರಾಣಿ ರಾಣಿ ರಾಣಿ
ಎಂದೋ ಮೆಚ್ಚಿದೆ ನಾನು
ನಿನ ಎಂದೋ ಮೆಚ್ಚಿದೆ ನಾನು…
೧೯೮೧ರಲ್ಲಿ ಬಿಡುಗಡೆಯಾದ ಪುಟ್ಟಣ್ಣ ಕಣಗಾಲ್ ನಿರ್ದೇಶನದ ’ರಂಗನಾಯಕಿ’ ಚಿತ್ರದ ಈ ಹಾಡು ಯಾರಿಗೆ ತಾನೆ ಗೊತ್ತಿಲ್ಲ. ವಿಜಯ ನಾರಸಿಂಹರ ಸಾಹಿತ್ಯ, ವಿಜಯಭಾಸ್ಕರ್ ಅವರ ಸ್ವರ ಸಂಯೋಜನೆ, ಪಿ. ಜಯಚಂದ್ರನ್ ಮತ್ತು ಎಸ್.ಪಿ. ಶೈಲಜಾರ ಕಂಠಸಿರಿ-ಹೀಗೆ ದಿಗ್ಗಜರನ್ನೊಳಗೊಂಡ ’ರಂಗನಾಯಕಿ’ ಅಂದಿನ ಸಿನಿರಸಿಕರ ಪಾಲಿಗೆ ಹಬ್ಬದೂಟವನ್ನೇ ಬಡಿಸಿತ್ತು. ’ಆಲೆಮನೆ’ ಚಿತ್ರದ ’ನಮ್ಮೂರ ಮಂದಾರ ಹೂವೆ… ನನ್ನೊಲುಮೆ ಬಾಂದಳದ ಚೆಲುವೆ…’ ಎಂಬ ಹಾಡೂ ಸಹ ಎಂದೆಂದಿಗೂ ಅಮರ.
ಮಹತೀ ಮೇರುನಿಲಯಾ ಮಂದಾರ ಕುಸುಮಪ್ರಿಯಾ
ವಿಷಯ ಅರ್ಥವಾಯಿತಲ್ಲವೇ? ಹೌದು, ಈ ವಾರ ಹುಡುಕಿ ಕೊಂಡು ಹೊರಟಿದ್ದು ಮಂದಾರ ಹೂವನ್ನು… ಲಲಿತಾ ಸಹಸ್ರ ನಾಮದಲ್ಲಿ ’ಮಹತೀ ಮೇರುನಿಲಯಾ ಮಂದಾರ ಕುಸುಮಪ್ರಿಯಾ’, ಕೃಷ್ಣಾಷ್ಟಕದಲ್ಲಿ ‘ಮಂದಾರಗಂಧ ಸಂಯುಕ್ತಂ ಚಾರುಹಾಸಂ ಚತುರ್ಭುಜಂ’ ಎಂಬ ಸಾಲುಗಳೂ ಮಂದಾರ ಪುಷ್ಪದ ಮಹತ್ವ ವವನ್ನು ತಿಳಿಸುತ್ತವೆ. ಅಷ್ಟೇ ಅಲ್ಲ ಶಿವ, ಗಣೇಶ ಹೀಗೆ ಎಲ್ಲ ದೇವತೆಗಳ ಪೂಜೆಯಲ್ಲೂ ಮಂದಾರ ಪುಷ್ಪಕ್ಕೆ ಅಗ್ರಸ್ಥಾನವಿದೆ. ಅಂತೆಯೇ ಇದನ್ನು ದೇವಾನಾಂಪ್ರಿಯ ಎಂದು ಕರೆಯುತ್ತಾರೆ. ಅಂದರೆ ಸರ್ವ ದೇವರುಗಳಿಗೂ ಇಷ್ಟವಾದ ಹೂವು.


ಹಳದಿ ಗಂಟೆಯಾಕಾರದ (yellow bell ) ಹೂವು!
