ಶವದ ಹೂವುಗಳು.
ಹೌದು, ನೀವು ಓದುತ್ತಿರುವುದು ನಿಜ. ಶವದ ಹೂವುಗಳೇ… ಟೈಟನ್ ಅರುಮ್, ಅಮಾರ್ಫಾಲಸ್ ಮತ್ತು ರಾಪ್ಲೆಸಿಯಾ ಅರ್ನಾಲ್ಡಿ ಈ ಮೂರು ಹೂವುಗಳು ಶವದ ಹೂವುಗಳೆಂದು ಕರೆಯಲ್ಪಟ್ಟಿವೆ. ರಾಪ್ಲೆಸಿಯಾ ಅರ್ನಾಲ್ಡಿ ವಿಶ್ವದ ಅತಿದೊಡ್ಡ ಹೂವುಗಳಲ್ಲಿ ಒಂದೆನಿಸಿಕೊಂಡಿದೆ. ಇವು ಇಂಡೋನೇಷಿಯಾದ ಸುಮಾತ್ರಾ ಮತ್ತು ಬೊರ್ನಿಯಾದ ದಟ್ಟ ಮಳೆಕಾಡುಗಳಲ್ಲಿ ಅರಳುತ್ತವೆ. ವಿಶೇಷ ಅಂದರೆ ಇಂಡೋನೇಷಿಯಾದ ರಾಷ್ಟ್ರೀಯ ಹೂವುಗಳಲ್ಲಿ ಸ್ಥಾನ ಪಡೆದುಕೊಂಡಿದೆ. ಇದು ಅಲ್ಲಿಯ ಸಂರಕ್ಷಿತ ಹೂವಿನ ಪ್ರಬೇಧಗಳಲ್ಲಿಯೂ ಒಂದೆನಿಸಿದೆ.
ಇನ್ನು ರಾಪ್ಲೆಸಿಯಾ ಕೆಂಪು ಮತ್ತು ಕಂದು ಬಣ್ಣದ್ದಾಗಿದ್ದು, ಸುಮಾರು ೧೦೦ ಸೆಂಟಿಮೇಟರ್ ಅಗಲವಾಗಿರುತ್ತದೆ. ಅತಿ ಹೆಚ್ಚು ಅಂದರೆ ೧೦೫ ಸೆಂಟಿಮೀಟರ್‌ಗಳಷ್ಟು ಅಗಲದ ಹೂವುಗಳು ಕಂಡು ಬಂದಿವೆ. ರಾಪ್ಲೆಸಿಯಾ ಹೂವು ಐದು ದಳಗಳಿಂದ ಕೂಡಿದ್ದು, ಪ್ರತಿ ದಳವು ಸುಮಾರು ೩೦ ಸೆಂಟಿ ಮೀಟರ್‌ಗಳಷ್ಟು ಅಗಲವಿರುತ್ತವೆ. ಮಧ್ಯದಲ್ಲಿ ತಟ್ಟೆಯಾಕಾರದ ಒಂದು ಡಿಸ್ಕ್ ಥರ ಇರುತ್ತದೆ. ಅದರ ಮೇಲೆ ಇರುವ ಚೂಪಾದ ಮುಳ್ಳುಗಳಂತಹ ಆಕೃತಿ ಪರಾಗಸ್ಪರ್ಶಕ್ಕೆ ಸಹಕಾರಿಯಾಗಿರುತ್ತದೆ.
ರಾಪ್ಲೆಸಿಯಾ ಅರ್ನಾಲ್ಡಿ ಒಂದು ಪರಾವಲಂಬಿ ಹೂವು. ಇದು ಬೆಳೆಯಲು ನಾಳಿಯ ಸಸ್ಯಗಳನ್ನು ಅವಲಂಭಿಸಿದೆ. ವಿಚಿತ್ರ ಅಂದರೆ ರಾಪ್ಲೆಸಿಯಾ ಎಲೆ, ಕಾಂಡ, ಬೇರು ಯಾವುದನ್ನೂ ಹೊಂದಿರದ ಒಂದು ಹೂವೂ ಹೌದು, ಸಸ್ಯವೂ ಹೌದು. ಬೀಜದಿಂದ ಮೊಗ್ಗಾಗಿ ಬೆಳೆಯಲು ಇದು ಕೆಲವು ತಿಂಗಳುಗಳಿಂದ ವರ್ಷಗಟ್ಟಲೆ ತೆಗೆದುಕೊಂಡು ಕೆಲವು ದಿನಗಳಲ್ಲಿ ಹೂವಾಗಿ ಅರಳುತ್ತದೆ. ಆದರೆ ಅದೇ ಹೂವು ಕೆಲವೇ ಕೆಲವು ಅಂದರೆ ಒಂದು ವಾರಗಳಷ್ಟು ಮಾತ್ರ ಅರಳಿರುತ್ತವೆ. ನಂತರ ಕಪ್ಪು ಬಣ್ಣಕ್ಕೆ ತಿರುಗಿ ಕೊಳೆಯಲಾರಭಿಸುತ್ತವೆ.


