ಔಷಧಿಗಳ ಖಣಜ ಈ ಪಾರಿಜಾತ!

ನೀ ಸಂಜೆ ಹೊರ ಬರಬೇಡ
ಸೂರ್ಯ ಮುಳುಗೋದೇ ಮರೆತೋದ
ನಾ ಬರೆಯೋದೆ ಕಲಿತಿಲ್ಲ
ಕವಿಯೇ ಆದೆ ಕಣೆ ನಿನ್ನಿಂದ…

ಏನು ಕವನ ಬರಿತೀದಿನಿ ಅಂದ್ಕೊಂಡ್ರಾ? ಇಲ್ಲ. ಮತ್ತೇನು? ಗೊತ್ತಾಗ್ಲಿಲ್ವಾ? ಇದು ದಿಂಗಂತ್-ಐಂದ್ರಿತಾ ರೈ ನಟಿಸಿರುವ ’ಪಾರಿಜಾತ’ ಚಿತ್ರದ ಗೀತೆ ಅನ್ನಿಸ್ತಿದೆಯಾ? ರೈಟ್, ನಿಮ್ಮ ಅನಿಸಿಕೆ ಸರಿ. ಹೂವಿನ ಬಗ್ಗೆ ಹೇಳೋಕೆ ಹೊರಟವನು ಯಾಕೆ ಈ ಕವಿತೆ? ಅಲ್ಲೇ ಇದೆ ವಿಶೇಷ. ಈ ಕಥೆ ’ಪಾರಿಜಾತ’ದ ಸುತ್ತಲೇ ಇದೆ. ಅದೇ ಪಾರಿಜಾತ ಹೂವು. ಸಿನೆಮಾ, ಹಾಡು, ಕಥೆ, ನಾಟಕ, ಕಷಾಯ, ಪೂಜೆ ಎಲ್ಲೆಲ್ಲೂ ಈ ಪಾರಿಜಾತವೇ ಇದೆ. ಶ್ರೀ ಕೃಷ್ಣ ಪಾರಿಜಾತ ಎಂಬುದು ಉತ್ತರ ಕರ್ನಾಟಕದ ಜನಪ್ರಿಯ ಬೈಲಾಟಗಳಲ್ಲಿ ಒಂದು.

ಅದಿರಲಿ, ಪಾರಿಜಾತ ಹೂವಿನ ಬಗ್ಗೆ ಬರೋಣ. ಮೈತುಂಬಾ ಬಿಳಿ ಹೂವನ್ನು ಹೊದ್ದು ನಿಂತಿರುವ ಈ ಪಾರಿಜಾತ ಗಿಡವನ್ನು ನೀವೆಲ್ಲರೂ ನೋಡಿರುತ್ತೀರಿ. ನಿಮ್ಮ ಮನೆಯ ಹಿತ್ತಿಲಿನಲ್ಲೂ ಇರಬಹುದು. ಏಳೆಂಟು ಬಿಳಿ ಬಣ್ಣದ ಎಸಳುಗಳನ್ನು ಹೊಂದಿರುವ ಈ ಹೂವು ಬೀರುವ ಸುಘಂದವನ್ನು ಆಘ್ರಾಣಿಸಲು ನಿಂತರೆ ಸಮಯ ಸರಿದದ್ದೆ ಗೊತ್ತಾಗುವುದಿಲ್ಲ. ಹೂವೆಂದರೆ ಸಾಮಾನ್ಯವಾಗಿ ಬೆಳ್ಳಂಬೆಳಗ್ಗೆ ಅರಳಿ ನಿಂತಿರುತ್ತವೆ. ಆದರೆ ಪಾರಿಜಾತ ಹೂವು ಮಾತ್ರ ಇದಕ್ಕೆ ವಿರುದ್ಧ. ಸಂಜೆ ಸೂರ್ಯ ಮುಳುಗುವ ಸಮಯದಲ್ಲಿ ಪಾರಿಜಾತ ಹೂವು ಅರಳ ತೊಡಗುತ್ತವೆ. ಅದಕ್ಕೇ ಇದನ್ನು ನೈಟ್ ಬ್ಲೂಮಿಂಗ್ ಜಾಸ್ಮೀನ್ ಎಂದು ಕರೆಯುವುದು. ಸೂರ್ಯಾಸ್ತದ ಸಮಯದಲ್ಲಿ ಅರಳುವ ಹೂವು ಬೆಳಗಾಗುವುದರೊಳಗೆ ಉದುರಿ ಅಂಗಳದ ತುಂಬೆಲ್ಲಾ ರಂಗೋಲಿ ಹಾಕಿರುತ್ತದೆ.

