ವರಾಹ ರೂಪಂ ದೈವ ವರಿಷ್ಟಂ
ವರಾಹ ರೂಪಂ ದೈವ ವರಿಷ್ಟಂ
ವರಸ್ಮಿತ ವದನಂ..
ವಜ್ರ ದಂತಧರ ರಕ್ಷಾ ಕವಚಂ|
ಕಾಂತಾರ ಸಿನೆಮಾದ ಈ ಹಾಡು ಇಲ್ಲೇಕೆ ಅಂತೀರಾ? ಹೌದು, ಈ ವಾರ ಹೇಳ ಹೊರಟಿರುವುದು ಇದೇ ವಿಷಯದ ಬಗ್ಗೆ.ಮೊದಲಿಗೆ ವಿಷ್ಣುವು ವರಾಹ ರೂಪ ತಳೆಯುವುದಕ್ಕೆ ಕಾರಣವಾದ ಒಂದು ಕಥೆಯನ್ನು ನೋಡೋಣ. ಬ್ರಹ್ಮನ ಪರಮ ಭಕ್ತನಾದ ಹಿರಣ್ಯಾಕ್ಷನು ಬ್ರಹ್ಮನಿಂದ ಒಂದು ವರ ಪಡೆದಿದ್ದ. ಅದರ ಪ್ರಕಾರ ಯಾವುದೇ ದೇವರು, ಮಾನವ, ಅಸುರ, ದೇವತಾ, ಪ್ರಾಣಿ ಅಥವಾ ಮೃಗ ಅವನನ್ನು ಕೊಲ್ಲುವುದಕ್ಕೆ ಸಾಧ್ಯವಿರಲಿಲ್ಲ. ಹಿರಣ್ಯಾಕ್ಷನು ತನ್ನ ಅಮರತ್ವದ ಮದದಲ್ಲಿ ಭೂಮಿಯ ಮೇಲಿನ ಜನರನ್ನು ಹಿಂಸಿಸಲು ಪ್ರಾರಂಭಿಸಿದ. ದೇವತೆಗಳಿಗೆ ಕಿರುಕುಳ ಕೊಡತೊಡಗಿದ. ಪ್ರಾಣ ಭಯದಿಂದ ದೇವತೆಗಳು ಭೂಮಿಯ ಮೇಲಿನ ಪರ್ವತಗಳಲ್ಲಿದ್ದ ಗುಹೆಗಳಲ್ಲಿ ಅಡಗಿ ಕುಳಿತರು. ಆಗ ಹಿರಣ್ಯಾಕ್ಷ ಭೂಮಿಯನ್ನು ಸಮುದ್ರದಲ್ಲಿ ಮುಳುಗಿಸಿದ. ಆ ಸಮಯದಲ್ಲಿ ಭೂಮಿಯ ಮೇಲೆ ಆಳ್ವಿಕೆ ನಡೆಸುತ್ತಿದ್ದ ಮನು ಮತ್ತು ಆತನ ಮಡದಿ ಶತರೂಪ ಬ್ರಹ್ಮನ ಮೊರೆ ಹೊಕ್ಕರು. ಈ ಸಂಕಷ್ಟದಿಂದ ಪಾರಾಗಲು ಬ್ರಹ್ಮ ವಿಷ್ಣುವಿನ ಸಹಾಯ ಯಾಚಿಸಲು ವಿಷ್ಣುವನ್ನು ಧ್ಯಾನಿಸತೊಡಗಿದ. ಈ ಸಮಯದಲ್ಲಿ ಬ್ರಹ್ಮನ ಮೂಗಿನ ಹೊಳ್ಳೆಯಿಂದ ಒಂದು ಸಣ್ಣ ಹಂದಿ ಹೊರ ಬಿದ್ದಿತು. ಅದು ಬೆಳೆದು ದೊಡ್ಡ ಪರ್ವತ ಗಾತ್ರ ಪಡೆಯಿತು. ಆ ಹಂದಿಯ ರೂಪದಲ್ಲಿದ್ದು ಬೇರೆ ಯಾರೂ ಅಲ್ಲ, ವರಾಹ ರೂಪದಲ್ಲಿದ್ದ ವಿಷ್ಣುವೇ ಆಗಿದ್ದ. ಪ್ರಾಣಿಯೂ ಅಲ್ಲದ, ಮಾನವನೂ ಅಲ್ಲದ, ಹಂದಿಯ ತಲೆ ಮತ್ತು ಮಾನವನ ರೂಪ ಹೊಂದಿದ್ದ ವಿಷ್ಣು ಹಿರಣ್ಯಾಕ್ಷನನ್ನು ಸಂಹರಿಸಿ, ಸಮುದ್ರದಲ್ಲಿ ಮುಳುಗಿದ್ದ ಭೂಮಿ (ಭೂದೇವಿ)ಯನ್ನು ರಕ್ಷಿಸಿದ.
