ನಾವೆಲ್ಲ ದಿನನಿತ್ಯದ ಜೀವನದಲ್ಲಿ ಬಾಳೆಹಣ್ಣು, ಬಾಳೆ ಎಲೆಗಳನ್ನು ಉಪಯೋಗಿಸಿಯೇ ಇರುತ್ತೇವೆ. ಈ ಲೇಖನದಲ್ಲಿ ಬಾಳೆ ಹೂವಿನ ಬಗ್ಗೆ ವಿವರವಾಗಿ ತಿಳಿಯೋಣ.
ಬಾಳೆ ಹೂವು
ಬಾಳೆ ಹೂವುಗಳು ನಮಗೆ ಗೋಚರಿಸುವುದಕ್ಕೂ ಬಹಳ ಹಿಂದೆಯೇ ಬಾಳೆ ಗಿಡದ ಕಾಂಡದೊಳಗೆ ರೂಪುಗೊಳ್ಳುತ್ತವೆ. ನಂತರ ನಿಧಾನವಾಗಿ ಅಂದರೆ ಒಂದೆರಡು ವಾರದೊಳಗೆ ಹೊರ ಬರತೊಡಗುತ್ತವೆ. ಬಾಳೆ ಹೂವುಗಳು ದೊಡ್ಡದೊಡ್ಡ ಗುಲಾಬಿ ಬಣ್ಣದ ತೊಗಟೆಯ ಒಳಗೆ ಕಂಡು ಬರುತ್ತವೆ. ಇದನ್ನು ಬಾಳೆ ಕುಂಡಿಗೆ ಎಂದು ಕೆಲವು ಕಡೆಗಳಲ್ಲಿ ಕರೆಯುವುದಂಟು. ಕೆಂಪು ಅಥವಾ ಗುಲಾಬಿ ಬಣ್ಣದ ತೊಗಟೆ ಒಳಗೆ ಹೂವುಗಳು ಕೈಗಳು ಎಂದು ಕರೆಯಲ್ಪಡುವ ಗುಂಪುಗಳಲ್ಲಿ ಕಂಡುಬರುತ್ತವೆ. ಹೂವಿನ ತುದಿ ಸಾಮಾನ್ಯವಾಗಿ ಹಳದಿ ಬಣ್ಣ ಹೊಂದಿರುತ್ತದೆ. ಪ್ರತೀ ಹೂಗೊಂಚಲುಗಳೂ ಮುಂದೆ ಬಾಳೆ ಹಣ್ಣುಗಳಾಗಿ ಬೆಳೆಯುತ್ತವೆ. ಬಾಳೆಹೂವಿನಲ್ಲಿಯೂ ಉತ್ತಮ ಪೋಷಕಾಂಶಗಳಿವೆ. ಒಂದರ್ಥದಲ್ಲಿ ಹಣ್ಣು, ಎಲೆ ಮತ್ತು ದಿಂಡು ಗಳಲ್ಲಿರುವ ಎಲ್ಲಾ ಪೋಷಕಾಂಶಗಳು ಈ ಹೂವಿನಲ್ಲಿವೆ.
ಬಾಳೆ ಗಿಡದ ಬಹುತೇಕ ಭಾಗಗಳು ಉಪಯೋಗಕ್ಕೆ ಸಿಗುವಂತಹವೇ. ಬಾಳೆ ಹೂವು, ದಿಂಡು, ಕಾಯಿ ಹಾಗೂ ಹಣ್ಣುಗಳ ನಮ್ಮ ದಿನನಿತ್ಯದ ಆಹಾರದ ಒಂದು ಭಾಗವಂದರೆ ತಪ್ಪಾಗಲಾರದು. ನಮ್ಮ ದೇಹಕ್ಕೆ ಪೋಷಕಾಂಶಗಳು ಹೆಚ್ಚಿನ ಪ್ರಮಾಣದಲ್ಲಿ ಇವುಗಳಲ್ಲಿ ಅಡಕವಾಗಿವೆ. ಕರ್ನಾಕದಲ್ಲಷ್ಟೇ ಅಲ್ಲದೆ ಭಾರತದ ಹೆಚ್ಚಿನ ಭಾಗಗಳಲ್ಲಿ ಬಾಳೆ ಎಲೆಯನ್ನು ಊಟಕ್ಕೆ ಬಳಸುತ್ತಾರೆ. ಅಲ್ಲದೆ ಬಾಳೆ ಎಲೆಗಳು ಅನೇಕ ಪ್ರಾಣಿಗಳಿಗೆ ಆಹಾರವೂ ಹೌದು. ಬಾಳೆ ಕಾಯಿಯಿಂದ ಪಲ್ಯ, ಸಾಂಬಾರು, ಚಿಪ್ಸ್ ಹೀಗೆ ಅನೇಕ ಬಗೆಯ ಖಾದ್ಯಗಳ ತಯಾರಿಸುತ್ತಾರೆ.


ಉಪಯೋಗಗಳು
ಇನ್ನು ಬಾಳೆ ಹೂವನ್ನು ಅಡುಗೆಯಲ್ಲೂ ಸಹ ಬಳಸುತ್ತಾರೆ. ಬಾಳೆ ಕುಂಡಿಗೆ ಪಲ್ಯ, ಬಾಳೆ ಕುಂಡಿಗೆ ವಡಾ, ಬಾಳೆ ಕುಂಡಿಗೆ ಚಟ್ನಿ, ಬಾಳೆ ಹೂವಿನ ತೊಕ್ಕು, ಬಾಳೆ ಹೂವಿನ ಸಾರು, ಹೂವಿನ ಚಟ್ನಿ, ಬಾಳೆ ಹೂವಿನ ಚಿಪ್ಸ್ ಹೀಗೆ ನಮ್ಮ ದಿನನಿತ್ಯದ ಆಹಾರದಲ್ಲಿ ಬಾಳೆಹೂವು ಪ್ರಮುಖವಾಗಿರುತ್ತದೆ.
