ನಾಚಿಕೆ ಮುಳ್ಳಿಗೆ ನಾಚಿಕೆಯೇಕೆ?

ಮಿಮೊಸ ಪುಡಿಕಾ ಹೀಗಂದರೆ ಯಾರಿಗೂ ಗೊತ್ತಾಗಲ್ಲ ಅಲ್ವಾ? ಅದೇ, ನಾಚಿಕೆ ಮುಳ್ಳು ಅಥವಾ ಮುಟ್ಟಿದರೆ ಮುನಿ ಸಸ್ಯದ ವೈಜ್ಞಾನಿಕ ಹೆಸರು ಮಿಮೊಸ ಪುಡಿಕಾ. ನೀವೆಲ್ಲಾ ನೋಡಿರ‍್ತೀರಿ ಅಲ್ವಾ ಎಂದು ಕೇಳುವ ಅವಶ್ಯಕತೆಯೇ ಇಲ್ಲ. ಖಂಡಿತ ಎಲ್ಲರೂ ಇದನ್ನು ನೋಡಿ, ಇದರ ಮುಳ್ಳಿನಿಂದ ಗಾಯ ಮಾಡಿಕೊಂಡೇ ಇರ‍್ತೀರಿ. ತಥ್ ಇದರ ಎಂಬ ಬೈಗುಳವನ್ನು ಕೇಳಿ ಇದು ನಾಚಿಕೆಯಿಂದ ಮುದುಡಿಕೊಳ್ಳುತ್ತೆ ಅನ್ಸುತ್ತೆ. ಅಷ್ಟೊಂದು ಸೆನ್ಸಿಟಿವ್ ಗಿಡ ಇದು.

ನಾಚಿಕೆ ಮುಳ್ಳು ಬೆಳೆಯದ ಜಾಗವೇ ಇಲ್ಲ ಅನ್ನಬಹುದು. ಸಾಮಾನ್ಯವಾಗಿ ಜಗತ್ತಿನ ಎಲ್ಲಾ ಕಡೆಗಳಲ್ಲಿ ಇದು ತನ್ನ ಕಬಂದ ಬಾಹುವನ್ನು ಚಾಚಿಕೊಂಡಿದೆ ಅಂದರೆ ತಪ್ಪಾಗಲಾರದು. ಸದಾಕಾಲ ಹಚ್ಚ ಹಸುರಿನಿಂದ ಕಂಗೊಳಿಸುವ ಈ ನಾಚಿಕೆ ಮುಳ್ಳಿನ ತವರು ದಕ್ಷಿಣ ಮತ್ತು ಮಧ್ಯ ಅಮೇರಿಕಾ ತಪ್ಪಾಗಲಾರದು. ಅಷ್ಟೊಂದು ಪ್ರಮಾಣದಲ್ಲಿ ಈ ನಾಚಿಕೆ ಮುಳ್ಳು ಅಲ್ಲಿ ಬೆಳೆಯುತ್ತದೆ. ಇಂಗ್ಲೀಷಿನಲ್ಲಿ ಟಚ್ ಮಿ ನಾಟ್ ಎಂದು ಕರೆಸಿಕೊಳ್ಳುವ ಈ ಸಸ್ಯಕ್ಕೆ ಅನೇಕ ಹೆಸರುಗಳಿವೆ. ಮುಟ್ಟಿದರೆ ಮುಚಕ, ಮುಚ್ಗನ್ ಮುಳ್ಳು, ಪತಿವ್ರತೆ, ಮುಟ್ಟಿದರೆ ಮುನಿ, ಲಜ್ಜಾಲು, ಲಜ್ಜಾವತಿ, ಅಂಜಲೀ ಕಾರಿಕೆ, ತೋಟಲ್ಪಾಡಿ, ಮುನಗುಡ ಮಾರಮ, ಚುಯ್‌ಮುಯ್ ಎಂದು ಕರೆಸಿಕೊಳ್ಳುವ ಈ ಸಸ್ಯದ ಆಸಕ್ತಿಕರ ವಿಷಯವೆಂದರೆ ಮುಟ್ಟಿದೊಡನೆಯೇ ಮುದುಡಿಕೊಳ್ಳುವ ಗುಣ. ಹೌದು, ಈ ಸಸ್ಯಕ್ಕೆ ಯಾವುದೇ ವಸ್ತು ತಾಕಿದ ಕೂಡಲೇ ಎಲೆಗಳೆಲ್ಲ ಒಂದೊಂದಾಗಿ ಮುದುಡಲು ತೊಡಗುತ್ತವೆ. ತನ್ನ ಸ್ಪರ್ಶಕ್ಕೆ ಯಾವುದೇ ವಸ್ತು ಬಂದಾಕ್ಷಣ ಕ್ಷಣಾರ್ಧದಲ್ಲಿ ಮುದುಡಿಕೊಳ್ಳುವುದರ ಮೂಲ ಉದ್ದೇಶ ಶತ್ರುಗಳಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುವ ತಂತ್ರವಿರಬಹುದೇನೋ? ಈ ಗುಣ ಬೇರಾವುದೇ ಸಸ್ಯಗಳಲ್ಲಿ ಇಲ್ಲ.

ಹೆಚ್ಚಾಗಿ ಪಾಳುಬಿದ್ದ ಜಾಗದಲ್ಲಿ, ಹೊಲಗದ್ದೆಗಳ ಬದುವಿನಲ್ಲಿ, ತೋಟದಲ್ಲಿ ಹುಲುಸಾಗಿ ಬೆಳೆಯುವ ನಾಚಿಕೆ ಮುಳ್ಳು ಅಥವಾ ಟಚ್ ಮಿ ನಾಟ್ ಸಸ್ಯ ಒಂದು ದೀರ್ಘಾವಧಿ ಕಳೆ ಗಿಡವಾಗಿರುವ ಇದು ಬೇರುಗಳಿಂದ ಅಭಿವೃದ್ಧಿ ಹೊಂದುವುದರಿಂದ, ಕಳೆನಾಶಕಗಳನ್ನು ಸಿಂಡಿಸಿದರೂ ಮೇಲಿನ ಭಾಗ ಒಣಗಿದಂತಾಗಿ ಮತ್ತೆಮತ್ತೆ ಸಮಯ ನೋಡಿ ಭೂಮಿಯಿಂದ ಹೊರಗೆ ಇಣುಕುತ್ತವೆ. ಒಂದು ಗಿಡದಿಂದ ಒಂದು ವರ್ಷಕ್ಕೆ ಸುಮಾರು ಒಂದು ಲಕ್ಷ ಬೀಜ ಉತ್ಪತ್ತಿಯಾಗುತ್ತವೆ. ಬೀಜವೇ ಇಲ್ಲದೆ ಭೂಮಿಯೊಳಗೆ ಬೇರುಗಳು ಹಬ್ಬಿ ಬೆಳೆಯುವ ಈ ಗಿಡವು ತಿಳಿ ನೇರಳೆ ಬಣ್ಣದ ಆಕರ್ಷಕ ಹೂವು ಬಿಡುತ್ತದೆ. ಒಂದರಿಂದ ಎರಡು ಸೆಂಟಿಮೀಟರ್‌ಗಳಷ್ಟು ಸುತ್ತಳತೆ ಇರುವ ಈ ಗುಂಡಗಿನ ಹೂವು ಸಾಮಾನ್ಯವಾಗಿ ಗಿಡದ ತುದಿಯಲ್ಲಿರುತ್ತದೆ. ಈ ಸಸ್ಯದಲ್ಲಿ ಹೊರಮುಚಗ ಮತ್ತು ಒಳಮುಚುಗ ಎರಡು ವಿಧಗಳಿವೆ.

