ಅಗ್ನಿಶಿಖೆ : ಅಮೃತ ಮತ್ತು ವಿಷದ ಸಂಗಮ!

ಔಷಧಯುಕ್ತ ವಿಷಕಾರಿ ಹೂವು. ಹೌದು… ಈ ಹೂವು ವಿಷಕಾರಿಯಾದರೂ ಭರಪೂರ ಔಷಧೀಯ ಗುಣಗಳನ್ನು ಒಳಗೊಂಡಿದೆ. ಆಯುರ್ವೇದ ತಜ್ಞರ ಮಾರ್ಗದರ್ಶನವಿಲ್ಲದೆ ಈ ಗಿಡದದಿಂದ ತಯಾರಿಸಿದ ಔಷಧಗಳನ್ನು ಸೇವಿಸಿದರೆ ಸಾವು ಖಚಿತ. ಇಂತಹ ವಿಷಕಾರಿ ಹೂವು ಯಾವುದೆಂದಿರಾ? ಅದೇ ಅಗ್ನಿಶಿಖೆ.

ತನ್ನ ಸೌಂದರ್ಯದಿಂದಲೇ ಎಲ್ಲರ ಕಣ್ಸೆಳೆಯುವ ಈ ಅಗ್ನಿಶಿಖೆಯ ಮುಲ ದಕ್ಷಿಣ ಆಫ್ರಿಕಾ. ಆದರೂ ಭಾರತ, ಮಲೆಷಿಯಾ, ಇಂಡೋ ನೇಷಿಯಾ ರಾಷ್ಟ್ರಗಳಲ್ಲಿ ಇದು ಹೆಚ್ಚಾಗಿ ಕಂಡು ಬರುತ್ತದೆ. ಇದು ಜಿಂಬಾಬ್ವೆಯ ರಾಷ್ಟ್ರೀಯ ಹೂವೂ ಹೌದು. ದೂರದ ಜಿಂಬಾಬ್ವೆ ಬಿಡಿ, ನಮ್ಮ ನೆರೆಯ ತಮಿಳುನಾಡಿನವರೂ ಸಹ ಈ ಹೂವನ್ನು ’ರಾಜ್ಯದ ಹೂವು’ ಎಂದು ಒಪ್ಪಿಕೊಂಡಿದ್ದಾರೆ.

ಈ ಹೂವಿನ ವೈಜ್ಞಾನಿಕ ಹೆಸರು ಗ್ಲೋರಿಯೊಸಾ ಸುಪರ್ಬಾ(gloriosa superba). ಕೊಲ್ಚಿಕೇಶಿಯ ಕುಟುಂಬಕ್ಕೆ ಸೇರಿದ ಇದನ್ನು ಇಂಗ್ಲೀಷಿನಲ್ಲಿ ಫ್ಲೇಮ್ ಲಿಲಿ, ಕ್ಲೈಂಬಿಂಗ್ ಲಿಲ್ಲಿ, ಕ್ರೀಪಿಂಗ್ ಲಿಲಿ, ಗ್ಲೋರಿ ಲಿಲಿ, ಗ್ಲೋರಿಯೊಸಾ ಲಿಲಿ, ಟೈಗರ್ ಕ್ಲಾವ್, ಮತ್ತು ಫೈರ್ ಲಿಲಿ ಎಂದೂ, ಸಂಸ್ಕೃತದಲ್ಲಿ ಅಗ್ನಿಮುಖಿ-ಅಗ್ನಿಶಿಖಾ ಎಂದು ಕರೆದರೆ ಕನ್ನಡದಲ್ಲಿ ಅಗ್ನಿಶಿಖೆ, ಶಿವರಕ್ತ ಬಳ್ಳಿ, ಗೌರಿ ಹೂವು, ಕರಡಿ ಕಣ್ಣಿನ ಹೂವು ಎಂದು ಕರೆಯುತ್ತಾರೆ.