ವಿಷ್ಣುವಿನ ದಶಾವತಾರಗಳಲ್ಲಿ ವರಾಹವತಾರವು ಮೂರನೇಯ ಅವತಾರವಾಗಿದೆ. ಕೂರ್ಮಾವತಾರದ ನಂತರ ಹಾಗೂ ನರಸಿಂಹಾವತಾರದ ಮೊದಲು ಬರುವ ಈ ವರಾಹವತಾರ ಪುರಾಣಗಳಲ್ಲಿ ವಿಶೇಷವಾದುದಾಗಿದೆ.
ಇರಲಿ, ಈಗ ವಾಸ್ತವಕ್ಕೆ ಬರೋಣ. ವರಾಹ ಎಂದರೆ ಕಾಡು ಹಂದಿ ಎಂದರ್ಥ. ನಾವೆಲ್ಲ ಹಂದಿ ಎಂದರೆ ಮುಖ ಕಿವುಚುತ್ತೇವೆ ಅಲ್ಲವೇ? ಕೊಳಚೆ ನೀರಿನಲ್ಲಿ, ಚರಂಡಿಯಲ್ಲಿ ಸದಾ ಹೊರಳಾಡುತ್ತ, ಮೈಗೆಲ್ಲ ಕೊಳಕು ಮೆತ್ತಿಕೊಂಡಿರುವ ಹಂದಿ ಎಂದರೆ ಅಸಹ್ಯ ಭಾವನೆ ಬರುವುದು ಸಾಮಾನ್ಯ. ಆದರೆ ನಿಜವಾಗಿಯೂ ಹಂದಿ ಕೊಳಕಲ್ಲ. ಹಂದಿ ಶುಚಿತ್ವಕ್ಕೆ ಹೆಸರುವಾಸಿ ಎಂದರೆ ನಂಬಲಾಗುವುದಿಲ್ಲ ಅಲ್ಲವೇ? ಹಂದಿಗಳು ಮಲಗುವ ಸ್ಥಳದಲ್ಲಿ ಮಲ ವಿಸರ್ಜನೆ ಸಹ ಮಾಡುವುದಿಲ್ಲವೆಂದರೆ ಆಶ್ಚರ್ಯವಾಗದೆ ಇರದು. ಮತ್ತೆ ಕೊಳಚೆಯಲ್ಲಿ ಹೊರಳಾಡುವುದು ಏಕೆ ಎಂಬ ಪ್ರಶ್ನೆ ಮೂಡದೆ ಇರದು. ವಾಸ್ತವವಾಗಿ ಹಂದಿಗಳು ಬೆವರು ಗ್ರಂಥಿಗಳನ್ನು ಹೊಂದಿರುವುದಿಲ್ಲ. ತಮ್ಮ ದೇಹದ ಉಷ್ಣತೆಯನ್ನು ಕಾಯ್ದುಕೊಳ್ಳಲು ಕೊಳಚೆ ನೀರಿನಲ್ಲಿ, ಚರಂಡಿ ಮುಂತಾದ ಜಾಗಗಳಲ್ಲಿ ಮಲಗುತ್ತವೆ. ಅಲ್ಲದೆ ಈ ರೀತಿ ಮಾಡುವುದರಿಂದ ಬಿಸಿಲಿನಿಂದ ತಮ್ಮ ಚರ್ಮಕ್ಕೆ ಹಾನಿಯಾಗುವುದನ್ನೂ ತಡೆಯುತ್ತವೆ.