ಇನ್ನು ಈ ಗಿಡಗಳು ಮುಟ್ಟಿದರೆ ಮುನಿಯುವುದೇತಕ್ಕೆ? ಅವಕ್ಕೆ ನಾಚಿಕೆಯಾಗುತ್ತದೆಯೇ? ಖಂಡಿತ ಇಲ್ಲ. ಈ ಸಸ್ಯದ ಎಲೆಗಳ ಜೀವಕೋಶಗಳು ಸೂಕ್ಷ್ಮವಾಗಿದ್ದು, ಒತ್ತಡದಲ್ಲಿ ಸ್ವಲ್ಪವೇ ವ್ಯತ್ಯಾಸವಾದರೂ ಮಡಚಿಕೊಂಡು ಬಿಡುತ್ತೆ. ಈ ಗುಣವನ್ನು ಸಸ್ಯಶಾಸ್ತ್ರಜ್ಞರು ಇದನ್ನು ಡಿಫೆನ್ಸ್ ಮೆಕ್ಯಾನಿಸಮ್ ಎಂದು ಕರೆಯುತ್ತಾರೆ. ಹುಳು ಹುಪ್ಪಟೆಗಳಿಂದ, ಮೇಯಲು ಬಂದ ಪ್ರಾಣಿಗಳಿಂದ ತಪ್ಪಿಸಿಕೊಳ್ಳಲು ಎಲೆಗಳನ್ನು ಮಡಚಿಕೊಂಡರೆ ತನ್ನಲ್ಲಿರುವ ಮುಳ್ಳು ಆ ಪ್ರಾಣಿಗೆ ಚುಚ್ಚಿ ಪಾರಾಗಬಹುದು ಎಂಬುದು ಈ ಸಸ್ಯದ ಆಲೋಚನೆ! ಇದೊಂದು ಸಸ್ಯಲೋಕದ ವಿಸ್ಮಯವಲ್ಲದೆ ಇನ್ನೇನು?

ನಮ್ಮ ಪಾಲಿಗೆ ಇದೊಂದು ಕಳೆ ಗಿಡ, ಮುಳ್ಳು. ಆದರೆ ’ನಿನ್ನ ಮುಳ್ಳಿನಿಂದಾದ ಗಾಯ, ನಿನ್ನ ಎಲೆಗಳಿಂದಲೇ ಮಾಯ’ ಎಂಬಂತೆ ಈ ಸಸ್ಯದಲ್ಲಿ ಅನೇಕ ಔಷಧೀಯ ಗುಣಗಳಿವೆ. ಈ ಸಸ್ಯದ ಎಲ್ಲಾ ಭಾಗವೂ ನಮ್ಮ ಅನೇಕ ರೋಗಗಳನ್ನು ಗುಣಪಡಿಸುವ ಸಾಮರ್ಥ್ಯವನ್ನು ಹೊಂದಿವೆ. ಗಂಟಲು ಬಾವು ಅಥವಾ ದೇಹದ ಇತರ ಜಾಗದಲ್ಲಿ ರಕ್ತ ಹೆಪ್ಪುಗಟ್ಟಿರುವ ಜಾಗಗಳಿಗೆ ಈ ಸಸ್ಯದ ಎಲೆ ಮತ್ತು ಕಾಂಡವನ್ನು ಚೆನ್ನಾಗಿ ಅರೆದು ಹಚ್ಚುವುದರಿಂದ ಪರಿಹಾರ ಕಾಣಬಹುದು. ಮಂಡಿ ನೋವು, ಮಂಡಿ ಊತ, ಮಲಬದ್ಧತೆ, ಮೂತ್ರಪಿಂಡ ಹಾಗೂ ಲಿವರಿನ ತೊಂದರೆ ಇರುವವರು, ಈ ಸಸ್ಯದ ಎಲೆ ಮತ್ತು ಬೇರುಗಳನ್ನು ಚೆನ್ನಾಗಿ ತೊಳೆದು, ನಂತರ ಅರೆದು ಕುಡಿಯುವುದರಿಂದ ಈ ಮೇಲಿನ ತೊಂದರೆಗಳು ಉಪಶಮನವಾಗುತ್ತವೆ ಎನ್ನಲಾಗುತ್ತದೆ. ಗಾಯವಾಗಿ ರಕ್ತ ಸ್ರಾವ ಆಗುತ್ತಿದ್ದರೆ ಇದರ ಎಲೆಯನ್ನು ಬರುವ ರಸವನ್ನು ಗಾಯಗಳ ಮೇಲೆ ಹಚ್ಚಿದರೆ ರಕ್ತಸ್ರಾವ ನಿಲ್ಲುವುದಲ್ಲದೆ ಗಾಯ ಕೂಡಾ ಬೇಗನೆ ವಾಸಿಯಾಗುತ್ತದೆ. ಬಾಣಂತಿಯರು ನಾಚಿಕೆ ಮುಳ್ಳಿನ ಸೊಪ್ಪಿನ ರಸವನ್ನು ಪ್ರತಿನಿತ್ಯ ಹೊಟ್ಟೆಗೆ ಹಚ್ಚಿಕೊಳ್ಳುವುದರಿಂದ ಹೊಟ್ಟೆ ಕರಗಿ ಮೊದಲಿನಂತಾಗುತ್ತಾರೆ ಎಂಬ ಮಾತು ನಮ್ಮ ಹಳ್ಳಿಗಳಲ್ಲಿ ಕೇಳಿಬರುತ್ತದೆ.