gloriosa superba

ಗ್ಲೋರಿಯೊಸಾ ಸುಪರ್ಬಾ ನಿತ್ಯ ಹರಿದ್ವರ್ಣ ಕಾಡುಗಳು, ಹುಲ್ಲುಗಾವಲು, ಪಾಳು ಭೂಮಿಯ ಪೊದೆಗಳಲ್ಲಿ ಹೆಚ್ಚಾಗಿ ಬೆಳೆಯುತ್ತದೆ. ಅಲ್ಲದೆ ಮನೆಯಗಳ, ಹೂದೋಟಗಳಲ್ಲಿಯೂ ಅಲಂಕಾರಕ್ಕಾಗಿ ಬೆಳೆಯಬಹುದು. ಈ ಸಸ್ಯ ಸುಮಾರು ಹದಿನೈದರಿಂದ ಇಪ್ಪತ್ತು ಅಡಿಗಳಷ್ಟು ಎತ್ತರ ಬೆಳೆಯಬಲ್ಲವು. ಮೃದುವಾದ ಹಸಿರು ಕಾಂಡಗಳಿಂದ ಕೂಡಿದ್ದು, ತೊಟ್ಟುಗಳಿಲ್ಲದ ಎಲೆಗಳು ಕಾಂಡಕ್ಕೆ ಹೊಂದಿಕೊಂಡಿರುತ್ತವೆ. ಹತ್ತರಿಂದ ಹನ್ನೆರಡು ಸೆಂ.ಮೀ. ಉದ್ದ ಹಾಗೂ ಮೂರರಿಂದ ಐದು ಸೆ.ಮೀ. ಅಗಲದ ಶಂಖಾಕಾರದ ಎಲೆಗಳ ತುದಿ ಚೂಪಾಗಿದ್ದು ಸುರುಳಿಯಂತೆ ಸುತ್ತಿಕೊಂಡಿರುತ್ತದೆ. ಹೂವುಗಳು ನೀಳವಾದ ಹಸಿರು ತೊಟ್ಟುಗಳಲ್ಲಿ ಹಸಿರು, ಹಳದಿ, ಕೆಂಪು ಹಾಗೂ ಕಡು ನೀಲಿ ಬಣ್ಣದ ಹೂವುಗಳು ಅರಳುತ್ತವೆ. ನಂತರ ಕೆಂಪು ಮತ್ತು ಹಳದಿ ಬಣ್ಣಕ್ಕೆ ತಿರುಗಿ ಉರಿಯುವ ಜ್ವಾಲೆಯಂತೆ ಕಾಣತೊಡಗುತ್ತವೆ. ಅದರಿಂದಾಗಿಯೇ ಈ ಹೂವಿಗೆ ಅಗ್ನಿಶಿಖಾ ಎಂಬ ಹೆಸರು ಬಂದಿದೆ.

ಈ ಸಸ್ಯವು ಅತ್ಯಂತ ವಿಷಯುಕ್ತ ಸಸ್ಯ(Poisonous plants). ಇದರಲ್ಲಿರುವ ವಿಷದ ಕಾರಣದಿಂದಲೇ ಔಷಧ ತಯಾರಿಕೆಯಲ್ಲಿ ಬಳಸಲ್ಪಡುತ್ತದೆ.ಇದರ ಹೂವು, ಬೇರು, ಎಲೆ, ಚಿಗುರು, ಬೀಜ ಎಲ್ಲವೂ ಔಷದ ತಯಾರಿಕೆಯಲ್ಲಿ ಬಳಸಲ್ಪಡುತ್ತವೆ. ಬಂಜೆತನ, ಗಾಯಗಳು, ಹುಣ್ಣು, ಸಂಧಿವಾತ, ಮೂತ್ರಪಿಂಡದ ತೊಂದರೆಗಳು, ತುರಿಕೆ, ಕುಷ್ಠರೋಗ, ಮೂಲವ್ಯಾಧಿ, ಕ್ಯಾನ್ಸರ್ ಮುಂತಾದ ರೋಗಗಳು ಅಗ್ನಿಶಿಖೆಯಿಂದ ಗುಣಮುವಾಗುತ್ತವೆ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ. ಅಷ್ಟೇ ಅಲ್ಲದೆ ಕೆಲವು ಲೈಂಗಿಕ ರೋಗಗಳ ಚಿಕಿತ್ಸೆಯಲ್ಲಿಯೂ ಸಹ ಬಳಸಲಾಗುತ್ತದೆ. ಇದಲ್ಲದೆ ನೈಜೀರಿಯಾದ ಗುಡ್ಡಗಾಡು ಜನರು ಬಾಣಗಳಿಗೆ ಗ್ಲೋರಿಯೊಸಾ ಸುಪರ್ಬಾದಿಂದ ತಯಾರಿಸಿದ ವಿಷವನ್ನು ಹಚ್ಚುತ್ತಾರೆ.