ಅರಳಿದ ಹೂವು ಸುವಾಸನೆ ಬೀರಬೇಕಲ್ಲವೇ? ಆದರೆ ರಾಪ್ಲೆಸಿಯಾ ಇದಕ್ಕೆ ತದ್ವಿರುದ್ಧ. ಮೊಗ್ಗಿನಿಂದಲೇ ತನ್ನ ಸುತ್ತ ಯಾರೂ ಬರದಂತಹ ಕೆಟ್ಟ ದುರ್ನಾಥ ಬೀರುತ್ತದೆ. ಅದೂ ಎಂತಹ ವಾಸನೆ ಅಂತೀರಾ? ಕೊಳೆತ ಶವದಿಂದ ಬರುವ ಕೆಟ್ಟ ವಾಸನೆ. ಅದರಿಂದಾಗೇ ಇದಕ್ಕೆ ಶವದ ಹೂವು ಎಂಬ ಹೆಸರು ಬಂದಿದೆ.
ಇರಲಿ, ಇದರ ಸಂತಾನೋತ್ಪತ್ತ ಹೇಗಾಗಬಹುದು ಎಂಬ ಕುತೂಹಲ ಸಹಜ. ಅರಳಿದ ಹೂವಿನಲ್ಲಿ ತಟ್ಟೆಯಂತಹ ರಚನೆ ಆಗುತ್ತದೆ ಎಂದು ಹೇಳಿದೆನಲ್ಲವೇ? ಇದೇ ಪರಾಗಸ್ಪರ್ಶಕ್ಕೆ ಸಹಕಾರಿಯಾದ ಭಾಗ. ಈ ಹೂವಿನ ಸುತ್ತ ಯಾವುದೇ ಪಕ್ಷಿಗಳು ಸುತ್ತದಿದ್ದರೂ ನೊಣ, ಜೀರುಂಡೆಗಳಂತಹ ಕೀಟಗಳು ಈ ಹೂವಿನ ಆಕರ್ಷಣೆಗೆ ಒಳಗಾಗುತ್ತವೆ. ಈ ಕೀಟಗಳೇ ಪರಾಗ ಸ್ಪರ್ಶದ ವಾಹಕಗಳು. ಪರಾಗಸ್ಪರ್ಶದ ನಂತರ ಹಸಿಮಾಂಸದ ತರಹ ಗುಂಡಗಿನ ಹಣ್ಣಾಗುತ್ತದೆ. ಈ ಹಣ್ಣು ದೊಡ್ಡ ಮಟ್ಟದಲ್ಲಿ ಗಟ್ಟಿ ಕವಚ ಹೊಂದಿರುವ ಬೀಜಗಳನ್ನು ಹೊಂದಿರುತ್ತದೆ. ಈ ಬೀಜಗಳನ್ನು ಆಗ್ನೇಯ ಏಷ್ಯಾದ ಬೊರ್ನಿಯಾದಲ್ಲಿ ಕಂಡು ಬರುವ ಅಳಿಲಿನಂತಹ ಸಣ್ಣ ಸಸ್ತನಿಗಳು ತಿಂದು ಪರಿಸರದಲ್ಲಿ ಹರಡುತ್ತವೆ. ಇವೇ ಮತ್ತೆ ಮಳೆಗಾಲದಲ್ಲಿ ರೆಪ್ಲಿಸಿಯಾ ಮೊಗ್ಗುಗಳಾಗಿ ಹೂವಿನ ಹಂತ ತಲುಪುತ್ತವೆ.
ಇಷ್ಟು ದುರ್ಗಂಧ ಬೀರುವ ಹೂವಿನಿಂದ ಏನಾದರೂ ಉಪಯೋಗವಿದೆಯೇ ಎಂಬ ಸಂದೇಹ ಬರುವುದು ಸಹಜ. ಇದರಿಂದಲೂ ಉಪಯೋಗವಿದೆ. ಇದನ್ನು ಮಲೇಷ್ಯಾದಲ್ಲಿ ಮಹಿಳೆಯರು ಋತುಚಕ್ರದ ಸಮಯದಲ್ಲಿ ಆಗುವ ರಕ್ತಸ್ರಾವ ನಿಲ್ಲಿಸಲು ಹಾಗೂ ಹೆರಿಗೆಯ ನಂತರ ಗರ್ಭಕೋಶ ಕುಗ್ಗಿಸಲು ಇದನ್ನು ಔಷಧ ರೂಪದಲ್ಲಿ ಉಪಯೋಗಿಸುತ್ತಾರೆ. ಪುರುಷರೂ ಕೂಡಾ ಇದನ್ನು ಎನರ್ಜಿ ಡ್ರಿಂಕ್ಸ್ ಹಾಗೂ ಕಾಮೋತ್ತೇಜಕವಾಗಿ ಉಪಯೋಗಿಸುವುದುಂಟು. ಅಲ್ಲದೇ ಥಾಯ್ ಸನ್ಯಾಸಿಗಳೂ ಕೂಡಾ ಇದನ್ನು ವಿವಿಧ ರೀತಿಯಲ್ಲಿ ಉಪಯೋಗಿಸುತ್ತಾರೆಂಬ ಪ್ರತೀತಿಯಿದೆ.