ಈ ಹೂವಿಗೂ ಪುರಾಣಕ್ಕೂ ನಂಟಿದೆ. ಸಾಕ್ಷಾತ್ ಶ್ರೀ ಕೃಷ್ಣ ತನ್ನ ಪ್ರಿಯತಮೆ ಸತ್ಯಭಾಮೆಗೋಸ್ಕರ ಸ್ವರ್ಗದಿಂದ ಭೂಲೋಕಕ್ಕೆ ಪಾರಿ ಜಾತದ ವೃಕ್ಷವನ್ನು ತಂದಿದ್ದು ಪುರಾಣಗಳಲ್ಲಿ ಉಲ್ಲೇಖಿಸಲ್ಪಟ್ಟಿದೆ. ಇನ್ನೊಂದು ಕಥೆಯ ಪ್ರಕಾರ ಸಮುದ್ರ ಮಥನ ಕಾಲದಲ್ಲಿ ಕ್ಷೀರ ಸಾಗರದಿಂದ ಹುಟ್ಟಿ ಬಂದ ಐದು ವೃಕ್ಷಗಳ ಪೈಕಿ ಈ ಪಾರಿಜಾತ ವೃಕ್ಷವೂ ಒಂದೆಂದು ಹೇಳಲಾಗುತ್ತದೆ.

ಪಾರಿಜಾತದ ವೈಜ್ಞಾನಿಕ ಹೆಸರು ನೈಕ್ಟಾಂಥೆಸ್ ಆರ್ಬರ್-ಟ್ರಿಸ್ಟಿಸ್. ಇದು ಒಲಿಯಾಸೀ ಕುಟುಂಬಕ್ಕೆ ಸೇರಿದ್ದು. ಪಾರಿಜಾತವು ಒಂದು ಪೊದೆಸಸ್ಯ ಅಥವಾ ಸಣ್ಣ ಮರವಾಗಿದ್ದು, ೧೦ ಮೀ ಎತ್ತರಕ್ಕೆ ಬೆಳೆಯುತ್ತದೆ, ಚಪ್ಪಟೆ ಬೂದು ತೊಗಟೆ ಇರುತ್ತದೆ. ಒಂದಕ್ಕೊಂದು ವಿರುದ್ಧ ದಿಕ್ಕಿನಲ್ಲಿ ಬೆಳೆಯುವ ಇದರ ಎಲೆಗಳು ಸುಮಾರು ಆರರಿಂದ ಹನ್ನೆರಡು ಸೆಂಟಿಮೀಟರ್ ಉದ್ದ ಮತ್ತು ಎರಡರಿಂದ ಆರು ಸೆಂಟಿಮೀಟರ್ ಅಗಲವಾಗಿರುತ್ತವೆ. ಸುಮಾರು ಐದರಿಂದ ಎಂಟು ಪಕಳೆಗಳನ್ನು ಹೊಂದಿರುವ ಹೂವು ಬಿಳಿಯ ಬಣ್ಣದ್ದಾಗಿದ್ದು ಮಧ್ಯದಲ್ಲಿ ಕಿತ್ತಳೆ ಮತ್ತು ಕೆಂಪು ಬಣ್ಣವನ್ನು ಹೊಂದಿರುತ್ತದೆ. ಪಾರಿಜಾತ ಹೂವು ಪಶ್ಚಿಮ ಬಂಗಾಳದ ರಾಷ್ಟ್ರೀಯ ಹೂವಾಗಿದೆ. ಇಲ್ಲಿ ಇದನ್ನು ಪರಿಜಾತ್, ಶೆಫಾಲಿ ಮತ್ತು ಸಿಯುಲಿ ಎಂದೂ ಕರೆಯುತ್ತಾರೆ. ಬಿಹಾರದಲ್ಲಿ ಹರ್-ಶೃಂಗಾರ್, ಅಸ್ಸಾಮೀಸ್‌ನಲ್ಲಿ ಕ್ಸೆವಾಲೀ, ಶ್ರೀಲಂಕಾದಲ್ಲಿ ಇದನ್ನು ಸೆಪಾಲಿಕಾ, ಕೇರಳದಲ್ಲಿ ಪವಿಜಮಲ್ಲಿ-ಹೀಗೆ ಹಲವಾರು ಹೆಸರುಗಳಿಂದ ಕರೆಸಿಕೊಳ್ಳುವ ಪಾರಿಜಾತ ಜಮ್ಮು-ಕಾಶ್ಮೀರದಲ್ಲಿ, ಹಿಮಾಲಯ, ಅಸ್ಸಾಂನ ಪೂರ್ವ, ಬಂಗಾಳ, ತ್ರಿಪುರದಿಂದ ದಕ್ಷಿಣದ ಗೋದಾವರಿಯವರೆಗೆ ಕಂಡು ಬರುತ್ತದೆ. ಭಾರತ ಮಾತ್ರವಲ್ಲದೆ ಥೈಲ್ಯಾಂಡ್, ನೇಪಾಳ, ಇಂಡೋನೇಷ್ಯಾ ಮತ್ತು ಪಾಕಿಸ್ತಾನದಲ್ಲೂ ಪಾರಿಜಾತ ಹೂವುಗಳನ್ನು ಕಾಣಬಹುದು.