ಸರ್ವ ರೋಗಗಳಿಗೂ ರಾಮಬಾಣವಾದ ಈ ಅಗ್ನಿಶಿಖೆಗೆ ಅನೇಕ ದೇಶಗಳಲ್ಲಿ ಬೇಡಿಕೆಯಿದೆ. ಈ ಕಾರಣಕ್ಕಾಗಿ ತಮಿಳುನಾಡಿನ ತಿರುಚಿ, ಕರೂರು, ಅರಿಯಲೂರು, ದಿಂಡಿಗಲ್, ನಾಮಕ್ಕಲ್, ಈರೋಡ್ ಮತ್ತು ಕೊಯಮತ್ತೂರು ಜಿಲ್ಲೆಗಳಲ್ಲಿ ಈ ಸಸ್ಯವನ್ನು ವ್ಯಾಪಕವಾಗಿ ಬೆಳೆಸಲಾಗುತ್ತದೆ.

ಹಾಗಾದರೆ ವಿಷಯುಕ್ತ ಈ ಅಗ್ನಿಶಿಖೆಯ ಹೂವು ದೇವರಿಗೆ ಅರ್ಪಿಸುವುದಿಲ್ಲ ಎಂದು ಭಾವಿಸಿದರೆ ಅದು ತಪ್ಪು. ತಮಿಳು ನಾಡಿನಲ್ಲಿ ಈ ಹೂವಿಲ್ಲದೆ ಮುರುಗನ ಪೂಜೆ ನಡೆಯುವುದೇ ಇಲ್ಲ ಅಂದರೂ ತಪ್ಪಾಗಲಾರದು. ಹಾ… ಕೊನೆಯಲ್ಲೊಂದು ನೆನಪಿಟ್ಟುಕೊಳ್ಳಬೇಕಾದ ವಿಷಯ. ಯಾವುದೇ ಕಾರಣಕ್ಕೂ ಅಗ್ನಿಶಿಖೆಯಿಂದ ತಯಾರಾದ ಔಷಧಗಳನ್ನು ತಜ್ಞರ ಸಲಹೆಯಿಲ್ಲದೆ ಉಪಯೋಗಿಸಲೇಬಾರದು.

Related Posts

  • All Post
  • ಇತರೆ
  • ಎಲೆ
  • ಕಾಯಿ
  • ಪಕ್ಷಿ
  • ಪ್ರಾಣಿ
  • ಬೇರು
  • ಸಸ್ಯ
  • ಹಣ್ಣು
  • ಹಾವು
  • ಹೂವು
ಬಹುಪಯೋಗಿ ಈ ಬಾಳೆ ಹೂವು!

16/07/2025/

ನಾವೆಲ್ಲ ದಿನನಿತ್ಯದ ಜೀವನದಲ್ಲಿ ಬಾಳೆಹಣ್ಣು, ಬಾಳೆ ಎಲೆಗಳನ್ನು ಉಪಯೋಗಿಸಿಯೇ ಇರುತ್ತೇವೆ. ಈ ಲೇಖನದಲ್ಲಿ ಬಾಳೆ ಹೂವಿನ ಬಗ್ಗೆ ವಿವರವಾಗಿ ತಿಳಿಯೋಣ. ಬಾಳೆ...

Leave a Reply

Your email address will not be published. Required fields are marked *

Follow Us

Best Camping Shoes

Popular Posts

Trending Posts

Categories

Tags

Edit Template

Copyright © 2025 Kadumanjari