ಇನ್ನು ಹಂದಿಗಳ ಬಗೆಗಿನ ಕೆಲವು ಇಂಟರೆಸ್ಟಿಂಗ್ ವಿಷಯಗಳನ್ನು ತಿಳಿಯೋಣ. ಹಂದಿಗಳು ಹಾಡುತ್ತವೆಯೆಂದರೆ ನೀವು ನಂಬುತ್ತೀರಾ? ನಿಜ, ಹೆಣ್ಣು ಹಂದಿಗಳು ತಮ್ಮ ಮರಿಗಳಿಗೆ ಹಾಲುಣಿಸುವಾಗ ಅಥವಾ ಆಹಾರ ನೀಡುವಾಗ ಹಾಡುತ್ತವೆ. ಏನು ಹಾಡುತ್ತವೆಯೋ ಅವುಗಳಿಗೇ ಗೊತ್ತು. ಅಲ್ಲದೆ ಹಂದಿಗಳು ಪರಸ್ಪರರ ನಡುವೆ ಸಂಭಾಷಣೆ ನಡೆಸಲು ಸುಮಾರು ಇಪ್ಪತ್ತು ಬಗೆಯ ಧ್ವನಿಗಳನ್ನು ಉಂಟು ಮಾಡುತ್ತವೆ. ಹಂದಿಗಳ ಇನ್ನೊಂದು ವಿಶೇಷ ಗುಣವೆಂದರೆ ಅವು ಎಂದಿಗೂ ಒಬ್ಬಂಟಿಯಾಗಿರಲು ಬಯಸುವುದಿಲ್ಲ. ಎಲ್ಲೇ ಹೋದರೂ ಒಟ್ಟಾಗಿ ಹೋಗುತ್ತವೆ. ಅವು ತಮ್ಮ ಮೂಗಿನ ಮೂಲಕ ಸುಮಾರು ೮೦೦ ಅಡಿಗಳ ದೂರದ ವಾಸನೆಯನ್ನು ಗೃಹಿಸಬಲ್ಲವು. ವಿಚಿತ್ರ ಎಂದರೆ ಹಂದಿಗಳು ತಮ್ಮ ತಲೆಯನ್ನು ೧೮೦ ಡಿಗ್ರಿ ವರೆಗೆ ತಿರುಗಿಸಬಲ್ಲವು. ಇಷ್ಟೇ ಅಲ್ಲದೆ, ಹಂದಿಗಳು ಸಾಧಾರಣವಾಗಿ ಅನಾರೋಗ್ಯಕ್ಕೊಳಗಾಗುವುದಿಲ್ಲ.

ಇತ್ತೀಚಿನ ದಿನಗಳಲ್ಲಿ ಹಂದಿ ಸಾಕಾಣಿಕೆ ಲಾಭದಾಯಕ ಉದ್ಯಮವಾಗಿ ಬೆಳೆದಿದೆ. ಹಂದಿಗಳಿಂದ ರೈತರಿಗೆ ಅನೇಕ ತೊಂದರೆಗಳಿರುವುದು ನಿಜವಾದರೂ, ಹಂದಿ ಸಾಕಾಣಿಕೆ ಲಾಭ ತರುವುದಂತೂ ಸುಳ್ಳಲ್ಲ.