ಅಲ್ಲದೆ ಈ ಸಸ್ಯದ ಎಲೆಗಳ ರಸವನ್ನು ಮೊಡವೆಗಳ ಮೇಲೆ ಹಚ್ಚಿಕೊಂಡರೆ ಕ್ರಮೇಣ ಮೊಡವೆಗಳು ಮಾಯವಾಗುತ್ತವೆ. ಋತುಚಕ್ರದ ಸಮಸ್ಯೆಯಿರುವ ಹೆಣ್ಣುಮಕ್ಕಳು ಈ ಸಸ್ಯವನ್ನು ಬೇರು ಸಮೇತ ಕಿತ್ತು, ಒಂದು ಲೋಟ ನೀರಿಗೆ ಹಾಕಿ ಕುದಿಸಿ ಕುಡಿದರೆ ಪರಿಣಾಮ ಕಾಣಬಹುದು. ಅಲ್ಲದೆ ಅತಿಸ್ರಾವದ ಸಮಸ್ಯೆಯಿರುವವರೂ ಕೂಡ ಇದನ್ನು ಸೇವಿಸುವುದು ಉತ್ತಮ. ಇಷ್ಟೆಲ್ಲಾ ಔಷಧೀಯ ಗುಣವಿರುವ ಈ ಸಸ್ಯದ ಮುಳ್ಳು ತಾಗಿದರೆ ಮಾತ್ರ ತಡೆಯಲಾರದ ನೋವು. ಆ ಜಾಗದಲ್ಲಿ ನಂಜೂ ಆಗಬಹುದು. ಆದರೆ ಇದರ ಎಲೆಯ ರಸದಲ್ಲೇ ನಂಜನ್ನು ನಿವಾರಿಸುವ ಗುಣವಿರುವುದರಿಂದ ಗಾಬರಿಪಡಬೇಕಾದ ಅವಶ್ಯಕತೆಯಿಲ್ಲ.

Related Posts

  • All Post
  • ಇತರೆ
  • ಎಲೆ
  • ಕಾಯಿ
  • ಪಕ್ಷಿ
  • ಪ್ರಾಣಿ
  • ಬೇರು
  • ಸಸ್ಯ
  • ಹಣ್ಣು
  • ಹಾವು
  • ಹೂವು
ಬಹುಪಯೋಗಿ ಈ ಬಾಳೆ ಹೂವು!

16/07/2025/

ನಾವೆಲ್ಲ ದಿನನಿತ್ಯದ ಜೀವನದಲ್ಲಿ ಬಾಳೆಹಣ್ಣು, ಬಾಳೆ ಎಲೆಗಳನ್ನು ಉಪಯೋಗಿಸಿಯೇ ಇರುತ್ತೇವೆ. ಈ ಲೇಖನದಲ್ಲಿ ಬಾಳೆ ಹೂವಿನ ಬಗ್ಗೆ ವಿವರವಾಗಿ ತಿಳಿಯೋಣ. ಬಾಳೆ...

Leave a Reply

Your email address will not be published. Required fields are marked *

Follow Us

Best Camping Shoes

Popular Posts

Trending Posts

Categories

Tags

Edit Template

Copyright © 2025 Kadumanjari