ಮಂದಾರವು ಫ್ಯಾಬಾಸೀ ಕುಟುಂಬಕ್ಕೆ ಸೇರಿದ ಪೊದೆ ಸಸ್ಯವಾಗಿದ್ದು ಗರಿಷ್ಠ ನಾಲ್ಕು ಮೀಟರ್ ಎತ್ತರದವರೆಗೆ ಬೆಳೆಯುತ್ತವೆ. ಕೆಲವೊಮ್ಮೆ ಮರದ ಹಾಗೆ ಬೆಳೆಯುತ್ತವೆ. ಗಿಡಗಳು ಸೂರ್ಯನ ಬೆಳಕಲ್ಲಿ ಚೆನ್ನಾಗಿ ಬೆಳೆಯಬಲ್ಲವು. ತಣ್ಣನೆಯ ವಾತಾವರಣ ಅಥವಾ ಹಿಮ ಬೀಳುವ ಪ್ರದೇಶಗಳಲ್ಲಿ ಬೆಳೆಯಲಾರವು. ಸ್ವಲ್ಪ ಮಟ್ಟಿಗಿನ ನೀರು ಸಾಕಾಗುತ್ತದೆ. ಎಲೆಗಳು ತಿಳಿ ಹಸಿರು ಬಣ್ಣದ್ದಾಗಿದ್ದು ಎರಡು ಅಂಡಾಕಾರದ ಹಾಲೆಗಳಾಗಿ ವಿಂಗಡಿಸಲ್ಪಟ್ಟಿವೆ. ಸಾಮಾನ್ಯವಾಗಿ ಹೂವುಗಳು ಬೇಸಿಗೆಯಲ್ಲಿ ಅಂದರೆ ಡಿಸೆಂಬರ್ನಿಂದ ಮಾರ್ಚ್ವರೆಗೆ ಅರಳುತ್ತವೆ. ಗಿಡದ ತುಂಬಾ ಅರಳುವ ಹೂವುಗಳು ದಟ್ಟ ಹಳದಿ ಬಣ್ಣ ಹೊಂದಿದ್ದು, ದೂರದಿಂದ ನೋಡಿದಾಗ ಗಿಡದಲ್ಲಿ ಹಳದಿ ಗಂಟೆಯನ್ನು ಕಟ್ಟಿದ ಹಾಗೆ ಕಾಣುತ್ತವೆ. ಈ ಕಾರಣದಿಂದ ಇದನ್ನು yellow bell orchid tree ಎಂದು ಕರೆಯುತ್ತಾರೆ. ಹೂವಿನ ಮಧ್ಯಭಾಗದಲ್ಲಿ ಕಪ್ಪು ಬಣ್ಣ ಅಥವಾ ಕೆಲವೊಮ್ಮೆ ಕಂದು ಬಣ್ಣವನ್ನು ಹೊಂದಿರುತ್ತವೆ. ವಿಶೇಷ ಅಂದರೆ ಮಂದಾರ ಹೂವುಗಳು ಹೆಚ್ಚಾಗಿ ನೆಲದ ಕಡೆ ಬಾಗಿದ್ದು ನೋಡಲು ಥೇಟ್ ಗಂಟೆಯ ಹಾಗೆಯೇ ಕಾಣಿಸುತ್ತದೆ. ಮಂದಾರ ಸಸ್ಯ ಅಥವಾ ಹೂವುಗಳು ದಕ್ಷಿಣ ಆಫ್ರಿಕಾ, ಜಿಂಬಾಬ್ವೆ, ಉಷ್ಣವಲಯದ ಆಫ್ರಿಕಾ, ಇಥಿಯೋಪಿಯಾ, ಜಿಂಬಾಬ್ವೆ, ಜಾಂಬಿಯಾ, ಕೀನ್ಯಾ, ಯೆಮೆನ್, ಭಾರತ ಮತ್ತು ಶ್ರೀಲಂಕಾದಲ್ಲಿ ಹೆಚ್ಚಾಗಿ ಕಂಡುಬರುತ್ತದೆ.


ಔಷಧಿಯಾಗಿ ಬಳಕೆ!
ಇನ್ನು ಗಿಡದ ಎಲ್ಲಾ ಭಾಗಗಳೂ ಔಷಧಿಯಾಗಿ ಬಳಕೆಯಾಗುತ್ತವೆ. ಮಂದಾರ ಗಿಡದ ಬೇರುಗಳು ದೊಡ್ಡ ಕರುಳಿಗೆ ಸಂಬಂಧಿಸಿದ ತೊಂದರೆಗಳ ನಿವಾರಣೆಯಲ್ಲಿ ಮುಖ್ಯಪಾತ್ರ ವಹಿಸುತ್ತದೆ. ಹುಣ್ಣು, ಗಾಯ ಮತ್ತು ಇತರ ಚರ್ಮರೋಗಗಳು ಬೇರುಗಳನ್ನು ಅರೆದು ಹಚ್ಚುವುದರಿಂದ ಬೇಗ ವಾಸಿಯಾಗುತ್ತವೆ. ಹೂವುಗಳು ಬೇಧಿ ಮತ್ತು ಅತಿಸಾರ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಅಲ್ಲದೆ ಮಂದಾರ ಬೀಜವು ಕಾಮೋತ್ತೇಜಕವಾಗಿ ಕೆಲಸ ಮಾಡುತ್ತದೆ. ವಿಷಪೂರಿತ ಪ್ರಾಣಿ ಅಥವಾ ಕೀಟಗಳು ಕಚ್ಚಿದಾಗ ಬೀಜವನ್ನು ಅರೆದು ವಿನೇಗರ್ನೊಂದಿಗೆ ಸೇರಿಸಿ ಹಚ್ಚುವುದರಿಂದ ವಿಷದ ಪ್ರಭಾವ ಕಡಿಮೆಯಾಗುತ್ತದೆ. ಬೇರು-ತೊಗಟೆಯ ಕಷಾಯವನ್ನು ಜಂತು ಹುಳಗಳ ತೊಂದರೆ ನಿವಾರಣೆಯಲ್ಲಿ ಬಳಸಲಾಗುತ್ತದೆ. ಗಂಟಲು ನೋವು ನಿವಾರಿಸಲು ತೊಗಟೆಯ ಕಷಾಯವನ್ನು ಗಾರ್ಗಲ್ ಆಗಿ ಬಳಸಬಹುದು. ಇದಲ್ಲದೆ ಮಂದಾರ ಹೂವುಗಳು ಸುವಾಸನಾಭರಿತವಾಗಿರುವುದರಿಂದ ಸುಗಂಧ ದ್ರವ್ಯ ತಯಾರಿಕೆಯಲ್ಲಿ ಬಳಸುತ್ತಾರೆ.