ಬಾಳೆ ಹೂವು ಅಡುಗೆಯಲ್ಲಷ್ಟೇ ಬಳಕೆಯಾಗದೆ ಅನೇಕ ಬಗೆಯ ಔಷಧೀಯ ಗುಣಗಳನ್ನು ಹೊಂದಿದೆ. ಬಾಳೆಹೂವಿನಲ್ಲಿ ಕರಗದ ನಾರು ಅತಿ ಹೆಚ್ಚಿನ ಪ್ರಮಾಣದಲ್ಲಿದ್ದು ಸುಲಭ ಜೀರ್ಣಕ್ರಿಯೆ ಮತ್ತು ವಿಸರ್ಜನೆಗೆ ಸಹಕಾರಿ. ಬಾಳೆಹೂವಿನಲ್ಲಿ ಪಾಲಿಫೆನಾಲ್ ಎಂಬ ಕಣಗಳಿದ್ದು ಇವುಗಳು ಉತ್ತಮ ಆಂಟಿ ಆಕ್ಸಿಡೆಂಟುಗಳಂತೆ ಕಾರ್ಯನಿರ್ವಹಿಸುತ್ತವೆ. ಅವು ದೇಹದಲ್ಲಿ ಕ್ಯಾನ್ಸರ್ ಉಂಟುಮಾಡಬಹುದಾದ ಕಣಗಳ ವಿರುದ್ದ ಹೋರಾಡಿ ವಿವಿಧ ಕ್ಯಾನ್ಸರ್‌ಗಳಿಂದ ರಕ್ಷಿಸುತ್ತದೆ. ಹಾಗೂ ಒತ್ತಡದಿಂದಾಗುವ ತೊಂದರೆಗಳಿಂದಲೂ ರಕ್ಷಿಸುತ್ತದೆ.
ಮಧುಮೇಹ, ಜಂತುಗಳಿಂದ ಉಂಟಾದ ಆಮಶಂಕೆ, ಅತಿಸಾರದ ತೊಂದರೆಗಳು ಬಾಳೆಹೂವಿನ ಸೇವನೆಯಿಂದ ಕಡಿಮೆಯಾ ಗುತ್ತವೆ. ಅಲ್ಲದೆ ಮಹಿಳೆಯರ ಮಾಸಿಕ ದಿನಗಳಲ್ಲಿ ಆಗುವ ಹೆಚ್ಚಿನ ರಕ್ತಸ್ರಾ ವವನ್ನು ತಡೆಯುತ್ತದೆ.
ಇಷ್ಟೇ ಅಲ್ಲದೆ ಬಾಳೆ ಹೂವುಗಳು ಹಲವು ಸೋಂಕುಗಳಿಂದ ನಮ್ಮನ್ನು ರಕ್ಷಿಸುವುದಲ್ಲದೆ, ಮೂತ್ರಪಿಂಡಗಳ ಕಾರ್ಯ ಸರಾಗವಾಗಿ ನಡೆಯುವಂತೆ ನೋಡಿಕೊಳ್ಳುತ್ತದೆ.


ಮ್ಯೂಸೇಸಿ ಕುಟುಂಬ
ಬಾಳೆಹಣ್ಣು ಸೇರಿದ ಕುಟುಂಬವನ್ನು ಮ್ಯೂಸೇಸಿ ಎಂದು ಕರೆಯಲಾಗುತ್ತದೆ. ಬಾಳೆ ಗಿಡವು ಒಂದು ಗಿಡಮೂಲಿಕೆಯಾಗಿದ್ದು, ಇದನ್ನು ಸಾಮಾನ್ಯವಾಗಿ ಮರ ಎಂದು ತಪ್ಪಾಗಿ ಗ್ರಹಿಸಲಾಗುತ್ತದೆ, ಅದರ ಗಾತ್ರ ಮತ್ತು ರಚನೆಯಿಂದಾಗಿ ಮರದಂತೆ ಕಾಣಿಸುತ್ತದೆ. ಬಾಳೆ ಗಿಡಗಳನ್ನು ಪ್ರಪಂಚದಾದ್ಯಂತದ ೧೩೫ ದೇಶಗಳಲ್ಲಿ ಬೆಳೆಯಲಾಗುತ್ತದೆ. ಬಾಳೆ ಮರಗಳು ಸಾಮಾನ್ಯವಾಗಿ ಉಷ್ಟವಲಯಗಳಲ್ಲಿ ಕಂಡು ಬರುತ್ತವೆ. ಬಾಳೆ ಗಿಡ ಬೆಳೆಯಲು ತೆವಾಂಶವಿರುವ ಮಣ್ಣು ಹಾಗು ನೀರು ಬೇಕು. ನೀರಿನ ಪ್ರಮಾಣ ಅಗತ್ಯಕ್ಕಿಂತ ಹೆಚ್ಚಾದರೆ ಗಿಡ ಬೇರು ಕೊಳೆತು ಹೋಗುತ್ತವೆ. ಅದರಿಂದ ಹದವಾದ ಮಣ್ಣು ಹಾಗು ನೀರು ಬಾಳೆ ಗಿಡಗಳ ಬೆಳವಣಿಗೆಯನ್ನು ನಿರ್ಧರಿಸುವುವು.
ಬಾಳೆಹಣ್ಣುಗಳನ್ನು ವೈನ್ ಮತ್ತು ಬಿಯರ್ ತಯಾರಿಯಲ್ಲೂ ಉಪಯೋಗಿಸಲಾಗುತ್ತದೆ.