ಪೂಜೆಗಳಲ್ಲಿ ಬಳಸುವ ಶ್ರೇಷ್ಟ ಹೂವು ಪಾರಿಜಾತ. ದೇವರಿಗೆ ಅರ್ಪಿಸುವ ಎಲ್ಲ ಹೂವುಗಳನ್ನು ಗಿಡದಿಂದಲೇ ನೇರವಾಗಿ ಕೋಯ್ದು ತಂದರೆ, ಪಾರಿಜಾತವನ್ನು ಮಾತ್ರ ನೆಲದಲ್ಲಿ ಬಿದ್ದ ಮೇಲೆ ಆರಿಸಿಕೊಂಡು ಬಳಸುತ್ತಾರೆ.
ಈ ಪಾರಿಜಾತ ರೋಗಿಗಳ ಪಾಲಿಗೆ ಕಲ್ಪವೃಕ್ಷವೂ ಹೌದು. ಸಂಸ್ಕೃತದಲ್ಲಿ ಶೆಫಾಲಿಕಾ ಎಂದು ಕರೆಸಿಕೊಳ್ಳುವ ಹೂವು, ಎಲೆಗಳಲ್ಲಿ ಔಷಧೀಯ ಗುಣಗಳಿವೆ. ನಮ್ಮನ್ನು ಬೆಂಬಿಡದೆ ಕಾಡುವ ಕೀಲುನೋವಿಗೆ ಪಾರಿಜಾತದ ಎಲೆಗಳಿಂದ ತಯಾರಿಸಿದ ಕಷಾಯ ನೋವು ನಿವಾರಕವಾಗಿ ಕೆಲಸ ಮಾಡುತ್ತದೆ. ಮಲಬದ್ಧತೆಯಿಂದ ಬಳಲುವವರು ಕೂಡಾ ಈ ಕಷಾಯವನ್ನು ಉಪಯೋಗಿಸಬಹುದು.ಅಲ್ಲದೆ ಈ ಕಷಾಯದಿಂದ ಜಂತು ಹುಳು ಬಾಧೆ ಹಾಗೂ ಕೆಮ್ಮನ್ನು ಹತೋಟಿಗೆ ತರಬಹುದು. ಪಾರಿಜಾತದ ಬೀಜಗಳಿಂದ ಮಾಡಿದ ಔಷಧಿಯನ್ನು ಜಾಂಡೀಸ್ ನಿವಾರಣೆಯಲ್ಲಿ ಬಳಸಲಾಗುತ್ತದೆ. ಪಾರಿಜಾತದ ಎಲೆಯ ಪೇಸ್ಟ್ ಅನ್ನು ಸೌಂದರ್ಯವರ್ಧಕವಾಗಿಯೂ ಬಳಸಬಹುದು. ಪಾರಿಜಾತದ ಹೂವಿನ ಪರಿಮಳ ನಮ್ಮನ್ನು ಕಾಡುವ ತಲೆನೋವನ್ನು ಗಾಯಬ್ ಮಾಡುತ್ತದೆ. ಜೊತೆಗೆ ಪರಿಮಳ ಯುಕ್ತ ಹೂವನ್ನು ಸುಗಂಧ ದ್ರವ್ಯ ತಯಾರಿಕೆಯಲ್ಲೂ ಬಳಸುತ್ತಾರೆ. ಅಲ್ಲದೆ ನಮ್ಮನ್ನು ಕಾಡುವ ಅನೇಕ ತರಹದ ಜ್ವರವನ್ನು ಗುಣಪಡಿಸಲು ಪಾರಿಜಾತವನ್ನು ಬಳಸುತ್ತಾರೆ. ಅಲ್ಲದೆ ಇದು ಅಜೀರ್ಣ ಮತ್ತು ಮಲಬದ್ಧತೆಯಂತಹ ಕರುಳಿನ ಸಂಬಂಧಿತ ಕಾಯಿಲೆಗಳಿಗೆ ರಾಮಬಾಣ. ಉಫ್! ಪಾರಿಜಾತದ ಔಷಧೀಯ ಗುಣಗಳು ಇಷ್ಟಕ್ಕೇ ಮುಗಿಯುವುದಿಲ್ಲ. ಬರೆಯುತ್ತಾ ಹೋದರೆ ಇನ್ನೂ ಎರಡು ಮೂರು ವಾರಗಳೇ ಬೇಕಾಗಬಹುದು.
ಇಷ್ಟೆಲ್ಲಾ ಉಪಯೋಗವಿರುವ ಈ ಪಾರಿಜಾತ ಹೂವು ಎಲ್ಲಾ ಕಾಲದಲ್ಲೂ ಲಭ್ಯವಿರುವುದಿಲ್ಲ. ಕೇವಲ ಜುಲೈ ತಿಂಗಳಿನಿಂದ ನವೆಂಬರ್ ವರೆಗೆ ಮಾತ್ರ ಅರಳುವ ಈ ಹೂವಿನ ಗಿಡ ನಮ್ಮ ತೋಟದಲ್ಲಿ ಇದ್ದರೆ ನಮಗೇ ಒಳ್ಳೆಯದಲ್ಲವೇ?

Related Posts

  • All Post
  • ಇತರೆ
  • ಎಲೆ
  • ಕಾಯಿ
  • ಪಕ್ಷಿ
  • ಪ್ರಾಣಿ
  • ಬೇರು
  • ಸಸ್ಯ
  • ಹಣ್ಣು
  • ಹಾವು
  • ಹೂವು
ಬಹುಪಯೋಗಿ ಈ ಬಾಳೆ ಹೂವು!

16/07/2025/

ನಾವೆಲ್ಲ ದಿನನಿತ್ಯದ ಜೀವನದಲ್ಲಿ ಬಾಳೆಹಣ್ಣು, ಬಾಳೆ ಎಲೆಗಳನ್ನು ಉಪಯೋಗಿಸಿಯೇ ಇರುತ್ತೇವೆ. ಈ ಲೇಖನದಲ್ಲಿ ಬಾಳೆ ಹೂವಿನ ಬಗ್ಗೆ ವಿವರವಾಗಿ ತಿಳಿಯೋಣ. ಬಾಳೆ...

Leave a Reply

Your email address will not be published. Required fields are marked *

Follow Us

Best Camping Shoes

Popular Posts

Trending Posts

Categories

Tags

Edit Template

Copyright © 2025 Kadumanjari